ಸೇವೆಯನ್ನು ಒದಗಿಸುವ ಮೊದಲು ಆಧಾರ್‌ ಕಾರ್ಡ್‌ ಧೃಡೀಕರಿಸಲು ಖಾಸಗಿ ಕಂಪನಿಗಳಿಗೂ ಸರ್ಕಾರ ಅನುಮತಿ

| N/A | Published : Feb 01 2025, 12:01 AM IST / Updated: Feb 01 2025, 05:19 AM IST

ಸಾರಾಂಶ

ಆಧಾರ್‌ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ, ಖಾಸಗಿ ಕಂಪನಿಗಳು ತಮ್ಮ ಸೇವೆಯನ್ನು ಒದಗಿಸುವ ಮೊದಲು ಫಲಾನುಭವಿಗಳ ಆಧಾರ್‌ ಕಾರ್ಡ್‌ಅನ್ನು ಧೃಡೀಕರಿಸಲು ಸರ್ಕಾರ ಅನುಮತಿ ನೀಡಿದೆ.

ನವದೆಹಲಿ: ಆಧಾರ್‌ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ, ಖಾಸಗಿ ಕಂಪನಿಗಳು ತಮ್ಮ ಸೇವೆಯನ್ನು ಒದಗಿಸುವ ಮೊದಲು ಫಲಾನುಭವಿಗಳ ಆಧಾರ್‌ ಕಾರ್ಡ್‌ಅನ್ನು ಧೃಡೀಕರಿಸಲು ಸರ್ಕಾರ ಅನುಮತಿ ನೀಡಿದೆ. ಉತ್ತಮ ಆಡಳಿತಕ್ಕಾಗಿ ಆಧಾರ್‌ ಧೃಡೀಕರಣ (ಸಮಾಜ ಕಲ್ಯಾಣ, ನಾವೀನ್ಯತೆ, ಜ್ಞಾನ) ತಿದ್ದುಪಡಿ ನಿಯಮ, 2025ರ ಅಡಿಯಲ್ಲಿ ಕಾಯ್ದೆಯ ಸೆಕ್ಷನ್‌ 57ರ ಅಡಿಯಲ್ಲಿ ಈ ಸೌಲಭ್ಯವನ್ನು ನೀಡಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

‘ಸಚಿವಾಯಲಗಳು ಅಥವಾ ಸರ್ಕಾರದ ಇಲಾಖೆಗಳನ್ನು ಹೊರತುಪಡಿಸಿ ಆಧಾರ್‌ ಧೃಡೀಕರಣ ಮಾಡಬಯಸುವವರು 3ನೇ ನಿಯಮದ ಪ್ರಕಾರ ಈ ಸೌಲಭ್ಯ ತಮಗೆ ಯಾಕೆ ಬೇಕು ಎಂಬ ಬಗ್ಗೆ ಸಮರ್ಥನೆ ನೀಡಿ, ಸಂಬಂಧ ಪಟ್ಟ ಇಲಾಖೆ/ ಸಚಿವಾಲಯಕ್ಕೆ ಮನವಿ ಸಲ್ಲಿಸಬೇಕು’ ಎಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

ಹೀಗೆ ಸಲ್ಲಿಸಲಾದ ಪ್ರಸ್ತಾವನೆಯು ನಿಯಮ 3ರಕ್ಕೆ ಹಾಗೂ ದೇಶದ ಹಿತಾಸಕ್ತಿಗೆ ಅನುಗುಣವಾಗಿದೆಯೇ ಎಂಬುದನ್ನು ಆ ಇಲಾಖೆ/ಸಚಿವಾಲಯ ಪರಿಶೀಲಿಸಿ, ಕೇಂದ್ರದ ಶಿಫಾರಸಿನೊಂದಿಗೆ ರವಾನಿಸುವುದು. ಇದನ್ನು ಯುಐಡಿಎಐ ಪರಿಶೀಲನೆಯ ಬಳಿಕ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಅನುಮೋದಿಸುವುದು ಎಂದು ತಿಳಿಸಲಾಗಿದೆ. 

ವಿರೋಧಿಸಿದ್ದ ಸುಪ್ರೀಂ:ಖಾಸಗಿ ಕಂಪನಿಗಳಿಗೆ ಆಧಾರ್‌ ಧೃಡೀಕರಿಸಲು ಅನುಮತಿಸಿದರೆ ಅದನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ ಎಂದು ಸುಪ್ರೀಂ ಕೋರ್ಟ್‌ 2018ರಲ್ಲಿ ಸೆಕ್ಷನ್‌ 57ರ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.