ಅನೀಶ್ ತೇಜೇಶ್ವರ್ ನಟನೆಯ ಬಹುನಿರೀಕ್ಷೆಯ ಆರಾಮ್ ಅರವಿಂದ ಸ್ವಾಮಿ ಚಿತ್ರದ ಮೊದಲ ಹಾಡಿನ ಬಿಡುಗಡೆ ಜತೆಗೆ ಸಿನಿಮಾ ಬಿಡುಗಡೆ ದಿನಾಂಕ ಕೂಡ ಘೋಷಣೆ ಆಗಿದೆ.

 ಸಿನಿವಾರ್ತೆ

ನಟ ಅನೀಶ್‌ ತೇಜೇಶ್ವರ್‌ ಅವರ ‘ಆರಾಮ್ ಅರವಿಂದ ಸ್ವಾಮಿ’ ಸಿನಿಮಾ ಹೆಸರಿನಿಂದಲೇ ಗಮನ ಸೆಳೆದಿತ್ತು. ಈಗ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮೊದಲ ಹಾಡಿನ ಬಿಡುಗಡೆ ಜತೆಗೆ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ.

ಆ ಮೂಲಕಅನೀಶ್‌ ತೇಜೇಶ್ವರ್ ಹಾಗೂ ಮಿಲನಾ ನಾಗರಾಜ್‌ ಜೋಡಿಯ ‘ಆರಾಮ್‌ ಅರವಿಂದ ಸ್ವಾಮಿ’ ಚಿತ್ರದ ಮೆಲೋಡಿ ‘ಹೇಗೋ ಏನೋ’ ಎಂಬ ಈ ರೊಮ್ಯಾಂಟಿಕ್‌ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಾಡಿಗೆ ಪ್ರಮೋದ್‌ ಮರವಂತೆ ಸಾಹಿತ್ಯ, ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.

ಶ್ರೀಕಾಂತ್‌ ಪ್ರಸನ್ನ, ಪ್ರಶಾಂತ್‌ ರೆಡ್ಡಿ ಎಸ್‌ ನಿರ್ಮಾಣದ ಈ ಚಿತ್ರವನ್ನು ಅಭಿಷೇಕ್‌ ಶೆಟ್ಟಿ ನಿರ್ದೇಶಿಸಿದ್ದಾರೆ. ‘ಈ ಹಾಡಿನ ಸಾಹಿತ್ಯದಷ್ಟೇ ಸಿನಿಮಾ ಕೂಡ ಚೆನ್ನಾಗಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗುತ್ತದೆಂಬ ನಂಬಿಕೆ ಇದೆ’ ಎಂದು ಅನೀಶ್‌ ತೇಜೇಶ್ವರ್‌ ಹೇಳಿದ್ದಾರೆ. ಅಂದಹಾಗೆ ಸಿನಿಮಾ ನವೆಂಬರ್‌ 22ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

ಅಂದಹಾಗೆ ಈ ಚಿತ್ರದ ನಿರ್ದೇಶಕ ಅಭಿಷೇಕ್‌ ಶೆಟ್ಟಿ ಈ ಹಿಂದೆ ‘ನಮ್ ಗಣಿ ಬಿಕಾಂ ಪಾಸಾದ’ ಚಿತ್ರದಲ್ಲಿ ನಾಯಕನಾಗಿ ಗಮನ ಸೆಳೆದವರು. ಈಗ ನಿರ್ದೇಶಕರಾಗಿ ಮತ್ತೊಂದು ಇನ್ನಿಂಗ್ಸ್ ಶುರು ಮಾಡಿದ್ದಾರೆ.