ಸಾರಾಂಶ
ಮಂಡ್ಯ : ರೈಲಿಗೆ ತಲೆ ಕೊಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಂದೀಗೌಡ ಬಡಾವಣೆ ಬಳಿ ಶನಿವಾರ ನಡೆದಿದೆ. ನಗರದ ಮೀಸಲು ಸಶಸ್ತ್ರ ಪಡೆಯ ಅನ್ಸರ್ ಪಾಷ ಅವರ ಪುತ್ರಿ ಸುಹಾನಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಳು. ರಾತ್ರಿ ಮನೆಯಿಂದ ತನ್ನ ದ್ವಿಚಕ್ರ ವಾಹನದಲ್ಲಿ ರೈಲು ಹಳಿ ಬಳಿ ಹೋಗುತ್ತಿರುವ ದೃಶ್ಯ ಅಲ್ಲೇ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಾಮುಂಡಿ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಯುವತಿ ಸಾವನ್ನಪ್ಪಿದ್ದಾಳೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ಗಳ ನಡುವೆ ಡಿಕ್ಕಿ: ಸವಾರನಿಗೆ ಗಾಯ
ಹಲಗೂರು: ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ತೀವ್ರ ಗಾಯಗೊಂಡಿರುವ ಘಟನೆ ಸಮೀಪದ ಹಾಡ್ಲಿ-ಮೇಗಳಾಪುರ ವೃತ್ತದ ಗೌಡ ಮಿಲ್ಟ್ರಿ ಹೋಟೆಲ್ ಮುಂಭಾಗ ನಡೆದಿದೆ.
ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದ ನಿವಾಸಿ ಭೂಮಿಗೌಡ ಮತ್ತು ಸಹೋದರ ಮಂಜುನಾಥ ಇಬ್ಬರು ತಮ್ಮ ಬೈಕ್ ನಲ್ಲಿ ಮಳವಳ್ಳಿಯಿಂದ ಹಲಗೂರು ಕಡೆಗೆ ಹೋಗುತ್ತಿದ್ದಾಗ ಹಲಗೂರು ಕಡೆಯಿಂದ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಮಂಜುನಾಥನಿಗೆ ತೀವ್ರ ಗಾಯಗಳಾಗಿವೆ ಎಂದು ಸಹೋದರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.