ಸಿನಿವಾರ್ತೆ
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಬೆನ್ನ ಮೇಲೆ ಗಣೇಶ ಟ್ಯಾಟೂ ಹಾಕಿಸಿಕೊಂಡಿದ್ದು ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಎರಡು ದಿನಗಳ ಕೆಳಗೆ ತನ್ನ ಬೆನ್ನ ಮೇಲೆ ಗಣೇಶನ ಟ್ಯಾಟೂ ಹಾಕಿಸಿದ ವೀಡಿಯೋವನ್ನು ಸಾನ್ವಿ ಸುದೀಪ್ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದರು. ‘ಹೈದರಾಬಾದ್‌ನಲ್ಲಿ ಈ ಟ್ಯಾಟೂ ಹಾಕಿಸಿಕೊಂಡೆ. ಸುಮಾರು 8 ಗಂಟೆಗಳ ಸಮಯ ತೆಗೆದುಕೊಂಡಿತು. ಕೊನೆಯಲ್ಲಿ ನೋಡಿದಾಗ ‘ಓ ದೇವ್ರೇ, ಇದು ಅದ್ಭುತ ಅನಿಸಿತು’ ಎಂದು ಹೇಳಿದ್ದರು.
ನಕರಾತ್ಮಕ ಪ್ರತಿಕ್ರಿಯೆ
ಈ ವೀಡಿಯೋ ನೋಡಿದ ಬಹಳಷ್ಟು ಮಂದಿ ನಕರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಈ ಟ್ಯಾಟೂ ಬಗ್ಗೆ ಪರ ವಿರೋಧದ ಚರ್ಚೆ ಜೋರಾಗುತ್ತಿದೆ. ಒಂದಿಷ್ಟು ಮಂದಿ ‘ನಾವು ಪೂಜಿಸುವ ದೇವರ ಚಿತ್ರವನ್ನು ಬೆನ್ನಿನ ಭಾಗದಲ್ಲಿ ಟ್ಯಾಟೂ ಹಾಕಿಸುವುದು ಸರಿಯಲ್ಲ. ಇದು ಧಾರ್ಮಿಕ ಭಾವನೆಗೆ ನೋವುಂಟು ಮಾಡುವಂತಿದೆ’ ಎಂಬ ಮಾತನ್ನು ಹೇಳಿದ್ದಾರೆ. ಕೆಲವರು ಟ್ಯಾಟೂ ಕಲೆಯಲ್ಲಿ ಸೊಗಸಾಗಿ ಮೂಡಿಬಂದಿರುವ ಗಣೇಶನ ಚಿತ್ರವನ್ನು ಕಂಡು ಮೆಚ್ಚುಗೆ ಸೂಚಿಸಿದ್ದಾರೆ. ‘ಇಲ್ಲದ ಪೂರ್ವಾಗ್ರಹ ತಂದು ಕಲೆಗೆ ಅವಮಾನಿಸಬೇಡಿ’ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಾನ್ವಿ ಸುದೀಪ್ ನಿರಾಕರಿಸಿದ್ದಾರೆ.
