‘ಬಘೀರ’ ಸಿನಿಮಾ ತೆರೆಗೆ - ನಮ್ಮಿಂದ ಸಮಾಜ ಅಲ್ಲ, ಸಮಾಜದಿಂದ ನಾವು : ನಟ ಶ್ರೀಮುರಳಿ

| Published : Nov 01 2024, 12:18 AM IST / Updated: Nov 01 2024, 06:41 AM IST

ಸಾರಾಂಶ

ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಸಡಗರದಲ್ಲಿ ನಟ ಶ್ರೀಮುರಳಿ ಅವರ ‘ಬಘೀರ’ ಸಿನಿಮಾ ತೆರೆಗೆ ಬಂದಿರೆ. ಪ್ರಶಾಂತ್ ನೀಲ್ ಕತೆ ಬರೆದು, ಡಾ ಸೂರಿ ನಿರ್ದೇಶಿಸಿರುವ ಈ ಬಹುನಿರೀಕ್ಷೆಯ ಚಿತ್ರದ ಕುರಿತು ಶ್ರೀಮುರಳಿ ಅವರು ಹೇಳಿಗ ಆಸಕ್ತಿಕರ ಮಾತುಗಳು ಇಲ್ಲಿವೆ.

ಆರ್‌.ಕೇಶವಮೂರ್ತಿ

ಅಂತೂ ಮೂರು ವರ್ಷಗಳ ನಂತರ ಪ್ರೇಕ್ಷಕರ ಮುಂದೆ ಬರುತ್ತಿದ್ದೀರಿ?

ಸಾಕಷ್ಟು ಸಮಯ ತೆಗೆದುಕೊಂಡು ಮಾಡಿರುವ ಚಿತ್ರವಿದು. ಟ್ರೇಲರ್‌ ನೋಡಿದಾಗ ನಮ್ಮ ಮೂರು ವರ್ಷಗಳ ಶ್ರಮ ತೆರೆ ಮೇಲೆ ಕಂಡಿತು. ಇಷ್ಟು ಸಮಯ ಹಾಕಿದ್ದಕ್ಕೂ ಸಾರ್ಥಕ ಎನಿಸುತ್ತಿದೆ.

ಈ ಚಿತ್ರದ ಮೇಲೆ ನಿಮಗೆ ಇರೋ ಭರವಸೆ ಎಂಥದ್ದು?

ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆಂಬ ನಂಬಿಕೆ ಇದೆ. ಚಿತ್ರ ನೋಡಿದವರು ಶ್ರೀಮುರಳಿ ಪಾತ್ರ ಇನ್ನೂ ಬೇಕಿತ್ತು, ಅಯ್ಯೋ ಸಿನಿಮಾ ಮುಗಿದು ಹೋಯಿತೇ ಎಂದು ಪ್ರೇಕ್ಷಕರು ಉದ್ಘರಿಸುತ್ತಾರೆ. ಇದೇ ನನಗೆ ಚಿತ್ರದ ಮೇಲಿರುವ ಗೆಲುವಿನ ನಂಬಿಕೆ.

ಒಂದೇ ಚಿತ್ರದಲ್ಲಿ ಏಕಕಾಲದಲ್ಲಿ ಇಬ್ಬರು ನಿರ್ದೇಶಕರ ಜತೆಗೆ ಕೆಲಸ ಮಾಡಿದಂತಾಯಿತೇ?

ಹಹ್ಹಹ್ಹಹ್ಹ.... ಅದೊಂದು ದೊಡ್ಡ ಅನುಭವ. ಪ್ರಶಾಂತ್‌ ನೀಲ್‌ ಕತೆ, ಡಾ ಸೂರಿ ಅವರ ನಿರ್ದೇಶನ. ನೀಲ್‌ ಕೊಟ್ಟ ಕತೆಯನ್ನು ಸೂರಿ ಎರಡು ವರ್ಷ ಸಮಯ ತೆಗೆದುಕೊಂಡು ಡೆವಲಪ್‌ ಮಾಡಿದ್ರು. ಈ ಹಂತದಲ್ಲಿ ನನಗೆ ಇಬ್ಬರ ಜತೆಗೆ ಕೆಲಸ ಮಾಡುತ್ತಿದ್ದೇನೆ ಎನ್ನುವಷ್ಟು ಅನುಭವ ಆಯಿತು.

ಚಿತ್ರದ ಕತೆ ಏನು?

ನಮ್ಮ ನಮ್ಮ ಆಲೋಚನೆಗಳೇ ಹೀರೋ ಎಂಬುದನ್ನು ಹೇಳುವುದೇ ಚಿತ್ರದ ಕತೆ. ನಮ್ಮಿಂದ ಸಮಾಜ ಅಲ್ಲ, ಸಮಾಜದಿಂದ ನಾವು. ನಮಗೆ ಆಶ್ರಯ ಕೊಟ್ಟಿರುವ ಸೊಸೈಟಿಗೆ ನಾವು ಏನು ಮಾಡಬಹುದು ಎಂಬುದು ಕತೆ. ನಮ್ಮ ಆಲೋಚನೆಗಳು ನಮ್ಮನ್ನು ಹೀರೋ ಆಗಿ ನಿಲ್ಲಿಸುತ್ತದೆ. ಅದೇ ಹೇಗೆ ಎನ್ನುವುದಕ್ಕೆ ‘ಬಘೀರ’ ಚಿತ್ರ ನೋಡಿ.

ನಿಮ್ಮ ಪಾತ್ರ ಯಾವ ರೀತಿ ಮೂಡಿ ಬಂದಿದೆ?

ಪ್ರೇಕ್ಷಕರು ನನ್ನ ಪಾತ್ರದ ಜತೆಗೇ ಸಾಗುತ್ತಾರೆ. ನಾನು ನಕ್ಕರೆ ಪ್ರೇಕ್ಷಕರು ನಗುತ್ತಾರೆ, ನಾನು ಅತ್ತರೆ ಅವರೂ ಅಳುತ್ತಾರೆ, ನಾನು ಲವ್‌ ಮಾಡುವಾಗ ಅವರ ಪ್ರೇಮ ಕತೆಯೂ ನೆನಪಾಗುತ್ತದೆ. ನಾನು ಬೇಸರ ಮಾಡಿಕೊಂಡರೆ, ಸಿಟ್ಟಾದರೆ ಪ್ರೇಕ್ಷಕರೂ ಅದೇ ಮಾಡುತ್ತಾರೆ. ಕೊನೆಯಲ್ಲಿ ಬೈಯುತ್ತಾರೆ, ಮತ್ತೆ ನನ್ನ ಒಪ್ಪಿಕೊಳ್ಳುತ್ತಾರೆ. ಹೀಗೆ ನನ್ನ ಪಾತ್ರ ಪ್ರೇಕ್ಷಕರ ಜತೆಗೆ ಸಾಗುತ್ತದೆ. 

ನಿಮ್ಮದು ಇಲ್ಲಿ ಎರಡು ರೀತಿಯ ಪಾತ್ರ ಅಲ್ಲವೇ?

ರಾತ್ರಿ ಹೊತ್ತು ಬರುವ ಬಘೀರ, ಹಗಲಿನಲ್ಲಿ ಬರುವ ಪೊಲೀಸ್‌ ಅಧಿಕಾರಿ. ಕತ್ತಲು ಮತ್ತು ಬೆಳಕು ಈ ಎರಡರಿಂದ ನಾವು ತಪ್ಪಿಸಿಕೊಳ್ಳುವುದಕ್ಕೆ ಆಗಲ್ಲ.

‘ಬಘೀರ’ ಚಿತ್ರದ ಮಾಸ್ಕ್‌ ಪಾತ್ರದಿಂದ ಪುನೀತ್‌ರಾಜ್‌ಕುಮಾರ್‌ ಅವರಂತೆಯೇ ನೀವು ಮಕ್ಕಳ ನೆಚ್ಚಿನ ಹೀರೋ ಆಗ್ತೀರಾ?

ನಾನು ಅಪ್ಪು ಅವರ ಜತೆಗೆ ಹೋಲಿಕೆ ಮಾಡಿಕೊಳ್ಳುತ್ತಿಲ್ಲ. ಆದರೆ, ಮಕ್ಕಳು ನಮ್ಮನ್ನು ಇಷ್ಟಪಟ್ಟರೆ ಹೇಗೆ ಹೇಗಿರುತ್ತದೆ ಅಂತ ‘ಚಂದ್ರ ಚಕೋರಿ’ ಚಿತ್ರದ ಹೊತ್ತಿನಲ್ಲೇ ನೋಡಿದ್ದೇನೆ. ಈಗ ‘ಬಘೀರ’ ಚಿತ್ರದಲ್ಲಿ ರಾತ್ರಿ ಹೊತ್ತು ಬರುವ ಮಾಸ್ಕ್‌ ಕ್ಯಾರೆಕ್ಟರ್‌ ಮಕ್ಕಳಿಗೆ ಸಖತ್‌ ಮನರಂಜನೆ ಜತೆಗೆ ಥ್ರಿಲ್ಲಿಂಗ್‌ ಅನುಭವ ಕೊಡುತ್ತದೆ.

ಸಿನಿಮಾ ಯಾಕೆ ಕತ್ತಲು ಕತ್ತಲು?

ಹಲವು ಸರಣಿಗಳಲ್ಲಿ ‘ಬ್ಯಾಟ್‌ಮ್ಯಾನ್‌’ ಬಂದಿದೆ. ಅದನ್ನು ಯಾರು ಡಾರ್ಕ್‌ ಅಂತ ಹೇಳಲಿಲ್ಲ. ನಿಸ್ವಾರ್ಥ ಜೀವಿಯೊಂದು ಸೊಸೈಟಿಗೆ ಏನಾದರು ಮಾಡಬೇಕು ಎಂದುಕೊಳ್ಳುತ್ತದೆ. ಆ ಪಾತ್ರ ರಾತ್ರಿ ಹೊತ್ತೇ ಬರುತ್ತದೆ. ಡಾರ್ಕ್‌ನೆಸ್‌ ಎಂಬುದು ಕತೆಗೆ ಪೂರಕವಾಗಿಯೇ ಇದೆ.

ಪ್ಯಾನ್‌ ಇಂಡಿಯಾ ಚಿತ್ರಗಳು ಯಾಕೆ ತಡ ಆಗೋದು?

ರಾಜ್ಯ ಕಟ್ಟಕ್ಕೂ, ದೇಶ ಕಟ್ಟಕ್ಕೂ ವ್ಯತ್ಯಾಸ ಇದೆ. ಎರಡಕ್ಕೂ ಬೇರೆ ಬೇರೆ ಸಮಯ ಬೇಕು. ದೇಶ ಅಂದರೆ ಪ್ಯಾನ್‌ ಇಂಡಿಯಾ ಸಿನಿಮಾಗಳು. ಕೋರ್‌ ಪಾಯಿಂಟ್‌ ಹೊರತಾಗಿ ಕಾಲ ಕಾಲಕ್ಕೆ ಕತೆಯಲ್ಲಿ ಬದಲಾವಣೆ, ಹೊಸ ಮೇಕಿಂಗ್‌ ಅಳವಡಿಸಿಕೊಳ್ಳುತ್ತಾ ಹೋಗಬೇಕು. ಇದಕ್ಕೆ ಸಮಯ ಬೇಕಾಗುತ್ತದೆ.

ಮುಂದೆ ಕೂಡ ಹೀಗೆ ಎರಡ್ಮೂರು ವರ್ಷಕ್ಕೊಂದು ಸಿನಿಮಾ ಮಾಡಿಕೊಂಡೇ ಇರ್ತಿರಾ ಹೇಗೆ?

ಇಲ್ಲ. ಇನ್ಮೇಲೆ ವರ್ಷಕ್ಕೆ ಮೂರು ಸಿನಿಮಾ ಮಾಡುತ್ತೇನೆ.