ನಗಿಸುವುದೇ ನನ್ನ ಆದ್ಯ ಕರ್ತವ್ಯ: ಶರಣ್‌

| Published : Apr 05 2024, 01:06 AM IST / Updated: Apr 05 2024, 06:06 AM IST

ಸಾರಾಂಶ

ಅವತಾರ ಪುರುಷ 2 ಎಂಬ ಬ್ಲ್ಯಾಕ್‌ ಮ್ಯಾಜಿಕ್‌ ಸಿನಿಮಾದಲ್ಲಿ ನಟಿಸಿದ್ದು ಎಕ್ಸೈಟಿಂಗ್ ಅನುಭವ ಎನ್ನುತ್ತಾ ಈ ಬಗ್ಗೆ ಮಾತನಾಡಿದ್ದಾರೆ ನಟ ಶರಣ್‌.

ಪ್ರಿಯಾ ಕೆರ್ವಾಶೆ

ಅವತಾರ ಪುರುಷ ಟ್ರೇಲರ್‌ ನೋಡಿ ಜನ ಬೆಚ್ಚಿಬಿದ್ದಿದ್ದಾರೆ..

ಅಲ್ಲಿಗೆ ನಮ್ಮ ಉದ್ದೇಶ ಈಡೇರಿತಲ್ಲಾ.. ಈ ಸಿನಿಮಾವನ್ನು ಬೇರೆ ಥರದಲ್ಲೇ ಮಾಡಿದ್ದು. ಅದನ್ನು ಜನ ಗುರುತಿಸುತ್ತಿದ್ದಾರೆ ಅಂದರೆ ನಮಗೆ ಸಣ್ಣ ರಿಲೀಫು. ಜನ ‘ಒಂಥರಾ ಬೇರೆ ಟ್ರೈ ಮಾಡಿದ್ದಾನೆ ಶರಣ್‌’ ಅಂತಿದ್ದಾರೆ. ಆ ಬಗ್ಗೆ ಖುಷಿ ಇದೆ. 

ಇಷ್ಟು ಸಮಯ ನಗಿಸ್ತಿದ್ರಿ, ಇದರಲ್ಲಿ ಜೀವ ಬಾಯಿಗೆ ಬರುವ ಹಾಗೆ ಹೆದರಿಸಿದ್ದೀರಿ?

ಬಹುಶಃ ಟ್ರೇಲರ್‌ ನೋಡಿ ಹೀಗೆ ಅಂದುಕೊಂಡಿರಬೇಕು. ಟ್ರೇಲರ್‌ನಲ್ಲಿ ಕಾಮಿಡಿಯ ಸೀನ್‌ಗಳ ಅವಶ್ಯಕತೆ ಬಂದಿರಲಿಲ್ಲ. ಹೀಗಾಗಿ ಅದನ್ನು ಸೇರಿಸಿಲ್ಲ. ಆದರೆ ಇಲ್ಲೂ ನಗಿಸೋದು ಇದ್ದೇ ಇದೆ. ಒಬ್ಬ ಕಾಮಿಡಿಯನ್‌ ಆಗಿ ಜನರನ್ನು ನಗಿಸುವುದು ನನ್ನ ಆದ್ಯ ಕರ್ತವ್ಯ, ಇಲ್ಲೂ ಅದು ಮಿಸ್‌ ಆಗಿಲ್ಲ. ಸಿನಿಮಾದಲ್ಲಿ ಮನರಂಜನೆ ನೀಡಿಯೇ ನೀಡುತ್ತೇನೆ.

ಮೊದಲ ಭಾಗ ಬಂದು ಇಷ್ಟು ಸಮಯದ ನಂತರ 2ನೇ ಭಾಗದ ಘೋಷಣೆಯಾಯ್ತು. ಇದರ ಹಿಂದೆ ಏನು ನಡೆಯಿತು?

ಸಿನಿಮಾ ರೆಡಿ ಇತ್ತು. ಒಂದೊಳ್ಳೆ ದಿನಕ್ಕಾಗಿ ಕಾಯುತ್ತಿದ್ದರು. ಏಪ್ರಿಲ್ 5 ದಿನ ಬಹಳ ಚೆನ್ನಾಗಿದೆ ಎಂದು ನಿರ್ಮಾಪಕರು, ವಿತರಕರು ಅಂದೇ ರಿಲೀಸ್‌ ಮಾಡಲು ಮುಂದಾದರು. ಯುಗಾದಿಯೂ ಹತ್ತಿರದಲ್ಲಿದೆ, ರಜೆಗಳೂ ಇರುತ್ತವೆ ಅನ್ನುವುದೂ ಕಾರಣ.

ಟ್ರೇಲರ್‌ನಲ್ಲಿ ನಿಮ್ಮ ಲುಕ್‌ ನೋಡಿ ಇದು ಹಾರರ್‌ ಸಿನಿಮಾ ಅಂತಿದ್ದಾರೆ ಜನ?

ನಿಜ. ಆದರೆ ಇದು ಹಾರರ್‌ ಅಲ್ಲ. ನನ್ನ ಮುಂದಿನ ಸಿನಿಮಾ ‘ಛೂಮಂತರ್‌’ ಹಾರರ್‌. ಇದು ಮಾಟ, ಮಂತ್ರ ಆಧರಿಸಿದ ಫ್ಯಾಂಟಸಿ ಥ್ರಿಲ್ಲರ್‌. ಬಹಳ ಎಕ್ಸೈಟೆಡ್‌ ಆಗಿಯೇ ಈ ಸಿನಿಮಾ ಒಪ್ಪಿಕೊಂಡಿದ್ದೆ

. ಈ ಥರ ಮಾಟ, ಮಂತ್ರದ ಬಗ್ಗೆ ನಿಜ ಜೀವನದಲ್ಲಿ ನೋಡಿದ್ದು, ಕೇಳಿದ್ದು?

ಕೇಳಿದ್ದುಂಟು, ನೋಡಿದ್ದಿಲ್ಲ. ಒಂದು ಕೂದಲು ಸಿಕ್ಕರೆ ಸಾಕು, ಮಾಂತ್ರಿಕರು ಅವರ ಮಾಂತ್ರಿಕ ಗೊಂಬೆಗೆ ಆ ಕೂದಲನ್ನು ಜೋಡಿಸುತ್ತಾರೆ, ಆಗ ಗೊಂಬೆಗೆ ಚುಚ್ಚಿದರೆ ವ್ಯಕ್ತಿಗೆ ಚುಚ್ಚಿದ ಹಾಗಾಗುತ್ತದೆ ಎಂದೆಲ್ಲ ರೋಚಕ ಕಥೆ ಕೇಳಿದ್ದೆ. ಆ ಬಗ್ಗೆ ಬಹಳ ಕುತೂಹಲ ಇತ್ತು. ಆದರೆ ಆ ಜಗತ್ತಿನ ಬಗ್ಗೆ ತಿಳಿದದ್ದು ಈ ಸಿನಿಮಾದಿಂದ. ನಮ್ಮ ನಿರ್ದೇಶಕ ಸಿಂಪಲ್‌ ಸುನಿ ಬ್ಲ್ಯಾಕ್‌ ಮ್ಯಾಜಿಕ್ ಬಗ್ಗೆ ಬಹಳ ಸಂಶೋಧನೆ ಮಾಡಿದ್ದಾರೆ.

 ಸಿನಿಮಾದ ಗ್ರಾಫಿಕ್ಸ್‌ ನೆಕ್ಸ್ಟ್‌ ಲೆವೆಲ್‌ನಲ್ಲಿದೆ ಎಂಬ ಮಾತಿದೆ?

ಹೌದು, ಗ್ರಾಫಿಕ್‌ ವಿಚಾರದಲ್ಲಿ ಈಗ ಜನರಿಗೆ ಜ್ಞಾನವಿದೆ. ಸಣ್ಣ ಪ್ರಮಾದವನ್ನೂ ಅವರು ಗುರುತಿಸುತ್ತಾರೆ. ಅವರ ನಿರೀಕ್ಷೆಯನ್ನು ಮ್ಯಾಚ್‌ ಮಾಡದಿದ್ದರೆ ಸಿನಿಮಾ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಗ್ರಾಫಿಕ್ಸ್‌ನಲ್ಲಿ ಬಹಳ ಎಚ್ಚರಿಕೆಯಿಂದ ಅಷ್ಟೇ ಸೊಗಸಾಗಿ ಕೆಲಸ ಮಾಡಲಾಗಿದೆ. ಸಿನಿಮಾದ ಹೈಲೈಟ್‌...

ತ್ರಿಶಂಕು ಪಯಣ. ತ್ರಿಶಂಕು ಜಗತ್ತಿನ ಒಳಗೆ ಪ್ರವೇಶಿಸುವ ರೋಮಾಂಚನಕಾರಿ ಸನ್ನಿವೇಶ ಈ ಭಾಗದಲ್ಲಿದೆ. ಮೊದಲ ಭಾಗದಲ್ಲಿ ತ್ರಿಶಂಕು ಲೋಕದ ರೆಫರೆನ್ಸ್‌ ಬಂದಿತ್ತು. ಈ ಭಾಗದಲ್ಲಿ ಆ ಜಗತ್ತಿಗೆ ಪ್ರವೇಶ ಮಾಡುತ್ತೇವೆ.