ಮೊದಲ ಪ್ರೇಮದ ಮಧುರ ಪಯಣ

| Published : Oct 08 2023, 12:03 AM IST

ಸಾರಾಂಶ

ಅಭಿ ಬಾಲ್ಯದ ಪ್ರೇಮ ಕತೆಯನ್ನು ನೆನಪಿಸಿಕೊಳ್ಳುತ್ತಾನೆ. ಮಂಗಳೂರು ಹಿನ್ನೆಲೆಯಲ್ಲಿ ಈ ಕತೆ ಶುರುವಾಗುತ್ತದೆ. ರಾಮ್ ತಾನೂ ಪ್ರೀತಿಸಿದ್ದನ್ನು ಹೇಳುತ್ತಾನೆ. ಇದು ಮಂಡ್ಯ ಹಿನ್ನೆಲೆಯಲ್ಲಿ ಮೂಡುತ್ತದೆ. ಪಬ್ಜಿ ಹಾಡುತ್ತಲೇ ಇರುವ ಚಂದ್ರ, ತನಗೆ ಆನ್‌ಲೈನ್‌ನಲ್ಲಿ ಸಿಕ್ಕ ಹುಡುಗಿ ಬಗ್ಗೆ ನೆನಪಿಸುತ್ತಾನೆ
ಚಿತ್ರ: ಅಭಿರಾಮಚಂದ್ರ ತಾರಾಗಣ: ರಥ ಕಿರಣ್​, ಸಿದ್ದು ಮೂಲಿಮನೆ, ನಾಟ್ಯರಂಗ, ಶಿವಾನಿ ರೈ, ಎಸ್​ ನಾರಾಯಣ್​, ಅರ್ಚನಾ ಕೊಟ್ಟಿಗೆ ನಿರ್ದೇಶನ: ನಾಗೇಂದ್ರ ಗಾಣಿಗ ರೇಟಿಂಗ್‌: 3 ಆರ್‌ಕೆಎಂ ಮೊದಲ ಪ್ರೇಮ ಕತೆ ಎಂಬುದು ಯುಗ ಯುಗಗಳೇ ಕಳೆದರೂ ಮತ್ತೆ ನೆನಪಾಗುವ ಪುಟಗಳು. ಹೀಗಾಗಿ ‘ಅಭಿರಾಮಚಂದ್ರ’ ಕೂಡ ನೋಡುಗನ ಮೆಚ್ಚುಗೆಗೆ ಕಾರಣವಾಗಬಹುದು. ಯಾಕೆಂದರೆ ಇಲ್ಲಿಯೂ ಮೊದಲ ಪ್ರೇಮ ಕತೆ ಇದೆ. ಆ ಕತೆಯ ಸುತ್ತ ಒಂದು ಮಧುರ ಪಯಣವಿದೆ. ನಿರ್ದೇಶಕ ನಾಗೇಂದ್ರ ಗಾಣಿಗ ಪ್ರೇಮ ಕತೆಯನ್ನು ಹೊತ್ತು ತಂದಿದ್ದರೂ ಅದನ್ನು ಹೇಳುವ ರೀತಿ ಹೊಸದಾಗಿದೆ. ನಿಧಾನವೇ ಪ್ರಧಾನ ಎಂಬ ಅವರ ನಿರೂಪಣೆಯನ್ನು ತಾಳ್ಮೆಯಿಂದ ನೋಡಿದರೆ ಎಲ್ಲರ ಪ್ರಥಮ ಪ್ರೇಮ ಕತೆ ನೆನಪಿಗೆ ಬಂದರೂ ಅಚ್ಚರಿ ಇಲ್ಲ. ಮೂವರ ಹುಡುಗರ ಜರ್ನಿಯಲ್ಲಿ ತೆರೆದುಕೊಳ್ಳುವ ಸಿನಿಮಾ ಇದು. ಅಭಿ ಬಾಲ್ಯದ ಪ್ರೇಮ ಕತೆಯನ್ನು ನೆನಪಿಸಿಕೊಳ್ಳುತ್ತಾನೆ. ಮಂಗಳೂರು ಹಿನ್ನೆಲೆಯಲ್ಲಿ ಈ ಕತೆ ಶುರುವಾಗುತ್ತದೆ. ರಾಮ್ ತಾನೂ ಪ್ರೀತಿಸಿದ್ದನ್ನು ಹೇಳುತ್ತಾನೆ. ಇದು ಮಂಡ್ಯ ಹಿನ್ನೆಲೆಯಲ್ಲಿ ಮೂಡುತ್ತದೆ. ಪಬ್ಜಿ ಹಾಡುತ್ತಲೇ ಇರುವ ಚಂದ್ರ, ತನಗೆ ಆನ್‌ಲೈನ್‌ನಲ್ಲಿ ಸಿಕ್ಕ ಹುಡುಗಿ ಬಗ್ಗೆ ನೆನಪಿಸುತ್ತಾನೆ. ವಿರಾಮದ ಹೊತ್ತಿಗೆ ಮೂವರು ಪ್ರೀತಿಸುತ್ತಿರುವ ಹುಡುಗಿ ಒಬ್ಬಳೇ ಎನ್ನುವ ತಿರುವು ಎದುರಾಗುತ್ತದೆ. ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ಬರುವ ಸಸ್ಪೆನ್ಸ್‌ ಚಿತ್ರಕ್ಕೊಂದು ಹೊಸತನ ನೀಡುತ್ತದೆ. ಮೊದಲಾರ್ಧದ ಕತೆ ಹಾಸ್ಯ, ನೆನಪುಗಳ ಅಂಗಳವಾದರೆ, ದ್ವಿತೀಯಾರ್ಧ ಕತೆ ಭಾವುಕತೆಯ ಅಪ್ಪುಗೆ. ಬದುಕಲು ಕಷ್ಟಪಡುವ ಮೂವರ ಹುಡುಗರ ಪಾತ್ರದಲ್ಲಿ ರಥ ಕಿರಣ್​, ಸಿದ್ದು ಮೂಲಿಮನೆ, ನಾಟ್ಯರಂಗ ತುಂಬಾ ಚೆನ್ನಾಗಿ ನಟಿಸಿದ್ದಾರೆ. ವೈದ್ಯರ ಪಾತ್ರದಲ್ಲಿ ಎಸ್‌ ನಾರಾಯಣ್‌ ನಗಿಸುತ್ತಾರೆ. ಶಿವಾನಿ ರೈ, ಅರ್ಚನಾ ಕೊಟ್ಟಿಗೆ ಪಾತ್ರಕ್ಕೆ ಜೀವಂತಿಕೆ ಇದೆ. ನೋಡಬಹುದಾದ ಸಿನಿಮಾ ಇದು.