ದೆವ್ವ ಯಾರು ಅನ್ನೋದೇ ಮ್ಯಾಟ್ನಿ ಚಿತ್ರದ ಟ್ವಿಸ್ಟ್: ಸತೀಶ್‌ ನೀನಾಸಂ

| Published : Apr 05 2024, 01:05 AM IST / Updated: Apr 05 2024, 06:04 AM IST

ದೆವ್ವ ಯಾರು ಅನ್ನೋದೇ ಮ್ಯಾಟ್ನಿ ಚಿತ್ರದ ಟ್ವಿಸ್ಟ್: ಸತೀಶ್‌ ನೀನಾಸಂ
Share this Article
  • FB
  • TW
  • Linkdin
  • Email

ಸಾರಾಂಶ

ಸತೀಶ್ ನೀನಾಸಂ ನಟನೆಯ ಮ್ಯಾಟ್ನಿ ಸಿನಿಮಾ ಏಪ್ರಿಲ್ 5ಕ್ಕೆ ತೆರೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಸತೀಶ್ ನೀನಾಸಂ ಅವರ ಸಂದರ್ಶನ ಇಲ್ಲಿದೆ.

ಆರ್‌. ಕೇಶವಮೂರ್ತಿ

ಈ ಚಿತ್ರ ನಿಮಗೆ ಯಾಕೆ ವಿಶೇಷ?

ನಾನು ಚಿಕ್ಕಂದಿನಿಂದಲೂ ಹಾರರ್‌ ಚಿತ್ರಗಳನ್ನು ನೋಡಿ ಎಂಜಾಯ್‌ ಮಾಡುತ್ತಿದ್ದವನು. ಮೊದಲ ಬಾರಿಗೆ ನಾನು ಅದೇ ರೀತಿಯ ಚಿತ್ರದಲ್ಲಿ ನಟಿಸಿದ್ದೇನೆ. ನನ್ನ ಕೆರಿಯರ್‌ನಲ್ಲಿ ಇದು ಮೊದಲ ಹಾರರ್‌ ಚಿತ್ರ ಎನ್ನುವ ಕಾರಣಕ್ಕೆ ವಿಶೇಷ.

ಮ್ಯಾಟ್ನಿ ಕತೆ ಏನು?

ನಾಯಕ ಅಗರ್ಭ ಶ್ರೀಮಂತ. ಆತನನ್ನು ಭೇಟಿ ಮಾಡಲು ಆತನ ಸ್ನೇಹಿತರು ಮನೆಗೆ ಬರುತ್ತಾರೆ. ನಾಯಕನ ಮನೆಯಲ್ಲಿ ಎಲ್ಲರೂ ಸೇರಿಕೊಂಡ ಮೇಲೆ ನಡೆಯುವ ಮತ್ತು ಸಂಭವಿಸುವ ಘಟನೆಗಳೇನು ಎಂಬುದು ಚಿತ್ರದ ಕತೆ. ಈ ಚಿತ್ರ ಹೆದರಿಸುತ್ತದೆ, ನಗಿಸುತ್ತದೆ, ಮನರಂಜನೆ ಕೊಡುತ್ತದೆ. ಜತೆಗೆ ತ್ರಿಕೋನ ಪ್ರೇಮ ಕತೆಯನ್ನು ತೋರಿಸುತ್ತದೆ. 

ಇಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?

ನಾನು ಇಲ್ಲಿ ಶ್ರೀಮಂತನ ಮನೆಯ ಮಗನ ಪಾತ್ರ ಮಾಡಿದ್ದೇನೆ. ನನ್ನ ಪಾತ್ರಕ್ಕೆ ಎರಡು ಪ್ರೇಮ ಕತೆಗಳು ಇವೆ. ಅದು ಯಾಕೆ ಎಂದು ಹೇಳುತ್ತಲೇ ಕುತೂಹಲ ಮೂಡಿಸುವ ರೀತಿ ನನ್ನ ಪಾತ್ರ ಮೂಡಿ ಬಂದಿದೆ. 

ಹಾರರ್‌ ಚಿತ್ರದಲ್ಲಿ ನಟಿಸಿದ ಅನುಭ ಹೇಗಿತ್ತು?

ಒಂದೇ ಮಾತಿನಲ್ಲಿ ಹೇಳುವುದಾದರೆ ‘ವಾವ್ಹ್‌...’ ಎನ್ನುವ ಅನುಭವ. ಜತೆಗೆ ನಟಿಸಿದ ಕಲಾವಿದರು, ನಿರ್ದೇಶಕರು ಎಲ್ಲರೂ ಪರಸ್ಪರ ಗೊತ್ತಿರುವವರೇ. ಹೀಗಾಗಿ ತುಂಬಾ ಎಂಜಾಯ್‌ ಮಾಡಿಕೊಂಡು ನಮ್ಮ ನಮ್ಮ ಪಾತ್ರಗಳಿಗೆ ಜೀವ ತುಂಬಿದ್ದೇವೆ.

ಹಾರರ್‌ ಅಂದ ಮೇಲೆ ದೆವ್ವ ಇರಬೇಕಲ್ಲ, ಚಿತ್ರದಲ್ಲಿ ದೆವ್ವ ಯಾರು?

ದೆವ್ವ ಯಾರು ಎಂಬುದನ್ನು ನೀವು ಚಿತ್ರದಲ್ಲಿ ನೋಡಿಯೇ ತಿಳಿಯಬೇಕು. ಯಾಕೆಂದರೆ ಇದೇ ಚಿತ್ರದ ಅಸಲಿ ಟ್ವಿಸ್ಟ್‌. ಅಂದರೆ ಕತೆಯ ಕೀ ಪಾಯಿಂಟ್‌ ಕೂಡ ಇದೆ. ಇಂಟರ್‌ವಲ್‌ವರೆಗೂ ಯಾರು ದೆವ್ವ ಎಂಬುದೇ ಗೊತ್ತಾಗಲ್ಲ. ಅಷ್ಟರಮಟ್ಟಿಗೆ ಕುತೂಹಲ ಮತ್ತು ಸಸ್ಪೆನ್ಸ್‌ನಿಂದ ಚಿತ್ರದ ಕತೆ ಸಾಗುತ್ತದೆ.

ದೆವ್ವಗಳ ಬಗ್ಗೆ ನಿಮಗೆ ಇರೋ ನಂಬಿಕೆ ಏನು?

ನಿಜ ಜೀವನದಲ್ಲಿ ನಾನಂತೂ ದೆವ್ವನಾ ನೋಡಿಲ್ಲ. ಕೆಟ್ಟದ್ದು ಮತ್ತು ಒಳ್ಳೆಯದರ ರೂಪಕವೇ ದೆವ್ವ ಮತ್ತು ದೇವರು.

ಹಾರರ್‌, ದೆವ್ವಕ್ಕೂ ಮತ್ತು ಮ್ಯಾಟ್ನಿ ಹೆಸರಿಗೂ ಏನು ನಂಟು?

ಇಲ್ಲಿ ಶೋ ಕೊಡುವ ಕೆಲಸ ಇದೆ. ಯಾರಿಗೆ ಯಾರು ಶೋ ಕೊಡುತ್ತಿರುತ್ತಾರೆ ಎನ್ನುವ ಅಂಶವೂ ಇದೆ. ಶೋ ಅಂದ ಮೇಲೆ ಮ್ಯಾರ್ನಿಂಗ್‌ ಶೋ, ಮ್ಯಾಟ್ನಿ ಶೋ, ನೈಟ್‌ ಶೋ ಅಂತೀವಲ್ಲ. ಹಾಗೆ ನಮ್ಮ ಕತೆಗೆ ಪೂರಕವಾಗಿ ಮ್ಯಾಟ್ನಿ ಅಂತ ಇಟ್ಟುಕೊಂಡಿದ್ದೇವೆ. 

ನಿಮ್ಮ ಜತೆಗೆ ನಟಿಸಿರುವ ಕಲಾವಿದರ ಬಗ್ಗೆ ಹೇಳುವುದಾದರೆ?

ರಚಿತಾರಾಮ್‌, ಅದಿತಿ ಪ್ರಭುದೇವ ನಾಯಕಿಯರಾಗಿ ನಟಿಸಿದ್ದಾರೆ. ನಾಗಭೂಷಣ್‌, ಪೂರ್ಣಚಂದ್ರ ಮೈಸೂರು, ದಿಗಂತ್ ದಿವಾಕರ್‌, ಶಿವರಾಜ್ ಕೆಆರ್ ಪೇಟೆ ಸ್ನೇಹಿತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬರ ಪಾತ್ರವೂ ಚೆನ್ನಾಗಿದೆ.

ಕ್ರಿಕೆಟ್‌, ಎಲೆಕ್ಷನ್‌, ಬಿರುಬೇಸಿಗೆಯಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ...

ನಿರ್ಮಾಪಕರು, ವಿತರಕರು, ಚಿತ್ರಕ್ಕೆ ಹಣ ಹೂಡಿದವರು ತೆಗೆದುಕೊಂಡಿರುವ ನಿರ್ಧಾರ ಇದು. ನಾನು ನಟನಾಗಿ ಇದನ್ನು ಗೌರವಿಸುತ್ತೇನೆ. ನೀವು ಹೇಳಿದ ಎಲ್ಲವನ್ನು ಮೀರಿ ನಮ್ಮ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸ ಮಾಡಬೇಕು ಅಷ್ಟೇ.

ಯಾಕೋ ನೀವು ನಿಂತ ನೀರಂತಾಗಿದ್ದೀರಲ್ಲ?

ಕೊರೋನಾ ಕಾರಣಕ್ಕೆ ಒಂದಿಷ್ಟು ಏರುಪೇರುಗಳಾಗಿದ್ದು ನಿಜ. ಬಹು ನಿರೀಕ್ಷೆಯಿಂದ ಮಾಡಿರುವ ‘ಅಶೋಕ ಬ್ಲೇಡ್‌’ ಚಿತ್ರದ ಶೇ.80ರಷ್ಟು ಚಿತ್ರೀಕರಣ ಮುಗಿದಿದೆ. ಮುಂದಿನ ದಿನಗಳಲ್ಲಿ ನನ್ನ ಚಿತ್ರಗಳು ಬ್ಯಾಕ್‌ ಟು ಬ್ಯಾಕ್‌ ತೆರೆಗೆ ಬರುತ್ತವೆ.

ಒಳ್ಳೆಯ ಚಿತ್ರಗಳನ್ನೂ ಜನ ನೋಡುತ್ತಿಲ್ಲವೆಂದು ಚಿತ್ರರಂಗದವರೇ ಪ್ರೇಕ್ಷಕರ ಮೇಲೆ ಸಿಟ್ಟಾಗುತ್ತಿದ್ದಾರಲ್ಲ?

ಕನ್ನಡ ಚಿತ್ರಗಳನ್ನು ನೋಡಲಿ ಎಂಬುದು ನನ್ನ ಆಸೆ ಕೂಡ. ಆದರೆ, ನೋಡಲೇ ಬೇಕು ಅಂತ ಕಡ್ಡಾಯ, ಬಲವಂತ ಮಾಡಕ್ಕಾಗಲ್ಲ. ಹೀಗಾಗಿ ಪ್ರೇಕ್ಷಕರ ಮೇಲೆ ನಮ್ಮ ಸಿಟ್ಟು ತೋರಿಸಿಕೊಳ್ಳುವುದು ತಪ್ಪು. ಕ್ಯಾಮೆರಾಗಳ ಮುಂದೆ ಬಂದು ಒಳ್ಳೆಯ ಚಿತ್ರಗಳನ್ನು ನೋಡಿ ಗೆಲ್ಲಿಸಲ್ಲ, ಬೇರೆ ಭಾಷೆಯ ಚಿತ್ರಗಳನ್ನು ನೋಡುತ್ತೀರಿ, ಯಾಕ್ರಿ ಕನ್ನಡ ಚಿತ್ರಗಳನ್ನು ನೋಡಲ್ಲ ಎಂದು ಜನರನ್ನು ಬೈಯುವುದನ್ನು ಮೊದಲು ನಿಲ್ಲಿಸಬೇಕು. ಯಾಕೆಂದರೆ ಬೆಳಗ್ಗೆ ಎದ್ದ ಕೂಡಲೇ ಸಿನಿಮಾ ನೋಡುವುದೇ ಜನರ ಮೊದಲ ಕೆಲಸ ಅಲ್ಲ. ಅದು ಅವರ ಆಯ್ಕೆ ಅಷ್ಟೇ. ಈಗ ಸೋಪು, ಬಿಸ್ಕೆಟು ಮಾರುವವನು ಯಾಕ್ರಿ ನಮ್‌ ಸೋಪು ತೆಗೆದುಕೊಳ್ಳುವುದಿಲ್ಲ, ಬಿಸ್ಕಿಟ್‌ ತಿನ್ನಲ್ಲ ಅಂತ ಬೈಯೋದನ್ನು ನೋಡಿದ್ದೀವಾ, ಇಲ್ಲಾ ತಾನೇ. ಹಾಗಾದರೆ ನಾವು ಮಾತ್ರ ಯಾಕೆ ಜನರನ್ನು ಬೈಯೋದು, ನಮಗೆ ಆ ಹಕ್ಕು ಕೊಟ್ಟವರು ಯಾರು? ಒಳ್ಳೆಯ ಚಿತ್ರ ಮಾಡಬೇಕು, ಅದಕ್ಕೆ ತಕ್ಕಂತೆ ಪ್ರಚಾರ ಮಾಡಿ ಜನರ ಮುಂದೆ ತೆಗೆದುಕೊಂಡು ಹೋಗೋದಷ್ಟೇ ನಮ್ಮ ಕೆಲಸ.