ಅವತಾರ ಪುರುಷ ಚಿತ್ರ ಜೋಶ್‌ನಲ್ಲೇ ಶುರುವಾಗುತ್ತದೆ.  ಎಂದೂ ಅಸಾಮಾನ್ಯವಾಗಿ ಯೋಚಿಸುವ ನಿರ್ದೇಶಕ ಸುನಿ ಇಲ್ಲಿ ಬೇರೆ ಥರ ಆಲೋಚಿಸಿದ್ದಾರೆ.

ಅವತಾರ ಪುರುಷ

ತಾರಾಗಣ: ಶರಣ್‌, ಸಾಯಿ ಕುಮಾರ್, ಅಶುತೋಶ್‌ ರಾಣಾ, ಆಶಿಕಾ ರಂಗನಾಥ್‌

ನಿರ್ದೇಶನ: ಸಿಂಪಲ್‌ ಸುನಿ

ರೇಟಿಂಗ್‌: 3

- ಪೀಕೆ ‘ಆರ್ಟಿಸ್ಟ್‌ ಆದರೆ ಅಪರೂಪಕ್ಕೆ ಮಾತ್ರ ಕೆಲಸ. ಜೂನಿಯರ್‌ ಆರ್ಟಿಸ್ಟ್‌ ಆದರೆ ದಿನಾ ಕೆಲಸ. ದಿನಾ ಸಂಬಳ. ನೀನೇನು ಆಗ್ತೀಯಾ?’

‘ಹಾಗಿದ್ರೆ ನಾನು ಜೂನಿಯರ್ ಆರ್ಟಿಸ್ಟ್‌ ಆಗ್ತೀನಿ.’

ಪುಟ್ಟ ಹುಡುಗ ಹಾಗೂ ಕಾಸ್ಟಿಂಗ್‌ ಡೈರೆಕ್ಟರ್‌ ನಡುವೆ ನಡೆಯುವ ಸಂಭಾಷಣೆಯ ಝಲಕ್‌. ಸಿನಿಮಾದುದ್ದಕ್ಕೂ ಅಲ್ಲಲ್ಲಿ ಇಂಥಾ ಐರನಿಯ ಸಾಲುಗಳಿವೆ. ದುರಂತ ಎಂದರೆ ಕೊನೆಗೆ ಸಿನಿಮಾವೇ ಒಂದು ‘ಐರನಿ’ ಥರ ಭಾಸವಾಗುತ್ತದೆ. ಕಳೆದ ಭಾಗದ ಕಥೆಯಲ್ಲಿ ರಾಮಾ ಜೋಯಿಸ್‌ ಮನೆಯಿಂದ ಹೊರ ನಡೆದ ಓವರ್‌ ಆ್ಯಕ್ಟಿಂಗ್‌ ಅನಿಲ ಈ ಭಾಗದಲ್ಲಿ ಮತ್ತೆ ಮನೆಗೆ ಎಂಟ್ರಿ ಕೊಡುತ್ತಾನೆ.

 ಆತ ಹೇಗೆ ಮನೆಮಂದಿಯನ್ನು ಕಾಯುತ್ತಾನೆ, ತ್ರಿಶಂಕು ಲೋಕಕ್ಕೆ ಹೋಗುತ್ತಾನಾ ಎನ್ನುವುದು ಎರಡನೇ ಭಾಗದ ಒನ್‌ಲೈನ್‌. ಚಿತ್ರ ಜೋಶ್‌ನಲ್ಲೇ ಶುರುವಾಗುತ್ತದೆ. ಇಂಟರ್‌ವಲ್‌ ತನಕ ಒಂದು ಮಟ್ಟಿನ ತಮಾಷೆ ಮನರಂಜನೆ ನೀಡುತ್ತದೆ. ಆಮೇಲೆ ಎದುರಾಗುವುದು ಮಾಟಗಾರರ ಜಗತ್ತು. ಇಂಥಾ ಸೀನ್‌ಗಳು ಸಿನಿಮಾವನ್ನು ನೆಕ್ಸ್ಟ್‌ ಲೆವೆಲ್‌ಗೆ ಕೊಂಡೊಯ್ಯಬಹುದು ಎಂಬ ನಿರೀಕ್ಷೆ ಸಾಮಾನ್ಯ. ಆದರೆ ಎಂದೂ ಅಸಾಮಾನ್ಯವಾಗಿ ಯೋಚಿಸುವ ನಿರ್ದೇಶಕ ಸುನಿ ಇಲ್ಲಿ ಬೇರೆ ಥರ ಆಲೋಚಿಸಿದ್ದಾರೆ.

ಉಳಿದಂತೆ ಶರಣ್‌ ಬಹಳ ಲವಲವಿಕೆಯಿಂದ ನಟಿಸಿದ್ದಾರೆ. ಚಿತ್ರದ ದೊಡ್ಡ ಪ್ಲಸ್‌ ಪಾಯಿಂಟ್‌ ಅವರೇ. ಮಾಂತ್ರಿಕ ಜಗತ್ತಿನ ದುಷ್ಟರಾಗಿ ಅಶುತೋಷ್‌ ರಾಣಾ, ಬಾಲಾಜಿ ಮನೋಹರ್‌ ಅವರದು ಉತ್ತಮ ಪಾತ್ರ ನಿರ್ವಹಣೆ. ವಿಲಿಯಂ ಡೇವಿಡ್‌ ಸಿನಿಮಾಟೋಗ್ರಫಿ ಚೆನ್ನಾಗಿದೆ. ಒಟ್ಟಾರೆ ವಿಭಿನ್ನ ಪಾತ್ರದಲ್ಲಿ ಶರಣ್‌ ನಟನೆ ನೋಡಲು, ಅಲ್ಲಲ್ಲಿ ಕೆಲವು ಚಮಕ್‌ ಡೈಲಾಗ್‌ಗಳನ್ನು ಆಸ್ವಾದಿಸಲು, ಈ ಚಿತ್ರದ ಹಿಂದಿನ ಭಾಗ ನೋಡಿದವರು, ಮುಂದೆ ಏನಿರಬಹುದು ಎಂದು ಕುತೂಹಲ ತಣಿಸಲು ಈ ಸಿನಿಮಾ ನೋಡಬಹುದು.