ಹಿಟ್‌ ಆ್ಯಂಡ್‌ ರನ್‌ ಕೇಸಲ್ಲಿ ಮಹಿಳೆ ಸಾವು: ವಾಹನ ಚಾಲಕನ ಬಂಧನ

| Published : Feb 29 2024, 02:06 AM IST

ಸಾರಾಂಶ

ಮಹಿಳೆಗೆ ಕಾರು ಗುದ್ದಿಸಿ ಪರಾರಿ ಆಗಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಗುರುತು ಪತ್ತೆ ಆಗಿಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಮಡಿವಾಳ ಸಂತೆ ಬೀದಿ ಅಂಬೇಡ್ಕರ್‌ ಪ್ರತಿಮೆ ಬಳಿ ಸಂಭವಿಸಿದ್ದ ಹಿಟ್ ಆ್ಯಂಡ್‌ ರನ್‌ ಪ್ರಕರಣದಲ್ಲಿ ಮಹಿಳೆ ಸಾವಿಗೆ ಕಾರಣನಾಗಿದ್ದ ವಾಹನದ ಚಾಲಕನನ್ನು ಮಡಿವಾಳ ಸಂಚಾರ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿ ಮುರುಗ(28) ಬಂಧಿತ ಚಾಲಕ ಫೆ.24ರಂದು ಬೆಳಗಿನಜಾವ 2.15ರ ಸುಮಾರಿಗೆ ಮಡಿವಾಳ ಸಂತೆ ಬೀದಿಯ ಅಂಬೇಡ್ಕರ್‌ ಪ್ರತಿಮೆ ಬಳಿ ಸುಮಾರು 58 ವರ್ಷದ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಆ ಮಹಿಳೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮತಪಟ್ಟಿದ್ದರು.

ಘಟನೆ ಬಳಿಕ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದ. ಈ ಸಂಬಂಧ ಹಿಟ್‌ ಆ್ಯಂಡ್‌ ರನ್‌ ಪ್ರಕರಣ ದಾಖಲಿಸಿಕೊಂಡಿದ್ದ ಮಡಿವಾಳ ಸಂಚಾರ ಠಾಣೆ ಪೊಲೀಸರು, ಇನ್ಸ್‌ಪೆಕ್ಟರ್‌ ಮೊಹಮ್ಮದ್‌ ಸಿರಾಜ್‌ ನೇತೃತ್ವದಲ್ಲಿ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಅಪಘಾತ ಎಸೆಗಿ ಪರಾರಿಯಾಗಿದ್ದ ಬೊಲೆರೋ ಸರಕು ಸಾಗಣೆ ವಾಹನ ಹಾಗೂ ಅದರ ಚಾಲಕನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಮಹಿಳೆ ಗುರುತು ಪತ್ತೆಯಾಗಿಲ್ಲ:

ಅಪಘಾತದಲ್ಲಿ ಮೃತಪಟ್ಟಿರುವ ಮಹಿಳೆಗೆ ಸುಮಾರು 58 ವರ್ಷವಾಗಿದೆ. ಮೇಲ್ನೋಟಕ್ಕೆ ಭಿಕ್ಷುಕಿಯಂತೆ ಕಾಣುತ್ತಿದ್ದು, ಮೂರ್ನಾಲ್ಕು ವರ್ಷಗಳಿಂದ ಮಡಿವಾಳದ ರಸ್ತೆಗಳಲ್ಲಿ ಸುತ್ತಾಡುತ್ತಿದ್ದರು. ರಾತ್ರಿ ವೇಳೆ ಎಲ್ಲೆಂದರಲ್ಲಿ ಮಲಗುತ್ತಿದ್ದರು ಎಂಬುದು ತಿಳಿದು ಬಂದಿದೆ. ಸದ್ಯಕ್ಕೆ ಆ ಮೃತದೇಹವನ್ನು ಶವಾಗಾರದಲ್ಲಿ ಇರಿಸಿರುವ ಪೊಲೀಸರು, ಮಹಿಳೆಯ ಗುರುತು ಹಾಗೂ ವಿಳಾಸ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ.ಫ್ಲೈಓವರಲ್ಲಿ ಹಿಟ್‌ ಆ್ಯಂಡ್‌ ರನ್‌: ಇಬ್ಬರು ಬೈಕ್‌ ಸವಾರರ ಸಾವು

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಹಿಟ್‌ ಆ್ಯಂಡ್‌ ರನ್‌ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರಿಣಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ.

ಮಡಿವಾಳ ಕೆರೆ ಸಮೀಪದ ನಿವಾಸಿಗಳಾದ ಸವಾರ ಅಭಿನಂದನ್‌(25) ಮತ್ತು ಹಿಂಬದಿ ಸವಾರಿಣಿ ದೀಕ್ಷಾ(25) ಮೃತರು. ಮಂಗಳವಾರ ರಾತ್ರಿ 12ರ ಸುಮಾರಿಗೆ ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದೆ.

ಮೃತ ಸವಾರ ಅಭಿನಂದನ್‌ ಮತ್ತು ಹಿಂಬದಿ ಸವಾರಿಣಿ ದೀಕ್ಷಾ ಸ್ನೇಹಿತರು. ಅಭಿನಂದನ್‌ ಆನ್‌ಲೈನ್‌ ವ್ಯವಹಾರದಲ್ಲಿ ತೊಡಗಿದ್ದರೆ, ದೀಕ್ಷಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ದ್ವಿಚಕ್ರ ವಾಹನದಲ್ಲಿ ಮಂಗಳವಾರ ರಾತ್ರಿ ಕೋನಪ್ಪ ಅಗ್ರಹಾರ ಕಡೆಯಿಂದ ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ತಮಿಳುನಾಡು ಕಡೆಗೆ ಹೋಗುತ್ತಿದ್ದರು.

ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಅಭಿನಂದನ್‌ ಮತ್ತು ದೀಕ್ಷಾ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಇಬ್ಬರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಇಬ್ಬರೂ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಈ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಎಸೆಗಿದ ಕಾರು ಹಾಗೂ ಚಾಲಕನ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಸ್ತೆಯಲ್ಲಿ ಬೈಕ್‌ ವ್ಹೀಲಿಂಗ್‌: ಆರು ಸವಾರರ ಬಂಧನಕನ್ನಡಪ್ರಭ ವಾರ್ತೆ ಬೆಂಗಳೂರು

ಸಾರ್ವಜನಿಕ ರಸ್ತೆಗಳಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್‌ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ಸಂಚಾರ ಪೂರ್ವ ವಿಭಾಗದ ಪೊಲೀಸರು ಆರು ಮಂದಿ ಸವಾರರನ್ನು ಬಂಧಿಸಿ ಆರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಮಂಗಳವಾರ ಕೆ.ಆರ್‌.ಪುರ, ಪುಲಕೇಶಿನಗರ, ಶಿವಾಜಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು ಗಸ್ತು ಮಾಡುತ್ತಿದ್ದರು. ಈ ವೇಳೆ ಭಟ್ಟರಹಳ್ಳಿ ಮುಖ್ಯರಸ್ತೆ, ಹೇನ್ಸ್‌ ರಸ್ತೆ, ಹಾಲ್‌ ರಸ್ತೆ ಹಾಗೂ ಕಬ್ಬನ್‌ ರಸ್ತೆಯಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್‌ ಮಾಡುತ್ತಿದ್ದ ಆರು ಮಂದಿ ಸವಾರರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ತಿಳಿಸಿದ್ದಾರೆ.