ಸಾರಾಂಶ
ಹೊಸ ಸಿನಿಮಾದಲ್ಲಿ ಧನಂಜಯ ಹೇಮಂತ್ ಕುಮಾರ್ ಜೊತೆಯಾಗಲಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ಖ್ಯಾತ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ವಿಶೇಷ ಪಾತ್ರದಲ್ಲಿ ಶಿವರಾಜ್‌ಕುಮಾರ್ ನಟಿಸುತ್ತಿದ್ದಾರೆ. ಈ ಮೂಲಕ ಸೂಪರ್‌ಹಿಟ್ ‘ಟಗರು’ ಕಾಂಬಿನೇಷನ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.ಹೇಮಂತ್ ರಾವ್ ನಿರ್ದೇಶನದ ‘ಭೈರವನ ಕೊನೆಯ ಪಾಠಗಳು’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಬೇಕಿತ್ತು. ಆದರೆ ಈ ಚಿತ್ರದಲ್ಲಿ ದೊಡ್ಡ ಮಟ್ಟದ ಆ್ಯಕ್ಷನ್ ಸೀಕ್ವೆನ್ಸ್‌ಗಳು ಮತ್ತು ಭಾರದ ಕಾಸ್ಟ್ಯೂಮ್‌ಗಳು ಇರುವುದರಿಂದ ಅದಕ್ಕೆ ಶಿವಣ್ಣ ಸಿದ್ಧರಾಗಲು ಸ್ವಲ್ಪ ಸಮಯ ಬೇಕಾಗಿರುವುದರಿಂದ ಈ ಸಿನಿಮಾ ಚಿತ್ರೀಕರಣ ಮುಂದಕ್ಕೆ ಹೋಗಿದೆ ಎನ್ನಲಾಗಿದೆ. ಹಾಗಾಗಿ ನಿರ್ದೇಶಕ ಹೇಮಂತ್ ರಾವ್ ಅವರು ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ಒಂದು ಆಸಕ್ತಿಕರ ಕತೆಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಡಾಲಿ ಧನಂಜಯ ಅವರ ಪ್ರತಿಕ್ರಿಯೆ ಕೇಳಿದಾಗ ಅವರು, ‘ಈ ಪ್ರಾಜೆಕ್ಟ್ ಇನ್ನೂ ಆರಂಭಿಕ ಹಂತದಲ್ಲಿದೆ. ಕಥೆಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಇನ್ನೂ ಹಲವು ಸುತ್ತಿನ ಮಾತುಕತೆ, ನಿರ್ಮಾಣ ಯಾರು ಮಾಡ್ತಾರೆ ಅನ್ನೋ ವಿಚಾರಗಳೆಲ್ಲ ಮುಂದಿನ ದಿನಗಳಲ್ಲಿ ಫೈನಲ್ ಆಗಬೇಕಿದೆ’ ಎಂದಿದ್ದಾರೆ.ಸದ್ಯ ಧನಂಜಯ ‘ಜಿಂಗೋ’, ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೇಮಂತ್ ರಾವ್ ನಿರ್ದೇಶನದ ಸಿನಿಮಾ ಕೂಡ ಶೀಘ್ರದಲ್ಲೇ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ.