ಸಾರಾಂಶ
‘ಆಪರೇಷನ್ ಸಿಂದೂರ್’ ಅನ್ನು ಶ್ಲಾಘಿಸಿರುವ ನಟ ಸುದೀಪ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದು ಅವರ ನಾಯಕತ್ವದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ‘ಆಪರೇಷನ್ ಸಿಂದೂರ್’ ಅನ್ನು ಶ್ಲಾಘಿಸಿರುವ ನಟ ಸುದೀಪ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದು ಅವರ ನಾಯಕತ್ವದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರೇ ನಮಸ್ಕಾರ’ ಎಂಬ ಒಕ್ಕಣೆಯಿಂದ ಆರಂಭವಾದ ಪತ್ರದಲ್ಲಿ, ಆಪರೇಶನ್ ಸಿಂದೂರ್ ಎಂಬುದು ಪ್ರತಿಕ್ರಿಯೆಯಷ್ಟೇ ಆಗಿರಲಿಲ್ಲ, ಜಗತ್ತಿಗೆ ಅದೊಂದು ಮಹತ್ವದ ಸಂದೇಶ ಆಗಿತ್ತು. ಭಾರತದ ಸ್ಥಿರತೆಯ ದ್ಯೋತಕವಾಗಿತ್ತು. ಈ ಮೂಲಕ ಭಾರತ ಎಂದೂ ಹಿಂದೆ ಸರಿಯದು, ಏನನ್ನೂ ಮರೆಯದು, ಯಾವಾಗಲೂ ಎಚ್ಚೆತ್ತ ಸ್ಥಿತಿಯಲ್ಲಿರುತ್ತದೆ ಎಂಬ ದಿಟ್ಟ, ನಿರ್ಣಾಯಕ ಸಂದೇಶವನ್ನು ಜಗತ್ತಿಗೆ ನೀಡಲಾಗಿದೆ’ ಎಂದು ಸುದೀಪ್ ಪ್ರಶಂಸೆಯ ನುಡಿಗಳನ್ನಾಡಿದ್ದಾರೆ.
‘ಇಂದು ನಾನು ಈ ಪತ್ರವನ್ನು ಕೇವಲ ಒಬ್ಬ ಮಗನಾಗಿ ಬರೆಯುತ್ತಿಲ್ಲ, ದೇಶದ ಹೆಮ್ಮೆಯ ಪ್ರಜೆಯಾಗಿ ಬರೆಯುತ್ತಿದ್ದೇನೆ, ಆಪರೇಷನ್ ಸಿಂದೂರ್‌ನ ವಿಜಯೋತ್ಸವಕ್ಕೆ ವಿಶ್ವವೇ ನಮಿಸಿದೆ. ಹೇಳಿಕೆ, ಮಾತಿನ ಮೂಲಕವಷ್ಟೇ ನೀವು ನಮ್ಮನ್ನು ಮುನ್ನಡೆಸಿಲ್ಲ, ಅಕ್ಷರಶಃ ನುಡಿದದ್ದನ್ನು ಕಾರ್ಯರೂಪಕ್ಕಿಳಿಸಿ ಜಗತ್ತಿನ ಮುಂದೆ ದೇಶ ಗರ್ವದಿಂದ ತಲೆ ಎತ್ತುವಂತೆ ಮಾಡಿದ್ದೀರಿ’ ಎಂದು ಮನಃಪೂರ್ವಕವಾಗಿ ಶ್ಲಾಘಿಸಿದ್ದಾರೆ.
‘ನಿಮ್ಮ ನಿರ್ಣಯಗಳಿಗೆ ಪ್ರತಿಯೊಬ್ಬ ಕನ್ನಡಿಗನ, ಇಡೀ ಕನ್ನಡ ಚಿತ್ರರಂಗದ ಬೆಂಬಲವಿದೆ. ನಿಮ್ಮ ಧೈರ್ಯದಿಂದ ನಾವು ಸ್ಫೂರ್ತಿ ಪಡೆಯುತ್ತೇವೆ. ನಿಮ್ಮ ನಾಯಕತ್ವದಲ್ಲಿ, ನಮ್ಮ ರಕ್ಷಣಾ ಪಡೆಗಳು ಸಾಟಿಯಿಲ್ಲದ ನಿಖರತೆ, ಶಿಸ್ತು ಮತ್ತು ಶೌರ್ಯ ಪ್ರದರ್ಶಿಸಿವೆ. ಅವರ ಯಶಸ್ಸು ನಮ್ಮ ಹೆಮ್ಮೆ. ನಾವೆಲ್ಲ ಒಂದು ರಾಷ್ಟ್ರ, ಒಂದೇ ಧ್ವನಿಯಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ. ಜೈ ಹಿಂದ್, ಜೈ ಕರ್ನಾಟಕ, ಜೈ ಭಾರತ್’ ಎಂದಿದ್ದಾರೆ.
ನನ್ನ ತಾಯಿ ಸರೋಜಾ ಸಂಜೀವ್ ಅವರು ನಿಧನರಾದಾಗ ನೀವು ಬರೆದ ಪತ್ರ, ವೈಯಕ್ತಿಕ ನಷ್ಟದ ಆ ಕಠಿಣ ಸಮಯದಲ್ಲಿ ನನಗೆ ಸಾಂತ್ವನ, ಧೈರ್ಯ ನೀಡಿತ್ತು. ಆ ಸಹಾನುಭೂತಿಯ ನುಡಿಗಳು ಜೀವನಪರ್ಯಂತ ನನ್ನ ಸ್ಮರಣೆಯಲ್ಲಿ ಉಳಿಯಲಿವೆ.