ಸಾರಾಂಶ
ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ರಜತ್ ಮತ್ತು ಅವರ ಮಾಜಿ ಗೆಳತಿಯ ವೈಯಕ್ತಿಕ ಫೋಟೋಗಳನ್ನು ಅಪರಿಚಿತರು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದು, ಡಿಲೀಟ್ ಮಾಡಲು ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆಂದು ಆರೋಪಿಸಿ ರಜತ್‌ರ ಪತ್ನಿ ಅಕ್ಷಿತಾ ಅವರು ದೂರು ನೀಡಿದ್ದಾರೆ.
ಬೆಂಗಳೂರು : ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ರಜತ್ ಮತ್ತು ಅವರ ಮಾಜಿ ಗೆಳತಿಯ ವೈಯಕ್ತಿಕ ಫೋಟೋಗಳನ್ನು ಅಪರಿಚಿತರು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದು, ಡಿಲೀಟ್ ಮಾಡಲು ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆಂದು ಆರೋಪಿಸಿ ರಜತ್‌ರ ಪತ್ನಿ ಅಕ್ಷಿತಾ ಅವರು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಕ್ಷಿತಾ ದೂರಿನ ಅನ್ವಯ, ರಜತ್ ಅವರು ನ.20ರಂದು ಬಿಗ್ ಬಾಸ್ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಹೋಗಿದ್ದಾರೆ. ಇದರ ಬೆನ್ನಲ್ಲೇ ಅಪರಿಚಿತರು ಇನ್ಸ್‌ಸ್ಟಾ ಗ್ರಾಮ್‌ನಲ್ಲಿ ಟ್ರೋಲ್ ಕನ್ನಡ, ಟ್ರೋಲ್ ಡಾಟ್ ರಾವಣ ಡಾಟ್ ಅಫೀಶಿಯಲ್, ಮೋಸ್ಟರ್ ಟ್ರೋಲ್ಸ್ ಸೇರಿ 9 ಟ್ರೋಲ್ ಪೇಜ್‌ಗಳನ್ನು ತೆರೆದು ರಜತ್ ಮತ್ತು ಅವರ ಮಾಜಿ ಗೆಳತಿಯ ವೈಯಕ್ತಿಕ ಫೋಟೋಗಳನ್ನು ಅಪ್‌ಲೋಡ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.
6,500 ರು. ನೀಡಿದೆ: ಈ ಸಂಬಂಧ ನಾನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅಪರಿಚಿತ ಇನ್ಸ್‌ಸ್ಟಾಗ್ರಾಮ್ ಟ್ರೋಲ್ ಪೇಜ್‌ಗಳಿಗೆ ಪತಿಯ ವೈಯಕ್ತಿಕ ಫೋಟೋಗಳನ್ನು ಡಿಲೀಟ್ ಮಾಡುವಂತೆ ಸಂದೇಶ ಕಳುಹಿಸಿದ್ದೆ. ಆಗ ಅವರು ಹಣಕ್ಕೆ ಬೇಡಿಕೆ ಇರಿಸಿದ್ದರು. ಈ ವೇಳೆ ವಿವಿಧ ಹಂತಗಳಲ್ಲಿ 6,500 ರು. ಹಣವನ್ನು ಯುಪಿಐ ಮುಖಾಂತರ ಕಳುಹಿಸಿದ್ದೆ.
ಮತ್ತೆ ಹಣಕ್ಕೆ ಬೇಡಿಕೆ: ಬಳಿಕ ಟ್ರೋಲರ್‌ಗಳು ಬೇರೆ ಟ್ರೋಲ್ ಪೇಜ್‌ಗಳನ್ನು ತೆರೆದು ಪತಿ ರಜತ್ ಮತ್ತು ಅವರ ಮಾಜಿ ಗೆಳತಿಯ ವೈಯಕ್ತಿಕ ಪೋಟೋ ಅಪ್‌ಲೋಡ್ ಮಾಡುತ್ತಿದ್ದಾರೆ. ಮತ್ತೆ ಡಿಲೀಟ್ ಮಾಡಲು ಹಣ ಕೇಳುತ್ತಿದ್ದಾರೆ. ಹೀಗಾಗಿ ಈ ಅಪರಿಚಿತ ಟ್ರೋಲರ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಕ್ಷಿತಾ ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66(ಸಿ) ಮತ್ತು ಬಿಎನ್‌ಎಸ್ ಕಲಂ 308(2) ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.