ಸಾರಾಂಶ
ಕನ್ನಡಪ್ರಭ ಸಿನಿವಾರ್ತೆಶಿವರಾಜ್ ಕುಮಾರ್ ನಿರ್ಮಾಣದಲ್ಲಿ ‘ಶಾಖಾಹಾರಿ’ ಸಿನಿಮಾ ನಿರ್ದೇಶಕ ಸಂದೀಪ್ ಸುಂಕದ್ ಹಾಗೂ ಧೀರೇನ್ ರಾಜ್‌ಕುಮಾರ್ ಕಾಂಬಿನೇಶನ್‌ನ ಹೊಸ ಸಿನಿಮಾ ‘ಪಬ್ಬಾರ್’. ಇದು ಹಿಮಾಚಲ ಕಣಿವೆಯಲ್ಲೇ ಶೇ.50ರಷ್ಟು ಚಿತ್ರೀಕರಣಗೊಳ್ಳಲಿರುವ ಚಿತ್ರವಾಗಿದ್ದು ಮರ್ಡರ್ ಮಿಸ್ಟ್ರಿ ಕಥಾಹಂದರ ಹೊಂದಿದೆ. ಸಿನಿಮಾ ಬಗ್ಗೆ ವಿವರ ನೀಡಿದ ನಿರ್ದೇಶಕ ಸಂದೀಪ್ ಸುಂಕದ್, ‘ಇದೊಂದು ಸ್ಟ್ರಾಂಗ್ ಕ್ರೈಮ್ ಥ್ರಿಲ್ಲರ್. ರಿಯಲಿಸ್ಟಿಕ್ ಅಪ್ರೋಚ್‌ನಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಶಾಖಾಹಾರಿ ಕಥೆ ತೀರ್ಥಹಳ್ಳಿಯಲ್ಲಿ ನಡೆದರೆ, ಪಬ್ಬಾರ್ ಸಿನಿಮಾದ ವ್ಯಾಪ್ತಿ ರಾಷ್ಟ್ರಮಟ್ಟದ್ದು. ಹತ್ತಿರತ್ತಿರ ಶೇ.50ರಷ್ಟು ಚಿತ್ರೀಕರಣ ಹಿಮಾಲಯದ ಕಣಿವೆಗಳಲ್ಲಿ ನಡೆಯಲಿದೆ. ಉಳಿದ ಭಾಗವನ್ನು ಜಿಲ್ಲಾಕೇಂದ್ರದಲ್ಲಿ ಚಿತ್ರೀಕರಿಸಲಿದ್ದೇವೆ. ಈ ಸಿನಿಮಾದ ಬಗ್ಗೆ ಒಂಚೂರು ಹೇಳೋಣ ಅಂತ ಶಿವಣ್ಣ ಅವರ ಬಳಿ ಹೋಗಿದ್ದೆವು. ಬಹಳ ಒತ್ತಡದ ನಡುವೆ ಸಿನಿಮಾದ ಅರ್ಧ ನರೇಶನ್ ನೀಡಲು ಹೇಳಿದರು. ಅಷ್ಟನ್ನು ಹೇಳಿದ್ದೇ, ಇನ್ನೂ ಸಮಯ ನೀಡಿ ಕಂಪ್ಲೀಟ್ ಕಥೆ ಹೇಳಲು ಹೇಳಿದರು. ಬಳಿಕ ಅವರು ಬಹಳ ಎಗ್ಸೈಟ್ ಆದ ಹಾಗೆ ಕಾಣಿಸಿತು. ಆಮೇಲೆ ನಾವು ಪೋಸ್ಟರ್ ಎಲ್ಲ ರಿಲೀಸ್ ಮಾಡಿದ ಬಳಿಕ ಈ ಸಿನಿಮಾ ನಿರ್ಮಾಣ ಮಾಡೋದು ಹೇಳಿ ಫುಲ್ ಸರ್ಪೈಸ್ ಕೊಟ್ಟರು’ ಎಂದು ಹೇಳಿದ್ದಾರೆ. ‘ಈ ಸಿನಿಮಾಗಾಗಿ ಧೀರೇನ್ ಗೆಟಪ್ ಕಂಪ್ಲೀಟ್ ಬದಲಾಗಿದೆ. ಸಿನಿಮಾ ಘೋಷಣೆ ಆದಾಗಿಂದ ಈ ಪಾತ್ರಕ್ಕಾಗಿ ಅವರ ಸಿದ್ಧತೆ ಆರಂಭವಾಗಿದೆ. 12 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇನ್ನೊಂದು ಅಂದರೆ ಈ ಸಿನಿಮಾದಲ್ಲಿ ಹೀರೋಯಿಸಂ, ವಿಜೃಂಭಣೆ ಎಲ್ಲ ಇರುವುದಿಲ್ಲ. ಅವರೊಂದು ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ಹೀರೋ ಅಂತಿಲ್ಲದ ಮೇಲೆ ಹೀರೋಯಿನ್ ಸಹ ಇಲ್ಲ. ಆದರೆ ಸಾಕಷ್ಟು ಸ್ತ್ರೀ ಪಾತ್ರಗಳಿವೆ. ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ ಕುಮಾರ್ ಮೊದಲಾದವರು ಉಳಿದ ಪಾತ್ರಗಳಿದ್ದಾರೆ’ ಎಂದು ತಿಳಿಸಿದ್ದಾರೆ.