ಸಾರಾಂಶ
ಬೆಂಗಳೂರು : ರೇವಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉದ್ಯೋಗಿಗಳಷ್ಟೇ ಆಗದೆ ಉದ್ಯೋಗದಾತರೂ ಆಗಬೇಕೆನ್ನುವ ಗುರಿ ಈಡೇರುತ್ತಿದ್ದು, ಇದರಲ್ಲಿ ಸಂಸ್ಥೆಯ ಕೆರಿಯರ್ ಡೆವಲಪ್‌ಮೆಂಟ್ ಸೆಂಟರ್ ಪಾತ್ರ ಪ್ರಮಖವಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ। ಪಿ.ಶ್ಯಾಮರಾಜು ಹೇಳಿದರು.
ರೇವಾ ವಿಶ್ವವಿದ್ಯಾಲಯವು ನಡೆಸುವ ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಜವಾಬ್ದಾರಿಯುತ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸುವ ‘ಅಭಿನಂದನ-2025’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳನ್ನು ಔದ್ಯೋಗಿಕ ಕ್ಷೇತ್ರಕ್ಕೆ ವಿಶೇಷವಾಗಿ ತರಬೇತುಗೊಳಿಸುವ ರೇವಾ ವಿಶ್ವ ವಿದ್ಯಾನಿಲಯದ ಕೆರಿಯರ್ ಡೆವಲಪ್‌ಮೆಂಟ್ ಸೆಂಟರ್ ಈ ಬಾರಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಂಪನಿಗಳಿಂದ ಈವರೆಗೂ 3123 ಉದ್ಯೋಗಾವಕಾಶ ಲಭಿಸಿದ್ದು, ಇದು ವಿಶ್ವವಿದ್ಯಾನಿಲಯವು ನೀಡುತ್ತಿರುವ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿ ಎಂದರು.
ವಾರ್ಷಿಕ ₹40 ಲಕ್ಷ ವೇತನ ಹಾಗೂ ತಿಂಗಳಿಗೆ ₹1 ಲಕ್ಷದಷ್ಟು ತರಬೇತಿ ಭತ್ಯೆ ಪಡೆದಿರುವುದು ವಿದ್ಯಾರ್ಥಿಗಳ ಸಾಧನೆಗೆ ಹಿಡಿದ ಕೈಗನ್ನಡಿ. 400ಕ್ಕೂ ಅಧಿಕ ಕಂಪನಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, 30ಕ್ಕೂ ಅಧಿಕ ಅಂತಾರಾಷ್ಟ್ರೀಯ ಉದ್ಯೋಗದಾತರು ಉದ್ಯೋಗಾವಕಾಶ ನೀಡಲು ಮುಂದಾಗಿದ್ದಾರೆ ಎಂದರು.
ಎಕ್ಸ್‌ಪೆರಿಯ ಟ್ಯಾಲೆಂಟ್ ಅಕ್ವಿಸಿಶನ್ ಆಪರೇಷನ್ಸ್ ಮುಖ್ಯಸ್ಥ ಮನ್‌ರೂಪ್ ಸಿಂಗ್, ಟಿಸಿಎಸ್‌ನ ರೀಜನಲ್ ಹೆಡ್ ಹಾಗೂ ಟ್ಯಾಲೆಂಟ್ ಅಕ್ವಿಸಿಷನ್‌ನ ವಿನಯ್ ಶಿವಪೂರ, ಮೈಕ್ರೊಸಾಫ್ಟ್-ಇಂಡಿಯ ಲೀಡ್‌ನ ಯುನಿವರ್ಸಿಟಿ ರಿಕ್ರುಟಿಂಗ್ ಹಾಗೂ ರಿಲೇಶನ್ಸ್‌ನ ಮೊಹಮ್ಮದ್ ಫಹಾದ್, ರೇವಾ ವಿಶ್ವವಿದ್ಯಾಲಯದ ಪ್ರೊಚಾನ್ಸೆಲರ್ ಉಮೇಶ್ ಎಸ್.ರಾಜು, ವೈಸ್ ಚಾನ್ಸೆಲರ್ ಡಾ। ಸಂಜಯ್ ಎಸ್.ಚಿಟ್ನಿಸ್, ರೆಕ್ಟರ್ ಡಾ। ಆರ್.ಡಬ್ಲ್ಯೂ.ಅಲೆಕ್ಸಾಂಡರ್ ಜೇಸುದಾಸನ್ ಇದ್ದರು.