ಸಾರಾಂಶ
ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಕೃತಕ ಸೃಷ್ಟಿಗಳನ್ನು ಮಾಡಿಕೊಡುವ ಚಾಟ್ ಜಿಪಿಟಿಯಲ್ಲಿ ಇದೀಗ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಆತಂಕ ಎದುರಾಗಿದೆ. ಘಿಬ್ಲಿ ಟ್ರೆಂಡ್‌ನಿಂದ ಭಾರೀ ಮೆಚ್ಚುಗೆ ಗಳಿಸಿದ್ದ ಓಪನ್ ಎಐನ ಸಂಸ್ಥೆಯ ವಿಶ್ವಾಸಾರ್ಹತೆ ವಿರುದ್ಧ ಜನರು ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಓಪನ್ ಎಐ ಸಂಸ್ಥೆಯ ಚಾಟ್ ಜಿಪಿಟಿ ಕೃತಕ ಬುದ್ಧಿಮತ್ತೆ ಆಧರಿಸಿ, ಬಳಕೆದಾರ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಮಾಧ್ಯಮವಾಗಿದ್ದು, ಚಿತ್ರಗಳನ್ನು ಸಹ ಇದು ಸೃಷ್ಟಿಸುತ್ತಿದೆ. ಇದರ ಜೊತೆಗೆ ಅನಿಮೇಷನ್ ಚಿತ್ರಗಳನ್ನು ತಯಾರಿಸುವುದಲ್ಲಿಯೂ ಇದು ಮುಂದಿದೆ. ಇದೇ ರೀತಿ ಫೋಟೋ, ಹೆಸರು, ವಿಳಾಸ ಹಂಚಿ, ಆಧಾರ್‌ಕಾರ್ಡ್, ಪಾನ್ ಕಾರ್ಡ್ ತಯಾರಿಸು ಎಂದು ಸೂಚನೆ ಕೊಟ್ಟರೆ ಚಾಟ್‌ಜಿಪಿಟಿ ಅವುಗಳನ್ನು ತಯಾರಿಸಲಿದೆ. ಜೊತೆಗೆ ತನ್ನದೇ ಆದ ಸಂಖ್ಯೆಯನ್ನೂ ಸಹ ನೀಡಲಿದೆ.
ಇದೇ ರೀತಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫುಟ್‌ಬಾಲ್ ಪಟು ಕ್ರಿಸ್ಟಿಯಾನೋ ರೊನಾಲ್ಡೋ, ಭಾರತದ ವಿಜ್ಞಾನಿ ಆರ್ಯಭಟ ಸೇರಿ ಹಲವರು ನಕಲಿ ಆಧಾರ್ ಪಾನ್‌ಕಾರ್ಡ್‌ಗಳನ್ನು ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇವುಗಳಿಗೆ ಆಧಾರ್, ಪಾನ್‌ನ ಮಾದರಿಯನ್ನು ಅಳವಡಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಮಾಲೇಗಾಂವ್ ಸ್ಫೋಟದ ಜಡ್ಜ್ ದಿಢೀರ್ ವರ್ಗ
- ತೀರ್ಪು ಹೊರಬೀಳುವ ಕೆಲ ದಿನ ಮುನ್ನ ವರ್ಗಾವಣೆ
ಮುಂಬೈ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ 2008ರ ಮಹಾರಾಷ್ಟ್ರದ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿದ್ದ ಎನ್‌ಐಎ ಕೋರ್ಟ್ ನ್ಯಾಯಾಧೀಶ ಎ.ಕೆ.ಲಹೋಟಿ ಅವರನ್ನು ನಾಸಿಕ್ ಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ.
ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದ ತೀರ್ಪು ಶೀಘ್ರ ಹೊರಬೀಳಲಿದೆ ಎನ್ನುವಾಗಲೇ ಅವರ ವರ್ಗಾವಣೆಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.
ರದ್ದತಿಗೆ ಆಗ್ರಹ:
ಲಹೋಟಿ ಅವರ ವರ್ಗಾವಣೆಯಿಂದ ಪ್ರಕರಣದ ತೀರ್ಪು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸ್ಫೋಟದಲ್ಲಿ ಮೃತಪಟ್ಟವರ ಸಂತ್ರಸ್ತರು ಲಹೋಟಿ ಅವರ ಅವಧಿಯನ್ನು ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರಿಗೆ ವಿಸ್ತರಿಸುವಂತೆ ಮನವಿ ಮಾಡಲು ನಿರ್ಧರಿಸಿದ್ದಾರೆ.ಸುಮಾರು 17 ವರ್ಷಗಳಷ್ಟು ಹಳೆಯ ಈ ಸ್ಫೋಟ ಪ್ರಕರಣದಲ್ಲಿ ಆರು ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಮುಂಬೈ ಸಮೀಪದ ಮಾಲೇಗಾಂವ್ ಪ್ರದೇಶದಲ್ಲಿ ಬೈಕ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಿಸಿ ಈ ದುರಂತ ಸಂಭವಿಸಿತ್ತು. ಬಿಜೆಪಿ ನಾಯಕಿ ಪ್ರಜ್ಞಾ ಠಾಕೂರ್, ಲೆ.ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಇತರೆ ಐವರ ವಿರುದ್ಧ ಸ್ಫೋಟದ ಆರೋಪ ಹೊರಿಸಲಾಗಿದೆ.
ನೌಕರರಿಗೆ ನಾಯಿ ರೀತಿ ತೆವಳುವ ಶಿಕ್ಷೆ!
ಕೊಚ್ಚಿ: ಕೇರಳದ ಕೊಚ್ಚಿಯ ಖಾಸಗಿ ಮಾರ್ಕೆಟಿಂಗ್ ಕಂಪನಿಯಲ್ಲಿ ಗುರಿ ಸಾಧಿಸಲು ವಿಫಲರಾದ ಉದ್ಯೋಗಿಗಳಿಗೆ ಅಮಾನವೀಯ ಕಿರುಕುಳ ನೀಡಲಾಗಿದೆ. ಅವರ ಕತ್ತಿಗೆ ಸರಪಳಿ ಬಿಗಿದು ಮಂಡಿ ಮೇಲೆ ನಾಯಿಗಳಂತೆ ತೆವಳುವ ಮತ್ತು ನೆಲದ ಮೇಲೆ ಬಿದ್ದ ನಾಣ್ಯಗಳನ್ನು ನೆಕ್ಕುವ ಶಿಕ್ಷೆ ವಿಧಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಕಾರ್ಮಿಕ ಇಲಾಖೆ ಕಂಪನಿಯ ವಿರುದ್ಧ ತನಿಖೆಗೆ ಆದೇಶಿಸಿದೆ.
‘ಕಂಪನಿಯ ಗುರಿಗಳನ್ನು ಸಾಧಿಸುವಲ್ಲಿ ವಿಫಲರಾದವರಿಗೆ ಆಡಳಿತ ಮಂಡಳಿ ಅಂತಹ ಶಿಕ್ಷೆಗಳನ್ನು ವಿಧಿಸುತ್ತದೆ’ ಎಂದು ಕೆಲ ಉದ್ಯೋಗಿಗಳು ತಿಳಿಸಿದ್ದಾರೆ. ಆದರೆ, ಇನ್ನೋರ್ವ ಉದ್ಯೋಗಿ ‘ಈ ಹಿಂದೆ ಕಂಪನಿಯಲ್ಲಿ ವ್ಯವಸ್ಥಾಪಕರಾಗಿದ್ದವರು ಉದ್ಯೋಗಿಗಳನ್ನು ಈ ರೀತಿ ನಡೆಸಿಕೊಂಡಿದ್ದರು. ಅವರನ್ನು ವಜಾಗೊಳಿಸಲಾಗಿದೆ. ಅದೇ ಸಿಟ್ಟಿಗೆ ಕಂಪನಿಗೆ ಕೆಟ್ಟ ಹೆಸರು ತರಲು ಈಗ ಹಳೆಯ ವಿಡಿಯೋ ವೈರಲ್ ಮಾಡಿದ್ದಾರೆ’ ಎಂದಿದ್ದಾರೆ.ಘಟನೆ ಕುರಿತು ಕಾರ್ಮಿಕ ಸಚಿವ ಶಿವನ್‌ಕುಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತನಿಖೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸೂಚಿಸಿದ್ದಾರೆ.