ಸಾರಾಂಶ
‘ಸಯ್ಯಾರ’- ತೀವ್ರ ಪ್ರೇಮಕಥೆಯುಳ್ಳ ಈ ಬಾಲಿವುಡ್ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನದಲ್ಲಿ ದಾಖಲೆಯ 105.75 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಸಿನಿವಾರ್ತೆ
‘ಸಯ್ಯಾರ’- ತೀವ್ರ ಪ್ರೇಮಕಥೆಯುಳ್ಳ ಈ ಬಾಲಿವುಡ್ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನದಲ್ಲಿ ದಾಖಲೆಯ 105.75 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸೂಪರ್ ಹಿಟ್ ಚಿತ್ರ ‘ಆಶಿಕಿ 2’ ನಿರ್ದೇಶಕ ಮೋಹಿತ್ ಸೂರಿ ನಿರ್ದೇಶಿಸಿರುವ, ಹೊಸಬರಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಎಂಬ ಹೊಸ ನಟ, ನಟಿ ನಟಿಸಿರುವ ಈ ಸಿನಿಮಾ ಇದೀಗ ಹುಬ್ಬೇರಿಸುವಂತೆ ಗಳಿಕೆ ಮಾಡುತ್ತಿದೆ. ಕರ್ನಾಟಕದಲ್ಲಿಯೂ ವಾರ ಮಧ್ಯದಲ್ಲಿಯೇ ಉತ್ತಮ ಗಳಿಕೆ ಕಾಣುತ್ತಿದೆ.
ಸುಮಾರು 35 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕೆಲವೇ ದಿನಗಳಲ್ಲಿ 500 ಕೋಟಿ ರು. ಕ್ಲಬ್ ಸೇರಲಿದೆ ಎಂದು ಸಿನಿಮಾ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಹಾಗಾಗಿ ನೆಟ್‌ಫ್ಲಿಕ್ಸ್ ಈ ಸಿನಿಮಾ ಖರೀದಿಸಿದೆ.
ಕ್ರಿಷ್ ಎಂಬ ಯುವ ಸಂಗೀತಗಾರ ಮತ್ತು ವಾಣಿ ಎಂಬ ಬರಹಗಾರ್ತಿಯ ನಡುವಿನ ಪ್ರೇಮ ವಿರಹಗಳ ಕಥೆ ಸಿನಿಮಾದ ಹೈಲೈಟ್ ಆಗಿದೆ. ವಿಶೇಷವೆಂದರೆ ಈ ಸಿನಿಮಾ ಬೇರೆ ಸಿನಿಮಾಗಳ ಮಾರ್ಕೆಟಿಂಗ್ ತಂತ್ರಗಾರಿಕೆಯನ್ನು ಬಳಸದೇ ಇರುವುದೂ ಇದಕ್ಕೆ ಪ್ಲಸ್ ಆಗಿದೆ. ಕಂಟೆಂಟ್ ಮತ್ತು ವಿಭಿನ್ನ ಮಾರ್ಕೆಟಿಂಗ್ ಎರಡೂ ಸೇರಿ ಈ ಸಿನಿಮಾವನ್ನು ಗೆಲ್ಲಿಸಿದೆ. ಬೇರೆಯವರಿಗೆ ಪಾಠದಂತಿರುವ ಇದರ ಮಾರ್ಕೆಟಿಂಗ್ ತಂತ್ರ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತಿದೆ.
1. ಸಾಂಪ್ರದಾಯಿಕ ಪ್ರಚಾರ ತಂತ್ರವನ್ನು ಅನುಸರಿಸಲಿಲ್ಲ. ಪ್ರಚಾರಕ್ಕೆ ಅಂತ ಚಿತ್ರತಂಡ ನಗರ ನಗರ ಸುತ್ತಲಿಲ್ಲ. ರೀಲ್ಸ್ ಮಾಡಲಿಲ್ಲ. ಟಿವಿ, ಯೂಟ್ಯೂಬ್‌ಗಳಿಗೆ ಸಂದರ್ಶನ ನೀಡಲಿಲ್ಲ. ಸೋಷಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್‌ಗಳಿಗೆ ದುಂಬಾಲು ಬೀಳಲಿಲ್ಲ.
2. ನಾಯಕ ನಾಯಕಿಯನ್ನು ಪ್ರಚಾರದಲ್ಲಿ ಎಲ್ಲೂ ಕಾಣಿಸದಂತೆ ನೋಡಿಕೊಂಡರು. ಇದರಿಂದ ಪ್ರೇಕ್ಷಕರಿಗೆ ತೆರೆಯ ಮೇಲೆ ಫ್ರೆಶ್ ಆಗಿ ನಾಯಕ ನಾಯಕಿಯನ್ನು ಕಣ್ತುಂಬಿಸಿಕೊಳ್ಳುವುದು ಸಾಧ್ಯವಾಯಿತು. ಅಪ್ಪಿತಪ್ಪಿಯೂ ಸಿನಿಮಾದ ಒಂದು ಸಣ್ಣ ಲೈನ್ ಸಹ ಹೊರಬೀಳದ ಹಾಗೆ ನೋಡಿಕೊಂಡರು.
3. ಹಾಡುಗಳ ಮೋಡಿ ಈ ಸಿನಿಮಾದ ಸಕ್ಸಸ್‌ನ ಮತ್ತೊಂದು ಮುಖ್ಯ ಅಂಶ. ಚಿತ್ರದ ಜೀವಾಳದಂತಿರುವ ಟೈಟಲ್ ಟ್ರ್ಯಾಕ್ ಹಾಗೂ ಇನ್ನೊಂದು ಹಾಡನ್ನು ಸಿನಿಮಾ ರಿಲೀಸ್‌ಗೂ ಮೊದಲೇ ಹೊರಬಿಡಲಾಗಿತ್ತು. ಬಹಳಷ್ಟು ಥೇಟರ್‌ಗಳಲ್ಲಿ ಪ್ರಸಾರ ಮಾಡಲಾಗಿತ್ತು. ಆ ಹಾಡುಗಳೇ ಜನರನ್ನು ಥೇಟರಿನತ್ತ ಕರೆತಂದವು. ಟೈಟಲ್ ಟ್ರ್ಯಾಕ್ ಅಂತೂ 8 ಕೋಟಿ 40 ಲಕ್ಷದಷ್ಟು ವೀಕ್ಷಣೆ ಪಡೆದಿದೆ.
4. ಈ ಸಿನಿಮಾ ನೋಡುತ್ತಾ ಕಣ್ಣೀರಾಗುವ ಹಲವಾರು ವೀಡಿಯೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡಿಂಗ್‌ನಲ್ಲಿವೆ. ಒಬ್ಬರಂತೂ ಆಸ್ಪತ್ರೆಯಿಂದ ಕೈಗೆ ಡ್ರಿಪ್ ನಳಿಕೆ ಸಿಕ್ಕಿಸಿಕೊಂಡೇ ಬಂದು ಸಿನಿಮಾ ನೋಡುವ ವಿಡಿಯೋ ವೀಡಿಯೋ ಭಾರಿ ವೈರಲ್ ಆಯ್ತು. ಅದು ನಿಜವೋ ತಂತ್ರವೋ, ಒಟ್ಟಾರೆ ಈ ಚಿತ್ರದ ಗಮನ ಸೆಳೆಯಲು ಯಶಸ್ವಿಯಾಗಿದೆ.
5. ಅನೇಕ ಸಿನಿಮಾ ತಾರೆಯರು ಈ ಚಿತ್ರವನ್ನು ಮುಕ್ತಕಂಠದಿಂದ ಹೊಗಳಿದರು. ಶ್ರದ್ಧಾ ಕಪೂರ್ ‘5 ಬಾರಿ ಸಿನಿಮಾ ನೋಡಿದ್ದೇನೆ’ ಎಂದರೆ, ಕರಣ್ ಜೋಹರ್ ಉದ್ದದ ನೋಟ್ ಬರೆದು ಮೆಚ್ಚಿಕೊಂಡರು. ರಣ್‌ವೀರ್ ಸಿಂಗ್, ‘ಸಿನಿಮಾ ನೋಡಿ ಹೃದಯ ತುಂಬಿ ಬಂತು’ ಎಂದರು. ಆಲಿಯಾ ಭಟ್, ಅರ್ಜುನ್ ಕಪೂರ್ ಕೂಡ ಮುಕ್ತಕಂಠದಿಂದ ಹೊಗಳಿದ್ದು ಚಿತ್ರಕ್ಕೆ ಪಾಸಿಟಿವ್ ಆಯ್ತು.