ಸಾರಾಂಶ
ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳವು ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೋಮೇಶ್ವರನಗರ ನಿವಾಸಿ ಸೈಯದ್ ಇಮ್ತಿಯಾಜ್(28) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು. ಆರೋಪಿಗಳಿಂದ 6.50 ಲಕ್ಷ ರು. ಮೌಲ್ಯದ 53 ಗ್ರಾಂ ಚಿನ್ನಾಭರಣ ಹಾಗೂ ಮೂರು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ವಿಶ್ವಪ್ರಿಯಾ ಲೇಔಟ್ ನಿವಾಸಿಯೊಬ್ಬರ ಮನೆಯ ಬೀಗ ಮುರಿದು ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಪರಪ್ಪನ ಅಗ್ರಹಾರದ ಬಾಷ್ ಕಂಪನಿ ಬಳಿ ಸೈಯದ್ ಇಮ್ತಿಯಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮನೆಗಳವು ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಅಡವಿರಿಸಿದ್ದ ಆಭರಣ ವಶ:
ಹೆಚ್ಚಿನ ವಿಚಾರಣೆ ವೇಳೆ ಅಪ್ರಾಪ್ತ ಬಾಲಕನೊಂದಿಗೆ ಸೇರಿಕೊಂಡು ಮಡಿವಾಳ, ಬೇಗೂರು, ಹುಳಿಮಾವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳವು ಹಾಗೂ ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆರೋಪಿ ನೀಡಿದ ಮಾಹಿತಿ ಮೇರೆಗೆ ಕಾಟನ್‌ಪೇಟೆಯ ಮುತ್ತೂಟ್ ಗೋಲ್ಡ್ ಫೈನಾನ್ಸ್ ಹಾಗೂ ಜುವೆಲರಿ ಅಂಗಡಿಯಲ್ಲಿ ಅಡಮಾನವಿರಿಸಿದ್ದ 53 ಗ್ರಾಂ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ತನಿಖೆ ಮುಂದುವರಿಸಿ ಲಾಲ್‌ಬಾಗ್ ಬಳಿ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮನೆಗಳವು ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನಿಂದ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಬೇಗೂರು, ಮಡಿವಾಳ, ಹಲಸೂರು ಗೇಟ್, ಹುಳಿಮಾವು ಠಾಣೆಯಲ್ಲಿ ದಾಖಲಾಗಿದ್ದ ಆರು ಅಪರಾಧ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
)
)
)
;Resize=(128,128))
;Resize=(128,128))
;Resize=(128,128))