ಸಾರಾಂಶ
ಬೀದರ್ ವಿಶ್ವವಿದ್ಯಾಲಯ ಮಾತ್ರ ಕಡಿಮೆ ಖರ್ಚು, ಹಳೆಯ ವಿವಿಯೊಂದಿಗಿನ ಉತ್ತಮ ಬಾಂಧವ್ಯದಿಂದಾಗಿ ಆರೋಗ್ಯಕರವಾಗಿ ಮುನ್ನಡೆಯುತ್ತಿದೆ.
ಅಪ್ಪಾರಾವ್ ಸೌದಿ
ಬೀದರ್ : ಕಾಯಂ ಸಿಬ್ಬಂದಿ, ಸ್ನಾತಕೋತ್ತರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಕೊರತೆ, ಜೊತೆಗೆ ಆರ್ಥಿಕ ಸಂಪನ್ಮೂಲದ ಸಮಸ್ಯೆಗಳಿಂದಾಗಿ ರಾಜ್ಯದ 9 ವಿವಿಗಳು ಬಾಗಿಲು ಮುಚುವ ಸ್ಥಿತಿಗೆ ತಲುಪಿದ್ದರೆ, ಇದರ ಜತೆಗೆ ಆರಂಭವಾದ ಬೀದರ್ ವಿಶ್ವವಿದ್ಯಾಲಯ ಮಾತ್ರ ಕಡಿಮೆ ಖರ್ಚು, ಹಳೆಯ ವಿವಿಯೊಂದಿಗಿನ ಉತ್ತಮ ಬಾಂಧವ್ಯದಿಂದಾಗಿ ಆರೋಗ್ಯಕರವಾಗಿ ಮುನ್ನಡೆಯುತ್ತಿದೆ.
2023ರ ಮಾ.23ರಂದು ಆರಂಭವಾದ ಬೀದರ್ ವಿಶ್ವವಿದ್ಯಾಲಯಕ್ಕೆ ಹಿಂದಿನ ಗುಲ್ಬರ್ಗಾ ವಿಶ್ವವಿದ್ಯಾಲಯ ತಕ್ಷಣ 322.18 ಎಕರೆ ಜಮೀನು, ಸ್ನಾತಕೋತ್ತರ ಕೇಂದ್ರದ ಬೃಹತ್ ಕಟ್ಟಡ, 13 ವಿಭಾಗಗಳ ಕೊಠಡಿಗಳು, 2 ಹಾಸ್ಟೆಲ್‌ಗಳು, 1 ಗೆಸ್ಟ್ ಹೌಸ್ ಸೇರಿ ಅಗತ್ಯಗಳನ್ನು ಪೂರೈಸುವಲ್ಲಿ ಸಹಕರಿಸಿದೆ. ಇಂದು ಅದೇ ಸ್ನಾತಕೋತ್ತರ ಕೇಂದ್ರದ ಕಟ್ಟಡವೇ ಬೀದರ್ ವಿವಿಯ ಕಟ್ಟಡವಾಗಿದ್ದರಿಂದ ಹೊಸ ಕಟ್ಟಡ ಸಮಸ್ಯೆ ಎದುರಿಸದೆ, ಆರ್ಥಿಕ ಮುಗ್ಗಟ್ಟಿಗೆ ಸಿಲುಕದೆ ಉಸಿರಾಡಲು ಸಹಕಾರಿಯಾದಂತಾಗಿದೆ.
ಬೀದರ್ ವಿಶ್ವವಿದ್ಯಾಲಯವು ಸರ್ಕಾರಿ, ಖಾಸಗಿ ಪದವಿ ಹಾಗೂ ಬಿ.ಇಡಿ ಕಾಲೇಜುಗಳೂ ಸೇರಿ ಒಟ್ಟು 124 ಕಾಲೇಜುಗಳನ್ನು ಹೊಂದಿದೆ. ವಿವಿಯಲ್ಲಿ 21 ವಿಭಾಗಗಳಿದ್ದು, 14 ಸ್ನಾತಕೋತ್ತರ ವಿಭಾಗಗಳಿವೆ. ಇಲ್ಲಿ ಪದವಿಯ ಪ್ರಥಮ ಹಾಗೂ ದ್ವಿತೀಯ ವರ್ಷಕ್ಕೆ 25 ಸಾವಿರ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ಸಾಲಿನಲ್ಲಿ ಮೂರನೇ ವರ್ಷಕ್ಕೆ 12 ಸಾವಿರ ವಿದ್ಯಾರ್ಥಿಗಳು ಸೇರಿ ಒಟ್ಟು ಸುಮಾರು 46 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ವಿವಿಯು 56 ಮಂದಿ ಅತಿಥಿ ಉಪನ್ಯಾಸಕನ್ನು ಹೊಂದಿದ್ದು, ಈ ಪೈಕಿ ಕೇವಲ ಓರ್ವ ಮಾತ್ರ ಕಾಯಂ ಬೋಧಕರಿದ್ದಾರೆ. 29 ಬೋಧಕ ಹಾಗೂ 109 ಬೋಧಕೇತರ ಸಿಬ್ಬಂದಿಯ ಖಾಲಿ ಹುದ್ದೆಗಳ ಹೊರತಾಗಿಯೂ ವಿವಿಯಲ್ಲಿನ 800 ವಿದ್ಯಾರ್ಥಿಗಳೊಂದಿಗೆ ಕುಲಪತಿ ಪ್ರೊ.ಬಿ.ಎಸ್.ಬಿರಾದರ್ ಹಾಗೂ ಅವರ ತಂಡ ಯಾವುದೇ ಕೊರತೆ ಕಾಣದಂತೆ ಶೈಕ್ಷಣಿಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿರುವುದು ವಿವಿಯ ಉಳಿವಿಗೆ ಮತ್ತೊಂದು ಕಾರಣ ಎನ್ನಬಹುದಾಗಿದೆ.
ಯುಜಿಸಿಯಿಂದ ಆರಂಭದಲ್ಲೇ 2ಎಫ್ ಮಾನ್ಯತೆ
ಬೀದರ್ ವಿಶ್ವವಿದ್ಯಾಲಯ ಆರಂಭವಾಗುತ್ತಲೇ ಯುಜಿಸಿಯಿಂದ 2ಎಫ್ ಸಂಯೋಜನೆ ಸಿಕ್ಕಿದೆ. ವಿವಿ ಆರಂಭವಾಗಿ ಕೇವಲ 2 ವರ್ಷ ಆಗಿದೆ, ಸಂಶೋಧನಾ ಚಟುವಟಿಕೆಗಳಿಗೆ ಅನುದಾನ ಕಲ್ಪಿಸುವಂತಹ 12ಬಿ ಮಾನ್ಯತೆಗೆ ಇನ್ನೂ ಕಾಯಬೇಕು. ಅದಕ್ಕಾಗಿ ಕನಿಷ್ಠ 5 ವರ್ಷವಾಗಿರಬೇಕು. ಹುದ್ದೆಗಳೆಲ್ಲ ಭರ್ತಿಯಾಗಿರಬೇಕು. ಕಟ್ಟಡಗಳಲ್ಲಿ ಕೊರತೆ ಇರಬಾರದು ಎಂಬ ಷರತ್ತುಗಳೊಂದಿಗೆ ಹಲವು ನಿಯಮಗಳನ್ನು ಪಾಲಿಸಬೇಕಿದೆ. ಬೀದರ್ ವಿಶ್ವವಿದ್ಯಾಲಯ ಬೀದರ್ ನಗರದಿಂದ ಸುಮಾರು 15 ಕಿ.ಮೀ ದೂರವಿದ್ದರೂ ವಿವಿಗೆ ಸಿಕ್ಕಿರುವ ಜಮೀನು ಅಪಾರವಾಗಿದೆ. ಉತ್ತಮ ಪರಿಸರವನ್ನು ಹೊಂದಿದೆ. ಸದ್ಯ ದೊಡ್ಡ ಆರ್ಥಿಕ ಸಂಕಷ್ಟ ಎದುರಿಸುತ್ತಿಲ್ಲ. 322.18 ಎಕರೆ ವಿಶಾಲ ಪ್ರದೇಶದಲ್ಲಿ ಅತ್ಯುತ್ತಮ ಆಡಳಿತ ಕಟ್ಟಡಗಳು, ಪ್ರಯೋಗಾಲಯಗಳನ್ನು ನಿರ್ಮಿಸಬಹುದು. ಮೂಲ ಸೌಲಭ್ಯಗಳನ್ನು ಪೂರೈಸಬಹುದು. ಅದಕ್ಕಾಗಿ ಕೆಕೆಆರ್‌ಡಿಬಿಗೆ ಕೇಳಿರುವ ಅನುದಾನವನ್ನು ವಿವಿಗೆ ಕಲ್ಪಿಸಿದ್ದೆಯಾದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿಯೇ ವಿನೂತನ ವಿವಿ ಆಗುವದರಲ್ಲಿ ಸಂದೇಹವಿಲ್ಲ.
ಇತಿಮಿತಿಯಲ್ಲೇ ಖರ್ಚು-ಕುಲಪತಿ
ವಿವಿಯು ಆರಂಭವಾಗುತ್ತಿದ್ದಂತೆ ಹೆಚ್ಚೆಚ್ಚು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಗೋಜಿಗೆ ಹೋಗದೆ, ಮೊದಲಿಂದಲೂ ಇರುವ ಅತಿಥಿ ಉಪನ್ಯಾಸಕರನ್ನಷ್ಟೇ ಬಳಸಿಕೊಂಡು ಇತಿಮಿತಿಯಲ್ಲೇ ವಿವಿಯನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಸದ್ಯಕ್ಕೆ ವಿವಿಯ ಕುಲಪತಿ, ಕುಲಸಚಿವ ಸೇರಿ ಮತ್ತಿತರ ಸಂಬಳಕ್ಕೆ ಸರ್ಕಾರ 3 ತಿಂಗಳಿಗೊಮ್ಮೆ ಸುಮಾರು ₹1ಕೋಟಿ ಅನುದಾನ ನೀಡುತ್ತಿದೆ ಮತ್ತು ವಿವಿಧ 124 ಕಾಲೇಜುಗಳಿಂದ ಸುಮಾರು ₹20 ಕೋಟಿ ಆದಾಯ ಬರುತ್ತದೆ. ವಾರ್ಷಿಕವಾಗಿ ಸುಮಾರು ₹7ಕೋಟಿ ಕೊರತೆ ಬಂದರೂ, ಅತಿಥಿ ಉಪನ್ಯಾಸಕರ ಸಂಬಳಕ್ಕೆ ಕತ್ತರಿ ಹಾಕಲ್ಲ, ಅನಗತ್ಯ ಖರ್ಚು ಕಡಿಮೆ ಮಾಡಿ ನಿರ್ವಹಿಸಿಕೊಂಡು ಹೋಗುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ವಿವಿಯ ವಿಭಾಗಗಳ ಕಟ್ಟಡಗಳು, ಸ್ಮಾರ್ಟ್ ಕ್ಲಾಸ್, ಹಾಸ್ಟೆಲ್, ಪ್ರಯೋಗಾಲಯ ಸೇರಿ ಮತ್ತಿತರ ನಿರ್ಮಾಣಕ್ಕೆ ₹310 ಕೋಟಿ ನೆರವು ಕೇಳಿ ಪ್ರಸ್ತಾವನೆ ಸಲ್ಲಿಸಿದ್ದೇವೆ ಅದರಲ್ಲಿ ಕನಿಷ್ಠ ₹100 ಕೋಟಿ ಸಿಗುವ ಭರವಸೆ ಇದೆ ಎಂದು ಕುಲಪತಿ ಪ್ರೊ. ಬಿ.ಎಸ್. ಬಿರಾದರ ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟ, ಸಿಬ್ಬಂದಿ ಕೊರತೆ ಮತ್ತಿತರ ವಿಷಯಗಳಿಗಾಗಿ ರಾಜ್ಯದ ಕೆಲ ವಿಶ್ವವಿದ್ಯಾಲಯಗಳು ಮುಚ್ಚುತ್ತಿರುವ ಈ ದಿನಗಳಲ್ಲಿ ಬೀದರ್ ವಿಶ್ವವಿದ್ಯಾಲಯ ಉಳಿದುಕೊಂಡಿರುವುದೇ ಸಾಹಸ. ಅಂಥದ್ದರಲ್ಲಿ ಅಗತ್ಯ ಹಣಕಾಸು ನೆರವನ್ನು ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದಾದರೂ ಪೂರೈಸಿ ವಿವಿಯ ಜೀವಂತಿಕೆಯನ್ನು ಮತ್ತಷ್ಟು ಸದೃಢಪಡಿಸಬೇಕಿದೆ.
- ವಿಠ್ಠಲದಾಸ ಪ್ಯಾಗೆ, ವಿವಿ ಸಿಂಡಿಕೇಟ್ ಸದಸ್ಯರು