ಸಾರಾಂಶ
ದಿ ಸೀಡ್ ಆಫ್ ಸ್ಕೇರ್ಡ್ ಫಿಗ್
ಇರಾನಿನ ಐತಿಹಾಸಿಕ ಪ್ರತಿಭಟನೆಯಿಂದ ಪ್ರೇರಣೆ ಪಡೆದು ನಿರ್ಮಿಸಿರುವ ಸಿನಿಮಾ. ತೆಹರಾನ್‌ನ ಯುವತಿಯೊಬ್ಬಳ ಸಾವಿನ ತನಿಖೆಗೆ ಬರುವ ಅಧಿಕಾರಿ ಇಮಾನ್‌ನ ಆಂತರಿಕ ಹಾಗೂ ಬಾಹ್ಯ ಹೋರಾಟದ ಕಥೆ. ತಾನು ವಹಿಸಿಕೊಂಡ ಹೊಸ ಜವಾಬ್ದಾರಿಯ ಜೊತೆಗೆ ಮಾನಸಿಕ ಒತ್ತಡದೊಂದಿಗೂ ಹೋರಾಡುವ ಇಮಾನ್ ಮನಸ್ಥಿತಿಯ ಮೂಲಕ ಅನೇಕ ಅಂಶಗಳನ್ನು ಸಿನಿಮಾ ಮನದಟ್ಟು ಮಾಡಿಸುತ್ತದೆ.
ಕಾನ್, ಗೋಲ್ಡನ್ ಗ್ಲೋಬ್ ಸೇರಿದಂತೆ ಅನೇಕ ಪ್ರಶಸ್ತಿ ಗೆದ್ದಿರುವ ಚಿತ್ರವಿದು. ಕಂಟೆಂಪರರಿ ವರ್ಲ್ಡ್ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಭಾಷೆ: ಇರಾನ್, ಅವಧಿ: 166 ನಿಮಿಷ*
ಕಾಟ್ ಬೈ ದಿ ಟೈಡ್ಸ್
ಇದೊಂದು ಲವ್ ಡ್ರಾಮಾ. ಅನೇಕ ರಾಜಕೀಯ, ಸಾಮಾಜಿಕ ಸ್ಥಿತ್ಯಂತ್ರಗಳ ನಡುವೆ ಬದಲಾಗದ ಪ್ರೇಮದ ಬಗೆಗೆ ಈ ಸಿನಿಮಾವಿದೆ. 21 ವರ್ಷಗಳ ಪ್ರೇಮಕಥೆ ಈ ಸಿನಿಮಾದ ಹೈಲೈಟ್. ಚೀನಾದ ಬದಲಾವಣೆಯ ಬಿರುಗಾಳಿ ನಡುವೆ ಷಾವ್‌ಷಾವ್ ಮತ್ತು ಬಿನ್ ಪ್ರೇಮ ಅರಳುತ್ತ ಮುದುಡುತ್ತ ಕೊನೇತನಕವೂ ಜೀವ ಉಳಿಸಿಕೊಂಡಿರುವುದು ಮಹತ್ವ ಪಡೆಯುತ್ತದೆ. ಸಾಮಾಜಿಕ ಬದಲಾವಣೆಗಳ ಚೌಕಟ್ಟಿನೊಳಗೆ ವ್ಯಕ್ತಿಗತ ಅನುಭವಗಳನ್ನು ಶೋಧಿಸುವ ಚಿತ್ರ. ಪ್ರೇಮಕಥೆಯ ಹೊಸ ಬಗೆಯ ನಿರೂಪಣೆ ಎಂದು ಸಿನಿಮಾ ತಜ್ಞರು ವಿಶ್ಲೇಷಿಸಿದ್ದಾರೆ.
ಭಾಷೆ: ಚೈನೀಸ್, ಅವಧಿ: 111 ನಿಮಿಷ*
ಐ ಆ್ಯಮ್ ಸ್ಟಿಲ್ ಹಿಯರ್
70ರ ದಶಕದಲ್ಲಿ ಬ್ರೆಜಿಲ್‌ನಲ್ಲಿ ಮಿಲಿಟರಿ ಸರ್ವಾಧಿಕಾರ ಪಾರಮ್ಯದಲ್ಲಿದ್ದಾಗ ನಡೆಯುವ ಕಥೆ. ಯೂನಿಸ್ ಪೈವಾ ಎಂಬ ಐದು ಮಕ್ಕಳ ತಾಯಿ, ಸರ್ಕಾರದ ದಬ್ಬಾಳಿಕೆ, ದೌರ್ಜನ್ಯ ತನ್ನ ಕುಟುಂಬದ ಮೇಲೂ ಆಗುತ್ತಿರುವುದರ ವಿರುದ್ಧ ಸಿಡಿದೆದ್ದು ತನ್ನ ಬದುಕನ್ನು ಕಟ್ಟಿಕೊಳ್ಳಲು ಯತ್ನಿಸುತ್ತಾಳೆ. ಬ್ರೆಜಿಲ್‌ನ ಚರಿತ್ರೆಯಲ್ಲಿ ಹುದುಗಿ ಹೋಗಿರುವ ಸಂಗತಿಗಳನ್ನು ಈ ಚಲನಚಿತ್ರ ಹೊರತೆಗೆಯುತ್ತದೆ.
ಭಾಷೆ: ಬ್ರೆಜಿಲ್ ಅವಧಿ: 136 ನಿಮಿಷ
**ಗ್ರಾಂಡ್ ಟೂರ್
ಕಾನ್ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನಕ್ಕೆ ಪ್ರಶಸ್ತಿ ಪಡೆದ ಸಿನಿಮಾ. ಮದುವೆ ಹೊತ್ತಿಗೇ ಅರಿಯದ ವಿಷಣ್ಣತೆಗೆ ತುತ್ತಾಗುವ ಬ್ರಿಟಿಷ್ ಸಾಮ್ರಾಜ್ಯದ ಆಡಳಿತಾಧಿಕಾರಿ ಎಡ್ವರ್ಡ್ ಮದುವೆಯಿಂದ ಪರಾರಿಯಾಗುವ ಕಥೆ.ಬರ್ಮಾದ ರಂಗೂನ್‌ನಲ್ಲಿ 1918ರ ಕಾಲಘಟ್ಟದಲ್ಲಿ ನಡೆಯುವ ಕಥೆಯಲ್ಲಿ ಬದುಕಿನ ಶೂನ್ಯತೆಯ ಬಗ್ಗೆ ಜಿಜ್ಞಾಸೆ, ಜೀವನದ ಅರ್ಥದ ಹುಡುಕಾಟವಿದೆ
ಭಾಷೆ: ಪೋರ್ಚುಗಲ್, ಅವಧಿ: 129 ನಿಮಿಷ*
ಅನೋರ
ಆಸ್ಕರ್‌ನಲ್ಲಿ ಬೆಸ್ಟ್ ಪಿಕ್ಚರ್ ಪ್ರಶಸ್ತಿ ಪಡೆದ ಸಿನಿಮಾ. ತನ್ನ ವಿಭಿನ್ನ ವಿನ್ಯಾಸದಿಂದಲೇ ಜಗತ್ತಿನ ಗಮನ ಸೆಳೆದಿರುವ ಚಿತ್ರವಿದು. ಬ್ರೂಕ್ಲಿನ್‌ನ ವೇಶ್ಯಾಗೃಹದಲ್ಲಿರುವ ಯುವತಿ ಅನೋರ. ಆಕೆಗೆ ಶ್ರೀಮಂತ ಅಧಿಕಾರಿ ಪುತ್ರನನ್ನು ವಿವಾಹವಾಗುವ ಸುವರ್ಣಾವಕಾಶ ಬರುತ್ತದೆ. ಆದರೆ ಇದಕ್ಕೆ ಆಕೆಯ ಪೋಷಕರೇ ತಡೆಯಾಗುತ್ತಾರೆ. ಸಿಂಡ್ರೆಲ್ಲಾ ಕಥೆಯ ನಾಯಕಿಗೆ ಎದುರಾದಂಥಾ ಅನೇಕ ಅಡೆತಡೆಗಳ ಮಧ್ಯೆ ಆಕೆಯ ಬದುಕು ಯಾವ ಹಾದಿಗೆ ಹೊರಳಿತು ಎಂಬುದು ಸಿನಿಮಾದ ಒನ್‌ಲೈನ್.
ಭಾಷೆ: ಇಂಗ್ಲಿಷ್, ಅವಧಿ: 138 ನಿಮಿಷ
*ಟು ಎ ಲ್ಯಾಂಡ್ ಅನ್‌ನೋನ್
ವಲಸಿಗರ ಮಾನಸಿಕ ತುಮುಲ, ಬಿಡುಗಡೆಗಾಗಿನ ಪರಿತಪಿಸುವಿಕೆಯನ್ನು ಗಾಢವಾಗಿ ಕಟ್ಟಿಕೊಡುವ ಚಿತ್ರವಿದು. ಚಟಿಲಾ ಮತ್ತು ರೆದ ಎಂಬ ಪ್ಯಾಲೆಸ್ತೇನ್ ರೆಫ್ಯೂಜಿಗಳು ಅನಿವಾರ್ಯವಾಗಿ ಅಥೆನ್ಸ್‌ನಲ್ಲಿ ಬದುಕು ಸವೆಸಬೇಕಾಗುತ್ತದೆ. ಆ ನೆಲವನ್ನು ಬಿಟ್ಟು ನಕಲಿ ಪಾಸ್‌ಪೋರ್ಟ್ ಮೂಲಕ ಜರ್ಮನಿಗೆ ಹೋಗಬೇಕೆಂಬ ಮಹದಾಸೆಯಲ್ಲಿ ದುಡಿಯುತ್ತಿರುತ್ತಾರೆ. ಆದರೆ ಒಂದು ತೀವ್ರ ಘಳಿಗೆ ಆ ಆಸೆ ಕಮರುವ ಸನ್ನಿವೇಶವನ್ನು ಸಿನಿಮಾ ಗಾಢವಾಗಿ ಕಟ್ಟಿಕೊಡುತ್ತದೆ.
ಭಾಷೆ: ಇಂಗ್ಲಿಷ್, ಅರೇಬಿಕ್, ಅವಧಿ: 105 ನಿಮಿಷ
*ಬ್ಲ್ಯಾಕ್ ಡಾಗ್
ಚೀನಾದಲ್ಲಿನ ಕ್ಷಿಪ್ರ ಆರ್ಥಿಕ ಅಭಿವೃದ್ಧಿಯಿಂದ ಹಿಂದುಳಿದ ಸಾಮಾನ್ಯ ಜನರ ಬದುಕು ಏನಾಯ್ತು ಅನ್ನೋದನ್ನು ಹೇಳುವ ಸಿನಿಮಾವಿದು. ಜೈಲಿಂದ ಬಿಡುಗಡೆಗೊಂಡು ಹಾಳು ಸುರಿಯುವ ತನ್ನೂರಿಗೆ ಮರಳುವ ಸ್ಟಂಟ್ ಮೋಟಾರ್ ಸೈಕಲಿಸ್ಟ್ ಲ್ಯಾಂಗ್ ನಾಯಿಯೊಂದರ ಜೊತೆ ಗೆಳೆತನಕ್ಕೆ ಬೀಳುವ ಕಥೆ. ಬೀಜಿಂಗ್ ಒಲಿಂಪಿಕ್ಸ್‌ಗಾಗಿ ಊರಲ್ಲಿರುವ ಪ್ರಾಣಿಗಳನ್ನೆಲ್ಲ ನಿರ್ನಾಮ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡ ನಾಯಕ ಆಕಸ್ಮಾತ್ ಆಗಿ ಕರಿನಾಯಿಯ ಸ್ನೇಹಿತನಾಗುವುದನ್ನು ಸಿನಿಮಾ ಸೊಗಸಾಗಿ ವಿವರಿಸುತ್ತದೆ.
ಭಾಷೆ : ಚೈನೀಸ್, ಅವಧಿ: 110 ನಿಮಿಷ*
ದ ಗರ್ಲ್ ವಿತ್ ದ ನೀಡಲ್
1920ರಲ್ಲಿ ಸಂಭವಿಸಿದ ಸರಣಿ ಹತ್ಯಾಕಾಂಡದ ನೈಜ ಘಟನೆಯಿಂದ ಪ್ರೇರಿತವಾದ ಕತೆ. ಪ್ರೀತಿ ಮತ್ತು ನೈತಿಕತೆಯ ನೆಲೆ ಇಲ್ಲದವರ ಸ್ಥಿತಿಯನ್ನು ಕಟ್ಟಿಕೊಡುತ್ತದೆ. ಮೊದಲ ಮಹಾಯುದ್ಧದ ನಂತರದ ದಿನಗಳಲ್ಲಿ ಕಾರೋಲೈನ್ ಎಂಬ ಬಡ ಯುವತಿ ಅರಿವಿಲ್ಲದೇ ಭೂಗತ ಜಗತ್ತಿನ ಕಂಬಂಧ ಬಾಹುಗಳಲ್ಲಿ ಸಿಲುಕುವ ಕಥೆ.
ಭಾಷೆ: ಡ್ಯಾನಿಷ್ (ಡೆನ್ಮಾರ್ಕ್), ಅವಧಿ: 115 ನಿಮಿಷ
ದಿ ಸೆಕೆಂಡ್ ಆಕ್ಟ್ಫ್ರೆಂಚ್
ಕಾಮಿಡಿ ಚಲನಚಿತ್ರ. ಕ್ವೆಂಟಿನ್ ಡ್ಯುಪಿಯಕ್ಸ್ ಕತೆ, ಚಿತ್ರಕತೆ, ಸಂಪಾದನೆ ಮತ್ತು ನಿರ್ದೇಶನ. ಇದರಲ್ಲಿ ಒಬ್ಬಳು ಯುವತಿ ತಾನು ಪ್ರೀತಿಸುತ್ತಿರುವ ಗೆಳೆಯನನ್ನು ತನ್ನ ಫ್ಯಾಮಿಲಿಯನ್ನು ಭೇಟಿ ಮಾಡಿಸಲು ಮನೆಗೆ ಕರೆತರುತ್ತಾಳೆ. ಆದರೆ ಆತನಿಗೋ ಆಕೆಯ ಮೇಲೆ ಅಷ್ಟೊಂದು ಪ್ರೇಮವೇನೂ ಇಲ್ಲ. ಆಕೆಯನ್ನು ಬೇರೊಬ್ಬ ಗೆಳೆಯನಿಗೆ ದಾಟಿಸಲು ಅವನ ಪ್ರಯತ್ನ. ಇಂಥ ಸನ್ನಿವೇಶದಲ್ಲಿ ಏನೆಲ್ಲ ವಿನೋದ ಹುಟ್ಟಬಹುದೋ ಅದನ್ನೆಲ್ಲ ಈ ಚಿತ್ರದಲ್ಲಿ ಆನಂದಿಸಬಹುದು.ಭಾಷೆ: ಫ್ರೆಂಚ್, ಅವಧಿ: 80 ನಿಮಿಷ
ವೇವ್ಸ್
1968ರಲ್ಲಿ ಫ್ರೆಂಚ್ ದಂಗೆಯ ಹಿಂದಿನ ಕ್ಷಣಗಳನ್ನು ಹಿಡಿದಿಡುವ ಪ್ರಯತ್ನ ಈ ಸಿನಿಮಾದಲ್ಲಾಗಿದೆ. ದಂಗೆಯ ಸೂಚನೆ ಬಗ್ಗೆ ಚಿಂತಿತನಾಗುವ ರೇಡಿಯೋ ಕೇಂದ್ರದ ಕೆಲಸಗಾರ ತಾಮಸ್‌ನ ಮನಸ್ಥಿತಿಯನ್ನು ಈ ಸಿನಿಮಾ ಕಟ್ಟಿಕೊಡುತ್ತದೆ. ಕುಟುಂಬ ಬಾಂಧವ್ಯ ಹಾಗೂ ಸಾಮಾಜಿಕತೆಯ ಮುಖಾಮುಖಿ ಈ ಸಿನಿಮಾದಲ್ಲಾಗಿದೆ.
ಅವಧಿ: 131 ನಿಮಿಷ, ಭಾಷೆ: ಫ್ರೆಂಚ್
ಸ್ಟೋರಿ ಆಫ್ ಸುಲೆಮಾನ್
ವಲಸಿಗರ ಮೂಲಭೂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾ. ಆಹಾರವನ್ನು ಬಟವಾಡೆ ಮಾಡಲು ಪ್ಯಾರಿಸ್ಸಿನ ಬೀದಿಗಳಲ್ಲಿ ವಾಹನದಲ್ಲಿ ಸಾಗುವಾಗ ತನ್ನ ಅಂತರಂಗವನ್ನು ತೆರೆದಿಡುವ ಸುಲೆಮಾನ್ ವಲಸಿಗರ ಪ್ರತಿನಿಧಿಯಾಗಿ ಕಾಣುತ್ತಾನೆ. ಆತನ ಮನಸ್ಸಿನ ಸಂಘರ್ಷ, ಆತ ಜೀವನವನ್ನು ನೋಡುವ ಬಗೆಯನ್ನು ಸಿನಿಮಾ ತೆರೆದಿಡುತ್ತದೆ.
ಅವಧಿ: 93 ನಿಮಿಷ, ಭಾಷೆ : ಫ್ರೆಂಚ್
ಆಫ್ಟರ್‌ನೂನ್ಸ್ ಆಫ್ ಸಾಲಿಟ್ಯೂಡ್
ಬುಲ್ ಫೈಟಿಂಗ್ ಸ್ಟಾರ್ ಆಗಿರುವ ಆಂಡ್ರಿಸ್ ರೋಕಾ ರೇ ತನ್ನ ಅನುಭವಗಳನ್ನು ಹೇಳುವ ಸುದೀರ್ಘ ಸಾಕ್ಷ್ಯ ಚಿತ್ರ. ವೈಚಾರಿಕತ ಮನಸ್ಥಿತಿ, ಮನುಷ್ಯ, ಪ್ರಾಣಿ ನಡುವಣ ಸಂಘರ್ಷ, ಹಿಂಸಾತ್ಮಕ ಮುಖಾಮುಖಿಯನ್ನು ತೆರೆದಿಡುತ್ತದೆ.
ಭಾಷೆ: ಸ್ಪಾನಿಷ್, ಅವಧಿ: 125 ನಿಮಿಷ
ಡೈಯಿಂಗ್
ಇದೊಂದು ಜರ್ಮನ್ ಕಾಮಿಡಿ ಹಾಗೂ ವಿಷಾದಗಳು ಬೆರೆತ ಮೂವಿ. ಸಾವಿನ ಅಂಚಿನಲ್ಲಿರುವ ವಯಸ್ಸಾದ ದಂಪತಿಗಳು ಹಾಗೂ ತಮ್ಮದೇ ಲೋಕದಲ್ಲಿರುವ ಅವರ ಇಬ್ಬರು ಮಕ್ಕಳು ಮುಖಾಮುಖಿ ಇದರಲ್ಲಿದೆ. ಮ್ಯಾಥಿಯಾಸ್ ಗ್ಲಾಸ್ನರ್ ನಿರ್ದೇಶಿಸಿರುವ ಈ ಫಿಲಂ ಇಂಗ್ಮಾರ್ ಬರ್ಗ್‌ಮನ್ ಮತ್ತು ಫೆಡೆರಿಕೊ ಫೆಲಿನಿಯಂತಹ ದೈತ್ಯ ನಿರ್ದೇಶಕರ ಪ್ರಭಾವ ಹೊಂದಿದೆ.
ಭಾಷೆ: ಜರ್ಮನ್, ಅವಧಿ: 180 ನಿಮಿಷ
ಮೆಮೊರೀಸ್ ಆಫ್ ಎ ಬರ್ನಿಂಗ್ ಬಾಡಿ
ಆಂಟೊನೆಲ್ಲಾ ಸುದಾಸಾಸ್ಸಿ ಫರ್ನಿಸ್ ಬರೆದು ನಿರ್ದೇಶಿಸಿದ ಈ ಸಿನಿಮಾ, ಭಿನ್ನ ಲೈಂಗಿಕತೆಯನ್ನು ದಮನಿಸುವ ಪ್ರಭುತ್ವದ ಬಗ್ಗೆ ಮಾತನಾಡುತ್ತದೆ. ಅನಾ, ಪೆಟ್ರೀಷಿಯಾ ಮತ್ತು ಮಾಯೆಲಾ ಎಂಬ ಸ್ತ್ರೀಯರ ಲೈಂಗಿಕ ಜೀವನದ ಚಿತ್ರಣ, ಅವರು ಎದುರಿಸುವ ತಳಮಳಗಳು ಹಾಗೂ ಸ್ತ್ರೀತ್ವದ ಅರ್ಥವನ್ನು ಚಿತ್ರಿಸುತ್ತದೆ.
ಭಾಷೆ: ಸ್ಪ್ಯಾನಿಷ್, ಅವಧಿ: 90 ನಿಮಿಷ
ಯೂನಿವರ್ಸಲ್ ಲ್ಯಾಂಗ್ವೇಜ್
ಕೆನಡಾದ ಸಿನಿಮಾ. ಎರಡು ವಿಚಿತ್ರ ವಲಯಗಳಲ್ಲಿ ನಡೆಯುವ ಜೀವನ ಚಿತ್ರಣವನ್ನು ಸಿನಿಮಾ ಕಟ್ಟಿ ಕೊಡುತ್ತದೆ.ಅವಧಿ: 89 ನಿಮಿಷ, ಭಾಷೆ: ಫಾರ್ಸಿ
)
;Resize=(128,128))
;Resize=(128,128))
;Resize=(128,128))
;Resize=(128,128))