ವಿಕ್ಕಿ ವರುಣ್‌ ಹೊಸ ಸಿನಿಮಾ ಡಿಸ್ಕೋ

| Published : Nov 20 2024, 12:31 AM IST

ಸಾರಾಂಶ

ಕೆಂಡಸಂಪಿಗೆ ನಟ ವಿಕ್ಕಿ ವರುಣ್ ಇದೀಗ ಡಿಸ್ಕೋ ಡ್ಯಾನ್ಸ್ ಮಾಡಲು ಹೊರಟಿದ್ದಾರೆ. ಅಂದಹಾಗೆ ಇವರ ಹೊಸ ಸಿನಿಮಾ ಶೀರ್ಷಿಕೆ ಡಿಸ್ಕೋ. ಇದು ಇವರ ಪಾತ್ರದ ಅಡ್ಡ ಹೆಸರಂತೆ.

ಕನ್ನಡಪ್ರಭ ಸಿನಿವಾರ್ತೆ‘ಡಿಸ್ಕೋ ಇದು ನಾಯಕನ ಅಡ್ಡ ಹೆಸರು. ಸಿನಿಮಾವೂ ಇದೇ ಶೀರ್ಷಿಕೆಯಲ್ಲಿ ನಿರ್ಮಾಣವಾಗಲಿದೆ. ಇದು ಹಳ್ಳಿಯನ್ನೇ ಸಿಟಿ ಮಾಡಲು ಹೊರಟ ತರುಣನ ಕಥೆ.’

- ಹೀಗಂದದ್ದು ನಟ ವಿಕ್ಕಿ ವರುಣ್‌. ಇವರು ಕಥೆ ಬರೆದು ನಟಿಸುತ್ತಿರುವ ‘ಡಿಸ್ಕೋ’ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು. ಈ ಸಿನಿಮಾಕ್ಕೆ ಹರಿ ಸಂತೋಷ್‌ ನಿರ್ದೇಶನವಿದೆ. ಇವರ ನಿರ್ಮಾಣದ ‘ಕಂಗ್ರಾಜ್ಯುಲೇಶನ್ಸ್‌ ಬ್ರದರ್‌’ ಸಿನಿಮಾಕ್ಕೂ ಈ ವೇಳೆ ಮುಹೂರ್ತ ನಡೆಯಿತು.

ಈ ವೇಳೆ ಹರಿ ಸಂತೋಷ್‌, ‘ಕಾಲೇಜು ಕುಮಾರ ಸಿನಿಮಾ ನಂತರ ನನ್ನ ಹಾಗೂ ವಿಕ್ಕಿ ವರುಣ್‌ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಸಿನಿಮಾ ಡಿಸ್ಕೋ. ಇದೊಂದು ಹಳ್ಳಿಯಲ್ಲಿ ನಡೆಯುವ ಕಥೆ. ಇನ್ನೊಂದು ಸಿನಿಮಾ ಕಂಗ್ರಾಜ್ಯುಲೇಶನ್ಸ್‌ ಬ್ರದರ್‌ ಅನ್ನು ನಮ್ಮ ‘ಪೆನ್ ಎನ್ ಪೇಪರ್’ ಸಂಸ್ಥೆ ಮೂಲಕ ನಿರ್ಮಿಸುತ್ತಿದ್ದೇವೆ’ ಎಂದರು.

ಪ್ರತಾಪ್ ಗಂಧರ್ವ ‘ಕಂಗ್ರಾಜ್ಯುಲೇಶನ್ಸ್‌ ಬ್ರದರ್‌’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್ ನಾಯಕ. ಸಂಜನಾ ಈ ಚಿತ್ರದ ನಾಯಕಿ. ಅನುಷಾ ವಿಶೇಷ ಪಾತ್ರದಲ್ಲಿದ್ದಾರೆ. ಇದು ರೊಮ್ಯಾಂಟಿಕ್ ಜಾನರಾದ ಸಿನಿಮಾ.