ಸಾರಾಂಶ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ತಾರಾಗಣ: ಅಂಜನ್ ನಾಗೇಂದ್ರ, ವೆನ್ಯಾ ರೈ, ಸಂಜನಾ ದಾಸ್, ಶರತ್ ಲೋಹಿತಾಶ್ವನಿರ್ದೇಶನ : ಹಯವದನ
ರೇಟಿಂಗ್ : 3.5- ಪ್ರಿಯಾ ಕೆರ್ವಾಶೆಲೈಫಲ್ಲಿ ರಿಯಲೈಸೇಶನ್‌ಗೆ ಇರುವ ಪವರ್ ದೊಡ್ಡದು. ಅದು ಬದುಕನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿಬಿಡುತ್ತದೆ. ಈ ವಿಚಾರವನ್ನು ಆತ್ಮವಾಗಿಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ ಇದು. ಮೇಲ್ನೋಟಕ್ಕೆ ಪ್ರಯಾಣವೇ ಪ್ರಧಾನವಾಗಿರುವ ಸಿನಿಮಾ. ಆದರೆ ಇದರೊಳಗೆ ನಾಡಿ ಮಿಡಿತದಂತೆ ಇರುವುದು ತಂದೆ ಮಗನ ಸಂಬಂಧ. ಬದುಕನ್ನರಸಿ ಹೊರಡುವ ಜೋಗಿಯಂಥಾ ಹುಡುಗ ತನ್ನ ನಿಜದ ನೆಲೆಯನ್ನು ಕಂಡುಕೊಳ್ಳುವುದೇ ಸಿನಿಮಾದ ಅಂತರಾರ್ಥ.
ನಾಯಕ ಆದಿ ಈ ಕಾಲದ ಹುಡುಗರ ಪ್ರತಿನಿಧಿ. ಅಪ್ಪನ ಬುದ್ಧಿಮಾತನ್ನೇ ತಪ್ಪಾಗಿ ಅರ್ಥೈಸಿ ತನ್ನ ಸಾಮರ್ಥ್ಯ ತೋರಿಸುವ ಛಲದಿಂದ ಮೊಬೈಲ್, ಕಾಸು ಇಲ್ಲದೆ ಮನೆಯಿಂದ ಹೊರಬೀಳುತ್ತಾನೆ. ಅಪ್ಪ ಅಮ್ಮನ ಕಾಳಜಿಯಲ್ಲಿ ಜತನದಿಂದ ಬೆಳೆದ ಹುಡುಗ ಹೊರ ಜಗತ್ತಿಗೆ ಮುಖಾಮುಖಿಯಾದಾಗ ಆಗುವ ಅನುಭವ, ಜೀವನ ಸಾಕ್ಷಾತ್ಕಾರಗಳೇ ಈ ಸಿನಿಮಾ.ನಾಯಕನ ಜರ್ನಿಯುದ್ದಕ್ಕೂ ಅಲ್ಲಲ್ಲಿ ತಂದೆ ಮಗನ ಪ್ರೀತಿಯ ದೃಶ್ಯ ನಾಯಕನಿಗೆ ಕಾಣಸಿಕ್ಕು ಆತ ಎಮೋಶನಲ್ ಆಗ್ತಾನೆ. ಕಥೆಗಾಗಿ ಎಳೆದು ತಂದಂತೆ ತೋರುವ ಇಂಥಾ ಕ್ಲೀಷೆಗಳನ್ನು ನಿರ್ದೇಶಕರು ಮೀರಬಹುದಿತ್ತು. ಮೊದಲ ಭಾಗದಲ್ಲಿ ಕಥೆಗೆ ಅಂಥಾ ಮಹತ್ವ ಇಲ್ಲ. ಜೊತೆಗೆ ಇಲ್ಲಿನ ಜರ್ನಿ ವಾಸ್ತವದಿಂದ ಆಚೆ ನಿಂತಂತೆ ತೋರುತ್ತದೆ. ಕೊನೆಯಲ್ಲಿ ಸಿನಿಮಾದ ತಿರುಗಿ ನೋಡುವಂಥಾ ಗುಣ ಇಷ್ಟವಾಗುತ್ತದೆ. ನಟನೆ, ನಿರ್ದೇಶನ, ಸಿನಿಮಾಟೋಗ್ರಫಿ, ಹಿನ್ನೆಲೆ ಸಂಗೀತ ಕಥೆಗೆ ಜೀವ ತುಂಬುವಂತಿವೆ. ಬೆಂಗಳೂರಿಂದ ದೇಶದ ಉತ್ತರಕ್ಕಿರುವ ಜಾಗಗಳ ನೋಟದ ಜೊತೆಗೆ ಇಂಟೆನ್ಸ್ ಆದ ಅನುಭವಕ್ಕೆ ಪಕ್ಕಾಗುವ ಸಿನಿಮಾ.