ಆಡು ಹೇಗೆ ಯುವಕರ ಬದುಕನ್ನೇ ಬದಲು ಮಾಡುತ್ತೆ, ಅಧಿಕಾರ ಶಾಹಿಗಳು ವ್ಯವಸ್ಥೆಯನ್ನು ಹೇಗೆಲ್ಲ ಬಳಸಿಕೊಳ್ಳುತ್ತಾರೆ ಅನ್ನೋದನ್ನು ವಾಸ್ತವದ ನೆಲೆಗಟ್ಟಿನಲ್ಲಿ ಚಿತ್ರ ಹೇಳುತ್ತದೆ.

ಆಡೇ ನಮ್ ಗಾಡ್ 
ತಾರಾಗಣ: ಅಜಿತ್‌ ಬೊಪ್ಪನಹಳ್ಳಿ, ನಟರಾಜ್‌, ಅನೂಪ್‌ ಶೂನ್ಯ, ಮಂಜುನಾಥ್‌ ಜಂಬೆ, ಸಾರಿಕಾ ರಾವ್‌, ಬಿ ಸುರೇಶ್‌ 
ನಿರ್ದೇಶನ: ಪಿ ಎಚ್‌ ವಿಶ್ವನಾಥ್‌ 
ರೇಟಿಂಗ್‌ : 3 - 
ಪ್ರಿಯಾ ಕೆರ್ವಾಶೆ 

ಈ ಸಿನಿಮಾ ನೋಡುವಾಗ ಕೆಲವು ಸನ್ನಿವೇಶದಲ್ಲಿ ಅನಂತ್‌ನಾಗ್ ಅವರ ಒಂದೆರಡು ಚಿತ್ರ ನೆನಪಾಗುತ್ತವೆ, ಮತ್ತೊಮ್ಮೆ ತಿಥಿ ಸಿನಿಮಾ ನೆನಪಾಗುತ್ತದೆ. ಹಾಗಂತ ಈ ಚಿತ್ರದಲ್ಲಿ ಆ ಸಿನಿಮಾ ರೀತಿಯ ಕಥೆ ಇಲ್ಲ. ಆದರೆ ಆ ಬಗೆಯ ಬುದ್ಧಿವಂತಿಕೆ, ವ್ಯಂಗ್ಯ, ವಿಡಂಬನೆ ಇದೆ. ಅನಗತ್ಯ ಬಿಲ್ಡಪ್‌, ರೊಮ್ಯಾನ್ಸ್‌, ಬಲವಂತದ ಸಂದೇಶದ ಹಂಗಿಲ್ಲದೇ ವಿಡಂಬನೆಯಲ್ಲೇ ಎಲ್ಲ ಹೇಳುವ ಸಿನಿಮಾದ ಚಿತ್ರಕಥೆಗೆ ಒಳ್ಳೆ ಸ್ಕೋರ್‌ ಕೊಡಬೇಕು. ಕೋವಿಡ್‌ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡ ನಾಲ್ವರು ಅಡ್ನಾಡಿ ಯುವಕರ ಬದುಕಿಗೆ ಬರುವುದು ಒಂದು ಆಡು. ಎಷ್ಟೇ ಸಾಗ ಹಾಕಿದರೂ ಕೊರಳಿಗೇ ಸುತ್ತಿಕೊಳ್ಳುವ ಈ ಆಡು ಹೇಗೆ ಯುವಕರ ಬದುಕನ್ನೇ ಬದಲು ಮಾಡುತ್ತೆ, ಅಧಿಕಾರ ಶಾಹಿಗಳು ವ್ಯವಸ್ಥೆಯನ್ನು ಹೇಗೆಲ್ಲ ಬಳಸಿಕೊಳ್ಳುತ್ತಾರೆ ಅನ್ನೋದನ್ನು ವಾಸ್ತವದ ನೆಲೆಗಟ್ಟಿನಲ್ಲಿ ಚಿತ್ರ ಹೇಳುತ್ತದೆ. ಊಹಿಸಲಾಗದ ತಿರುವುಗಳು ಗಮನ ಸೆಳೆಯುತ್ತವೆ. 

ಕ್ಲೈಮ್ಯಾಕ್ಸ್ ಊಹಿಸುವಂತಿದೆ, ಆದರೆ ಅದನ್ನು ವಾಚ್ಯವಾಗಿಸದೇ ಇದ್ದದ್ದು ಸಿನಿಮಾದ ಪಾಸಿಟಿವಿಟಿ. ಸಾಮಾನ್ಯ ಹಾಸ್ಯ ಚಿತ್ರಗಳಲ್ಲಿ ಬರುವ ಸವಕಲು ಸಂಭಾಷಣೆ ಇಲ್ಲ. ಟೈಮ್ಲಿ ಕಾಮಿಡಿ ನಿಜಕ್ಕೂ ನಗು ತರಿಸುತ್ತೆ. ಆದರೆ ಹಿರಿಯ ಲೇಖಕರ ಸಂವೇದನಾಶೀಲ ಮಾತನ್ನ ಕೊಂಚ ವಿಡಂಬನೆಯಿಂದ ಬಳಸಿದ್ದು ಬೇಡದಿತ್ತೇನೋ. ಅಜಿತ್‌, ನಟ, ಅನೂಪ್‌, ಮಂಜುನಾಥ್‌, ಸಾರಿಕಾ ಅಭಿನಯ, ಮ್ಯಾನರಿಸಂ ಚೆನ್ನಾಗಿದೆ. ಸಂಭಾಷಣೆ ಚುರುಕಾಗಿದೆ. ಕೊಡೋ ಕಾಸಿಗೆ ಮೋಸವಿಲ್ಲದೆ ಮನರಂಜನೆ ಕೊಡುವ, ಚಿಂತನೆಗೆ ಹಚ್ಚುವ ಒಂದೊಳ್ಳೆ ಸಿನಿಮಾ ಆಡೇ ನಮ್ ಗಾಡ್‌.