ಸಾರಾಂಶ
ಜೆಪಿ ತುಮಿನಾಡು ನಿರ್ದೇಶನದ, ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಂ ಸೋ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಪ್ರೀಮಿಯರ್ ಪ್ರದರ್ಶನಗಳಲ್ಲಿ ಜನಮೆಚ್ಚುಗೆ ಗಳಿಸಿದ ಸಿನಿಮಾದ ನಿರ್ದೇಶಕರ ಜೊತೆ ಮಾತುಕತೆ.
ಜೆಪಿ ತುಮಿನಾಡು ನಿರ್ದೇಶನದ, ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಂ ಸೋ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಪ್ರೀಮಿಯರ್ ಪ್ರದರ್ಶನಗಳಲ್ಲಿ ಜನಮೆಚ್ಚುಗೆ ಗಳಿಸಿದ ಸಿನಿಮಾದ ನಿರ್ದೇಶಕರ ಜೊತೆ ಮಾತುಕತೆ.
ಈ ಸಿನಿಮಾ ಪ್ರಯಾಣದ ಸಾರ್ಥಕ ಕ್ಷಣ ಯಾವುದು?
ಮಂಗಳೂರಿನಲ್ಲಿ ಪ್ರೀಮಿಯರ್ ಶೋ ಮುಗಿದಿತ್ತು. ಜನ ನಗುತ್ತಿದ್ದರು. ಅಮ್ಮನ ಕಣ್ಣು ತುಂಬಿತ್ತು. ಅವರು ನನ್ನ ಹತ್ತಿರ ಬಂದು ನಿಂತು ‘ಎನ್ನ ಬಾಲೆ, ಎನ್ನ ಬಾಲೆ’ (ನನ್ನ ಮಗು) ಎಂದು ಕೆನ್ನೆ ಸವರುತ್ತಾ ನಿಂತು ಬಿಟ್ಟರು. ಆ ಕ್ಷಣ ನನ್ನ ಜೀವನದ ಸಾರ್ಥಕ ಕ್ಷಣ. ನಾವು ಸಿನಿಮಾ ಮಂದಿ ಬಗ್ಗೆ ಮನೆಯಲ್ಲಿ ಅಪಾರ ಆತಂಕ ಇರುತ್ತದೆ. ನನ್ನ ಬಗ್ಗೆಯೂ ಇತ್ತು. ಏನು ಮಾಡುತ್ತಾನೋ, ಊಟ ಮಾಡುತ್ತಾನೋ ಇಲ್ಲವೋ ಎಂಬ ಪ್ರಶ್ನೆಗಳಿತ್ತು. ಅವರ ನಂಬಿಕೆ ಉಳಿಸಿದೆನೆಂಬ ತೃಪ್ತಿ ಇದೆ.
ಸು ಫ್ರಂ ಸೋ ಕತೆ ಏನು?
ಎರಡು ಊರಿನ ಕತೆ. ಆ ಊರಿನ ಜನರ ಮುಗ್ಧತೆ ಮತ್ತು ನಂಬಿಕೆಯ ಕತೆ. ನಾನು ನೋಡಿದ ಪಾತ್ರಗಳ, ನಾನು ಕೇಳಿದ ಕತೆಗಳ, ನನ್ನ ಅನುಭವಕ್ಕೆ ಬಂದ ಸಂಗತಿಗಳನ್ನೆಲ್ಲಾ ಅಡಗಿಸಿಟ್ಟುಕೊಂಡಿರುವ ಸಿನಿಮಾ. ನಾನು ಹಿಂದೆ ಪೇಂಟ್ ಕೆಲಸಕ್ಕೆ ಬೇರೆ ಬೇರೆ ಮನೆಗಳಿಗೆ ಹೋಗುತ್ತಿದ್ದೆ. ಅಲ್ಲಿ ನೋಡಿದ ಪಾತ್ರಗಳು, ಅರ್ದಂಬರ್ಧ ಸಿಕ್ಕ ಕತೆಗಳು ನನ್ನೊಳಗೆ ಸೇರಿ ಈ ಸಿನಿಮಾ ಆಗಿದೆ. ಬಹಳ ವರ್ಷಗಳಿಂದ ಈ ಕತೆ ನನ್ನೊಳಗಿದೆ. ಈ ಕತೆ ಇಲ್ಲದೇ ಇದ್ದಿದ್ದರೆ ನಾನು ಯಾವಾಗಲೂ ಸಿನಿಮಾ ಬಿಟ್ಟು ಹೋಗಿರುತ್ತಿದ್ದೆ. ಈ ಕತೆ ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಇನ್ನು ನಾನು ಯಾವಾಗಲೂ ಅಂದುಕೊಂಡಿರುವುದು ಸಿನಿಮಾ ಮಾಡುವುದಲ್ಲ, ಆಗುವುದು ಅಂತ. ಈ ಸಿನಿಮಾ ಆಗಿದೆ. ಕತೆಯೇ ಸಿನಿಮಾವನ್ನು ರೂಪಿಸಿದೆ.
ಸಿನಿಮಾ ಮಾಡುವುದು ಎಷ್ಟು ಕಷ್ಟ ಮತ್ತು ಎಷ್ಟು ಸುಲಭ?
ಬಹಳ ಕಷ್ಟ. ಅದೂ ಈ ಕಾಲದಲ್ಲಿ. ನಾನು ಮೊದಲಿನಿಂದಲೂ ನಿರ್ದೇಶಕ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಕತೆ ಹೇಳುವ ಆಸೆ. ಬಾಲ್ಯದಲ್ಲಿ ನನ್ನದೇ ಕತೆಗಳನ್ನು ಸಿನಿಮಾ ಕತೆ ಅಂತ ಹೇಳುತ್ತಿದ್ದೆ. ಆಮೇಲೆ ರಂಗಭೂಮಿಗೆ ಬಂದು ಕತೆ ಹೇಳಿದೆ. ರಾಜ್ ಬಿ ಶೆಟ್ಟಿಯವರು ಸಿಕ್ಕ ಮೇಲೆ ನಾನು ಸಿನಿಮಾ ನೋಡುವ ರೀತಿಯೇ ಬದಲಾಯಿತು. ಅವರು ಧೈರ್ಯ ಕೊಟ್ಟ ಮೇಲೆ ಸಿನಿಮಾ ಮೂಲಕ ಕತೆ ಹೇಳಲು ಮುಂದಾದೆ. ಸುಮಾರು ಐದು ವರ್ಷದಿಂದ ಈ ಕತೆ ನನ್ನ ಜೊತೆ ಬೆಳೆದು ಬಂದಿದೆ. ಈ ಸಿನಿಮಾ ಆಗಿ ನಿಮ್ಮ ಮುಂದಿದೆ.
ರಾಜ್ ಬಿ ಶೆಟ್ಟಿ ಅಥವಾ ಅವರ ತಂಡ ಎಷ್ಟು ಮುಖ್ಯ?
ನನಗೆ ಈ ತಂಡ ಸಿಕ್ಕಿದ್ದು ನನ್ನ ಅದೃಷ್ಟ. ನಾವು ಬೆಂಗಳೂರಿಗೆ ಮೊದಲ ಸಲ ಬಂದಾಗ ಎಲ್ಲಿ ಹೋಗಬೇಕು, ಏನು ಮಾಡಬೇಕು ಗೊತ್ತಿರುವುದಿಲ್ಲ. ಒಬ್ಬರು ಕೈ ಹಿಡಿದು ನಡೆಸುವವರು ಬೇಕು. ರಾಜ್ ಬಿ ಶೆಟ್ಟಿ ನನ್ನನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿದರು. ಬೆಂಬಲವಾಗಿ ನಿಂತರು. ಅವರು ಮತ್ತು ತಂಡ ಇಲ್ಲದಿದ್ದರೆ ನಾನು ಈ ಸಿನಿಮಾವನ್ನು ಇದೇ ರೀತಿ ಮಾಡಲಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ.
ಈ ಪಯಣದಲ್ಲಿ ನೆನೆಸಿಕೊಳ್ಳುವುದು ಏನನ್ನು, ಯಾರನ್ನು?
ಬಹಳಷ್ಟು ಜನ ನನ್ನನ್ನು ಮುಂದಕ್ಕೆ ದೂಡಿದ್ದಾರೆ. ಅವರೆಲ್ಲರಿಗೂ ಋಣಿ. ನನಗೆ ಬದುಕು ಕೊಟ್ಟ ನನ್ನ ಶಾರದಾ ಆರ್ಟ್ಸ್ ರಂಗತಂಡ ನನ್ನ ಜೀವಾಳ. ಆ ತಂಡಕ್ಕೆ ಪರಿಚಯಿಸಿದ ಪ್ರಕಾಶ್ ತುಮಿನಾಡು, ರಂಗನಿರ್ದೇಶಕನನ್ನಾಗಿ ಮಾಡಿದ ಕೃಷ್ಣ ಜಿ ಮಂಜೇಶ್ವರ ಇವರನ್ನು ಮರೆಯಲಾರೆ.