ಉದ್ಯಮಿಗೆ ಮದುವೆ ಆಸೆ ಹುಟ್ಟಿಸಿ 12 ಲಕ್ಷ ಟೋಪಿ ಹಾಕಿದ ಯುವತಿ

| N/A | Published : May 02 2025, 01:35 AM IST / Updated: May 02 2025, 04:04 AM IST

ಉದ್ಯಮಿಗೆ ಮದುವೆ ಆಸೆ ಹುಟ್ಟಿಸಿ 12 ಲಕ್ಷ ಟೋಪಿ ಹಾಕಿದ ಯುವತಿ
Share this Article
  • FB
  • TW
  • Linkdin
  • Email

ಸಾರಾಂಶ

ವೈವಾಹಿಕ ತಾಣಗಳ ಮೂಲಕ ಯುವತಿಯೊಬ್ಬಳು ಸ್ನೇಹದ ಬಲೆ ಬೀಳಿಸಿಕೊಂಡು ಮದುವೆ ಆಗುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ₹12.61 ಲಕ್ಷ ವಸೂಲಿ ಮಾಡಿ ವಂಚಿಸಿದ ಘಟನೆ ನಡೆದಿದೆ.

  ಬೆಂಗಳೂರು : ವೈವಾಹಿಕ (ಮ್ಯಾಟ್ರಿಮೋನಿಯಲ್‌) ತಾಣಗಳ ಮೂಲಕ ಯುವತಿಯೊಬ್ಬಳು ಸ್ನೇಹದ ಬಲೆ ಬೀಳಿಸಿಕೊಂಡು ಮದುವೆ ಆಗುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ₹12.61 ಲಕ್ಷ ವಸೂಲಿ ಮಾಡಿ ವಂಚಿಸಿದ ಘಟನೆ ನಡೆದಿದೆ.

ಜೆ.ಪಿ.ನಗರದ ರಾಘವೇಂದ್ರ ಲೇಔಟ್ ನಿವಾಸಿ ಜಿ.ರಘು ಮೋಸ ಹೋಗಿದ್ದು, ಈ ಸಂಬಂಧ ಸಂತ್ರಸ್ತ ನೀಡಿದ ದೂರಿನ ಮೇರೆಗೆ ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಳೆದ ಜನವರಿಯಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ರಾಘವೇಂದ್ರ ಅವರಿಗೆ ಪ್ರಿಯಾಂಕಾ ಎಂಬಾಕೆಯ ಪರಿಚಯವಾಗಿದೆ. ಬಳಿಕ ಚಾಟಿಂಗ್ ನಡೆದು ಪರಸ್ಪರ ಮೊಬೈಲ್ ಸಂಖ್ಯೆಗಳ ವಿನಿಮಯವಾಗಿವೆ. ಹೀಗೆ ಮಾತುಕತೆ ನಡೆದು ಕೊನೆಗೆ ಮದುವೆ ಆಗುವ ಹಂತಕ್ಕೆ ಹೋಗಿದೆ.

ಕೆಲ ದಿನಗಳ ಬಳಿಕ ಪ್ರಿಯಾಂಕಾ, ತಾನು ಸಂಕಷ್ಟಕ್ಕೆ ಸಿಲುಕಿದ್ದೇನೆ. ತಕ್ಷಣಕ್ಕೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಳು. ಈ ನಾಟಕ ಅರಿಯದೆ ರಾಘವೇಂದ್ರ ಅವರು, ಆನ್‌ಲೈನ್ ಗೆಳತಿ ನೋವಿಗೆ ಮಿಡಿದಿದ್ದಾರೆ. ಆಗ ತಾನು ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ಒಳ್ಳೆಯ ಲಾಭ ಗಳಿಸಿದ್ದೇನೆ. ಆದರೆ ನನ್ನ ಬಳಿ ಹಣ ಇಲ್ಲ. ನೀವು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆದು ಆನಂತರ ಮದುವೆ ಮಾಡಿಕೊಳ್ಳೋಣ ಎಂದಿದ್ದಳು. ಅದಕ್ಕೆ ರಘು, ನನಗೆ ಷೇರು ಮಾರ್ಕೆಟ್ ಬಗ್ಗೆ ಯಾವುದೇ ಜ್ಞಾನ ಇಲ್ಲವೆಂದಿದ್ದಾರೆ. ನಾನು ಹೇಳಿ ಕೊಡುತ್ತೇನೆ ಎಂದು ಆಕೆ ನಂಬಿಸಿದ್ದಾಳೆ.

ಈಕೆಯ ನಾಜೂಕಿನ ಮಾತಿಗೆ ಮರುಳಾಗಿ ಹಂತ ಹಂತವಾಗಿ ರಾಘವೇಂದ್ರ, ಆರೋಪಿ ಸೂಚಿಸಿದ್ದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ. ಆದರೆ ನಯಾಪೈಸೆ ಲಾಭ ಬಂದಿಲ್ಲ. ಆಗ ಅನುಮಾನಗೊಂಡು ವಿಚಾರಿಸಿದಾಗ ಆಕೆ ಸಂಪರ್ಕ ಸ್ಥಗಿತವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.