ದರ್ಶನ್‌ ಅನ್‌ಫಾಲೋ ವಿವಾದಕ್ಕೆ ಸ್ಪಷ್ಟನೆ ನೀಡಿದ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್‌

| N/A | Published : Mar 13 2025, 12:08 PM IST

Darshan Sumalatha

ಸಾರಾಂಶ

‘ನನ್ನ ಕೊನೆಯ ಉಸಿರು ಇರೋವರೆಗೂ ದರ್ಶನ್‌ ನನ್ನ ಮಗನೇ. ನಾನು ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ಪೋಸ್ಟ್‌ಗೂ, ದರ್ಶನ್‌ ಅವರಿಗೂ ಯಾವುದೇ ಸಂಬಂಧ ಇಲ್ಲ. ಇಷ್ಟಕ್ಕೂ ನಾನು ದರ್ಶನ್‌ ಅವರನ್ನು ಗುರಿಯಾಗಿಸಿಕೊಂಡು ಯಾವುದೇ ಪೋಸ್ಟ್‌ ಮಾಡಿಲ್ಲ.’

  ಸಿನಿವಾರ್ತೆ

‘ನನ್ನ ಕೊನೆಯ ಉಸಿರು ಇರೋವರೆಗೂ ದರ್ಶನ್‌ ನನ್ನ ಮಗನೇ. ನಾನು ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ಪೋಸ್ಟ್‌ಗೂ, ದರ್ಶನ್‌ ಅವರಿಗೂ ಯಾವುದೇ ಸಂಬಂಧ ಇಲ್ಲ. ಇಷ್ಟಕ್ಕೂ ನಾನು ದರ್ಶನ್‌ ಅವರನ್ನು ಗುರಿಯಾಗಿಸಿಕೊಂಡು ಯಾವುದೇ ಪೋಸ್ಟ್‌ ಮಾಡಿಲ್ಲ.’

- ಹೀಗೆ ಹೇಳುವ ಮೂಲಕ ದರ್ಶನ್‌ ಹಾಗೂ ಸುಮಲತಾ ಅಂಬರೀಶ್‌ ನಡುವೆ ಏನೇನೂ ಸರಿ ಇಲ್ಲ ಎಂಬ ವಿವಾದಕ್ಕೆ ಸುಮಲತಾ ಸ್ಪಷ್ಟನೆ ನೀಡಿದ್ದಾರೆ.

ದರ್ಶನ್‌ ಫೇಸ್‌ಬುಕ್‌, ಎಕ್ಸ್‌, ಇನ್‌ಸ್ಟಾಗ್ರಾಂನಲ್ಲಿ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದರು. ಸುಮಲತಾ ಅ‍ವರನ್ನೂ ಅನ್‌ಫಾಲೋ ಮಾಡಿದ್ದಾರೆ. ಅದರ ಬೆನ್ನಲ್ಲೇ ಸುಮಲತಾ ಅಂಬರೀಶ್‌ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೆಲವು ಮಾರ್ಮಿಕ ಸಂದೇಶಗಳನ್ನು ಹಂಚಿಕೊಳ್ಳುವ ಸರಣಿ ಪೋಸ್ಟ್‌ಗಳನ್ನು ಹಾಕಿದ್ದರು. ಈ ಪೋಸ್ಟ್‌ಗಳನ್ನು ಅ‍ವರು ದರ್ಶನ್ ಗುರಿಯಾಗಿಸಿಕೊಂಡು ಹಾಕಿದ್ದಾರೆ ಎಂದು ಸುದ್ದಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಮಾತನಾಡಿರುವ ಸುಮಲತಾ ಅವರು, ‘ಸೋಷಿಯಲ್‌ ಮೀಡಿಯಾಗಳಲ್ಲಿ ಯಾರೋ, ಯಾರನ್ನೋ ಅನ್‌ಫಾಲೋ ಮಾಡಿದ ಕೂಡಲೇ ನಿಜ ಜೀವನದ ಸಂಬಂಧಗಳು ದೂರ ಆಗುತ್ತದೆಯೇ?, ಸಂಬಂಧಗಳು ಹಾಳಾಗುತ್ತದೆಯೇ? ಖಂಡಿತಾ ಇಲ್ಲ. ಆದರೆ, ನನ್ನ ಪೋಸ್ಟ್‌ಗಳಿಗೂ ದರ್ಶನ್‌ ಅವರು ಅನ್‌ಫಾಲೋ ಮಾಡಿರುವುದಕ್ಕೆ ಲಿಂಕ್‌ ಮಾಡಿ ಮಾತನಾಡುತ್ತಿರುವುದು ನೋಡಿ ನಗಬೇಕೋ, ಬೇಸರಗೊಳ್ಳಬೇಕೋ ಗೊತ್ತಾಗುತ್ತಿಲ್ಲ.

ಈಗಲೂ ನಾನು ಹೇಳುತ್ತಿದ್ದೇನೆ, ದರ್ಶನ್‌ ನನ್ನ ಎರಡನೇ ಮಗನೇ’ ಎಂದಿದ್ದಾರೆ.‘ಚುನಾವಣೆಯಲ್ಲಿ ನನಗೆ ದರ್ಶನ್‌ ಸಪೋರ್ಟ್‌ ಮಾಡಿದ ನಂತರ ನನ್ನ ಮತ್ತು ದರ್ಶನ್‌ ಬಾಂಧವ್ಯ ಹುಟ್ಟಿಕೊಂಡಿದ್ದಲ್ಲ. ದರ್ಶನ್‌ ನಟನೆಯ ಮೊದಲ ಚಿತ್ರಕ್ಕೆ ನಾನು ಮತ್ತು ಅಂಬರೀಶ್ ಕ್ಲಾಪ್‌ ಮಾಡಿದ್ದೇವೆ. ಅಲ್ಲಿಂದ ದರ್ಶನ್‌ ನನ್ನ ಮನೆಯ ಮಗ. ಈಗ ಅವರು ಸೋಷಿಯಲ್‌ ಮೀಡಿಯಾಗಳಲ್ಲಿ ಅನ್‌ ಫಾಲೋ ಮಾಡಿದ ಕೂಡಲೇ ನಮ್ಮ ಸಂಬಂಧ ಹಾಳಾಗಿದೆ ಅಂದರೆ ಅದು ತಪ್ಪು. ಇಷ್ಟಕ್ಕೂ ನಮ್ಮ ವೈಯಕ್ತಿಕ ವಿಚಾರಗಳನ್ನು ಹೀಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವ ಅಗತ್ಯವಿಲ್ಲ. 

ತಾಯಿ ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದ ಸೃಷ್ಟಿಸಬೇಡಿ. ನಾನು ಯಾರನ್ನೂ ಗುರಿಯಾಗಿಸಿಕೊಂಡು ಪೋಸ್ಟ್‌ ಮಾಡಿಲ್ಲ. ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಿಗೆ ಎಳೆದು ತರುವ ಅಭ್ಯಾಸ ನನಗೆ ಇಲ್ಲ. ದರ್ಶನ್‌ ನನ್ನ ಒಬ್ಬರನ್ನೇ ಅನ್‌ಫಾಲೋ ಮಾಡಿಲ್ಲ. ಯಾರನ್ನು ಫಾಲೋ ಮಾಡಬೇಕು, ಮಾಡಬಾರದು ಎಂಬುದು ದರ್ಶನ್‌ ಅವರ ಆಯ್ಕೆ. ಅದನ್ನು ನಾವು ಗೌರವಿಸಬೇಕು’ ಎಂದು ಹೇಳಿದ್ದಾರೆ.