ಸಾರಾಂಶ
ಚಿತ್ರ: ಫೈಟರ್
ನಿರ್ದೇಶನ: ನೂತನ್ ಉಮೇಶ್
ತಾರಾಗಣ: ವಿನೋದ್ ಪ್ರಭಾಕರ್, ನಿರೋಷ, ಲೇಖಾ ಚಂದ್ರ, ರಾಜೇಶ್ ನಟರಂಗ, ರಾಜ್ ದೀಪಕ್
ರೇಟಿಂಗ್: 3
ವಿನೋದ್ ಪ್ರಭಾಕರ್ ಸಿನಿಮಾ ಎಂದ ಮೇಲೆ ಪ್ರೇಕ್ಷಕನಿಗೆ ಕೆಲವು ನಿರೀಕ್ಷೆಗಳಿರುವುದು ಸಹಜ. ಹುಚ್ಚೆಬ್ಬಿಸುವ ಫೈಟಿಂಗು, ಕಾಲು ಕುಣಿಸುವ ಡಾನ್ಸು, ಮನಸು ಕದಡುವ ಭಾವುಕ ಸನ್ನಿವೇಶ, ಮುಷ್ಟಿ ಬಿಗಿಯುವಂತೆ ಮಾಡುವ ಮಾಸ್ ಡೈಲಾಗ್ ಇವೆಲ್ಲವೂ ಇರುವ ಮಾಸ್ ಕಮರ್ಷಿಯಲ್ ಸಿನಿಮಾ ಇದು. ಇದೆಲ್ಲದರ ಜೊತೆಗೆ ಒಂದು ಒಳ್ಳೆಯ ಸಂದೇಶ ಅಥವಾ ಉದ್ದೇಶ ಈ ಸಿನಿಮಾದ ಹೆಚ್ಚುಗಾರಿಕೆ. ಒಬ್ಬ ರೈತನಿಗೆ ಭೂಮಿಗೆ ಗಾಯವಾಗದಂತೆ ಬೆಳೆ ಬೆಳೆಯುವ ಆಸೆ. ಹಸಿರು ಉಕ್ಕಿಸುವ, ಪೈರು ನಲಿದಾಡಿಸುವ ಹಂಬಲ. ಆದರೆ ಎಲ್ಲರಿಗೂ ಒಳ್ಳೆಯ ಮನಸ್ಸೇ ಇದ್ದರೆ ಭೂಮಿ ಹೀಗೆಲ್ಲ ಇರಲು ಸಾಧ್ಯವೇ. ಹಸಿರಿಗೆ ಕೊಡಲಿ ಇಡುವ ಮನುಜರು ಇರುತ್ತಾರೆ. ಅವರು ಬಂದಾಗ ಕಥೆ ತೀವ್ರವಾಗುತ್ತದೆ. ಇಲ್ಲಿ ರೈತನ ಮಹೋನ್ನತ ಕನಸು ಇದೆ. ಆ ಕನಸಿಗೆ ಕೊಳ್ಳಿ ಇಡುವ ದುರಾಸೆ ಇದೆ. ಜೊತೆಗೆ ರೈತನ ಹಿತ ಕಾಯುವ ಮನಸ್ಸೂ ಇದೆ. ಹಾಗಾಗಿಯೇ ಇದು ಮನಸ್ಸು ಗೆಲ್ಲುವ ಶಕ್ತಿ ಹೊಂದಿದೆ. ಕುಟುಂಬ ಕಾಯುವ ಮಗನಾಗಿ, ಮಣ್ಣು ಕಾಯುವ ಯೋಧನಾಗಿ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದಾರೆ. ಅವರ ನಿಲುವು, ಮಾತು, ನಡವಳಿಕೆ ಎಲ್ಲವೂ ಈ ಕಥೆಗೆ ಪೂರಕವಾಗಿದೆ. ಹಸಿರು ಜೀವಿಸುವ ರೈತನಾಗಿ ರಾಜೇಶ್ ನಟರಂಗ ಹೃದಯ ಗೆಲ್ಲುತ್ತಾರೆ. ಎಲ್ಲಾ ಕಲಾವಿದರೂ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಗುರುಕಿರಣ್ ಹಿನ್ನೆಲೆ ಸಂಗೀತದ ಮೂಲಕ ಕಥೆಯ ತೀವ್ರತೆ ಹೆಚ್ಚಿಸಿದ್ದಾರೆ. ಇದೊಂದು ಸದುದ್ದೇಶ ಹೊಂದಿರುವ, ಮಾಸ್ ಕಮರ್ಷಿಯಲ್ ಸಿನಿಮಾ.