ಸಾರಾಂಶ
ಬೆಂಗಳೂರು : ಸಿಮೆಂಟ್ ಮಿಕ್ಸರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮೃತಪಟ್ಟು, ಮಗಳು ಹಾಗೂ ಮೊಮ್ಮಗ ಗಾಯಗೊಂಡಿರುವ ದುರ್ಘಟನೆ ಭಾನುವಾರ ನಡೆದಿದೆ.
ಬಸವೇಶ್ವರನಗರದ ಬಿಡಿಎ ಲೇಔಟ್ ನಿವಾಸಿ ರೇಣುಕಾ (52) ಮೃತ ದುರ್ದೈವಿ. ಇವರ ಮಗಳು ಕುಸುಮಾ (32) ಮತ್ತು ಮೊಮ್ಮಗ ಮೋಕ್ಷಿತ್ (9) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಆಂಧ್ರಪ್ರದೇಶ ಮೂಲದ ಪಿ.ಗೋವರ್ಧನ ರೆಡ್ಡಿ (32) ಎಂಬುವವನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಬಸವೇಶ್ವರನಗರ ನಿವಾಸಿಗಳಾದ ಕುಸುಮಾ ಅವರು ಭಾನುವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ದ್ವಿಚಕ್ರ ವಾಹನದಲ್ಲಿ ತಾಯಿ ರೇಣುಕಾ ಮತ್ತು ಮಗ ಮೋಕ್ಷಿತ್‌ನನ್ನು ಕೂರಿಸಿಕೊಂಡು ಬಂಡೇಮಹಾಕಾಳಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ನಾಯಂಡಹಳ್ಳಿ ರಿಂಗ್ ರಸ್ತೆ ಕಡೆಯಿಂದ ವೀರಭದ್ರನಗರ ಜಂಕ್ಷನ್ ಕಡೆಗೆ ಬರುವಾಗ ಹಿಂದಿನಿಂದ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ಮೂವರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಲಾರಿಯ ಎಡಭಾಗದ ಮುಂದಿನ ಚಕ್ರ ರೇಣುಕಾ ಅವರ ಸೊಂಟ ಹಾಗೂ ಕಾಲುಗಳ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಮೂವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಗಾಯಾಳು ರೇಣುಕಾ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಕುಸುಮಾ ಅವರ ಬಲಗಾಲು ಹಾಗೂ ಬಲ ತೋಳಿಗೆ ಪೆಟ್ಟಾಗಿದೆ. ಇವರ ಮಗ ಮೋಕ್ಷಿತ್‌ನ ಕೆನ್ನೆ ಮತ್ತು ಮೂಗಿಗೆ ಗಾಯವಾಗಿದೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಮೆಂಟ್ ಮಿಕ್ಸರ್ ಲಾರಿ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
)
;Resize=(128,128))
;Resize=(128,128))
;Resize=(128,128))