ಇತ್ತೀಚೆಗೆ ನಡೆದಿದ್ದ ಉದ್ಯಮಿಯನ್ನು ಬೆದರಿಸಿ ಜಿಎಸ್‌ಟಿ ಅಧಿಕಾರಿಗಳಿಂದ ಒಂದೂವರೆ ಕೋಟಿ ರುಪಾಯಿ ಹಣ ಸುಲಿಗೆ ಪ್ರಕರಣ ಸಂಬಂಧ ಉದ್ಯಮಿ ಸ್ನೇಹಿತ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಇತ್ತೀಚೆಗೆ ನಡೆದಿದ್ದ ಉದ್ಯಮಿಯನ್ನು ಬೆದರಿಸಿ ಜಿಎಸ್‌ಟಿ ಅಧಿಕಾರಿಗಳಿಂದ ಒಂದೂವರೆ ಕೋಟಿ ರುಪಾಯಿ ಹಣ ಸುಲಿಗೆ ಪ್ರಕರಣ ಸಂಬಂಧ ಉದ್ಯಮಿ ಸ್ನೇಹಿತ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸುಂಕದಕಟ್ಟೆಯ ಪ್ರಕಾಶ್ ಜೈನ್ ಹಾಗೂ ಶ್ರೀನಗರದ ಮುಕೇಶ್ ಕುಮಾರ್ ಜೈನ್ ಬಂಧಿತರಾಗಿದ್ದು, ಆರೋಪಿಗಳಿಂದ ₹69 ಲಕ್ಷ ನಗದು ಹಾಗೂ 306 ಗ್ರಾಂ ಚಿನ್ನದ ಗಟ್ಟಿಯನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಹಣಕಾಸು ಅವ್ಯವಹಾರ ಶಂಕೆ ಮೇರೆಗೆ ಶೋಧನೆ ನಡೆಸುವ ನೆಪದಲ್ಲಿ ಜೀವನ್ ಭೀಮಾ ನಗರದ ಮೆಕ್ಸೋ ಕಂಪನಿಯ ಪಾಲುದಾರ ಕೇಶವ್ ತಕ್ ಹಾಗೂ ಅವರ ಸಹೋದ್ಯೋಗಿಗಳನ್ನು ಅಕ್ರಮ ಬಂಧನದಲ್ಲಿಟ್ಟು ಒಂದೂವರೆ ಕೋಟಿ ರುಪಾಯಿ ಹಣ ಸುಲಿಗೆ ಮಾಡಿದ ಆರೋಪದ ಮೇರೆಗೆ ನಾಲ್ವರು ಜಿಎಸ್‌ಟಿ ಅಧಿಕಾರಿಗಳನ್ನು ಸಿಸಿಬಿ ಬಂಧಿಸಿತು.

ಈ ಪ್ರಕರಣದಲ್ಲಿ ಉದ್ಯಮಿ ಕೇಶವ್ ತಕ್ ಅವರಿಂದ ಅಧಿಕಾರಿಗಳ ಪರವಾಗಿ ಹವಾಲಾ ಮೂಲಕ ಆರೋಪಿಗಳು ಹಣ ಸ್ವೀಕರಿಸಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅಲ್ಲದೆ ಕೇಶವ ತಕ್‌ ಕುರಿತು ಈ ಇಬ್ಬರು ಕೊಟ್ಟಿದ್ದ ಮಾಹಿತಿ ಆಧರಿಸಿ ಬಂಧಿತ ಜಿಎಸ್‌ಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಆದರೆ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ತಾಂತ್ರಿಕ ಮಾಹಿತಿ ಆಧರಿಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೊತೆಯಲ್ಲಿದ್ದೇ ಖೆಡ್ಡಾ ತೋಡಿದ್ದ ಸ್ನೇಹಿತ

ಸುಂಕದ ಕಟ್ಟೆಯಲ್ಲಿ ಚಿನ್ನಾಭರಣ ಮಳಿಗೆ ಹೊಂದಿದ್ದ ಮುಕೇಶ್‌ ಜೈನ್‌, ಹಲವು ದಿನಗಳಿಂದ ಹವಾಲಾ ದಂಧೆಯಲ್ಲಿ ಸಹ ಸಕ್ರಿಯವಾಗಿದ್ದ. ತನ್ನ ದಂಧೆಗಳ ರಕ್ಷಣೆಗೆ ಜಿಎಸ್‌ಟಿ ಅಧಿಕಾರಿಗಳಿಗೆ ಆತ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಶ್ರೀನಗರದಲ್ಲಿ ಚಿನ್ನಾಭರಣ ಮಳಿಗೆ ಹೊಂದಿದ್ದ ಪ್ರಕಾಶ್ ಜೈನ್ ಸಾಥ್ ಕೊಟ್ಟಿದ್ದ ಎಂದು ತಿಳಿದು ಬಂದಿದೆ.

ಜೆ.ಬಿ.ನಗರದ ಉದ್ಯಮಿ ಕೇಶವ್ ಜತೆ ಮುಕೇಶ್ ಸ್ನೇಹವಿದ್ದು, ಗೆಳೆಯನ ಹಣಕಾಸುವ ವ್ಯವಹಾರಗಳ ಕುರಿತು ಆತನಿಗೆ ಮಾಹಿತಿ ಇತ್ತು. ಹೀಗಾಗಿ ಕೇಶವ್‌ ಮನೆ ಮೇಲೆ ದಾಳಿ ನಡೆಸಿದರೆ ಸುಲಭವಾಗಿ ಹಣ ವಸೂಲಿ ಮಾಡಬಹುದು ಎಂದು ಜಿಎಸ್‌ಟಿ ಅಧಿಕಾರಿಗಳಿಗೆ ಮುಕೇಶ್‌ ಮಾಹಿತಿ ರವಾನಿಸಿದ್ದ ಎನ್ನಲಾಗಿದೆ. ಈ ಮಾಹಿತಿ ಆಧರಿಸಿ ಕೇಶವ್ ಮನೆ ಮೇಲೆ ಜಿಎಸ್‌ಟಿ ಅಧಿಕಾರಿಗಳು ನಡೆಸಿದ್ದರು. 

ಆ ವೇಳೆ ಗೆಳೆಯನ ಮನೆಯಲ್ಲಿ ಮುಕೇಶ್ ಕೂಡ ಇದ್ದ. ಅಲ್ಲದೆ ಕೇಶವ್ ಜತೆ ಆತನನ್ನು ಸಹ ಅಕ್ರಮ ಬಂಧನದಲ್ಲಿಟ್ಟು ಅಧಿಕಾರಿಗಳು ವಸೂಲಿ ಮಾಡಿದ್ದರು. ಈ ಕೃತ್ಯದ ತನಿಖೆಗಿಳಿದ ಪೊಲೀಸರಿಗೆ ಮೊಬೈಲ್ ಕರೆಗಳ ಮಾಹಿತಿ (ಸಿಡಿಆರ್‌) ಪರಿಶೀಲಿಸಿದಾಗ ಆರೋಪಿತ ಅಧಿಕಾರಿಗಳ ಜತೆ ಮುಕೇಶ್ ನಂಟು ಪತ್ತೆಯಾಗಿದೆ. ಈ ಸುಳಿವು ಆಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ ಎಂದು ಮೂಲಗಳು ಹೇಳಿವೆ.