ಕನ್ನಡ ಚಿತ್ರಗಳಿಗೆ ಅಮೆಜಾನಲ್ಲಿ ಕಿಮ್ಮತ್ತಿಲ್ಲ!

| Published : Jul 05 2024, 12:47 AM IST / Updated: Jul 05 2024, 04:40 AM IST

Amazon
ಕನ್ನಡ ಚಿತ್ರಗಳಿಗೆ ಅಮೆಜಾನಲ್ಲಿ ಕಿಮ್ಮತ್ತಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಓಟಿಟಿಗಳು ಕನ್ನಡ ಚಿತ್ರಗಳನ್ನು ನಿರ್ಲಕ್ಷಿಸುತ್ತಿವೆ. ಕನ್ನಡಕ್ಕೆ ಕಿಮ್ಮತ್ತಿನ ಬೆಲೆ ಕೊಡುತ್ತಿಲ್ಲ ಎನ್ನುವ ಮಾತಿನಲ್ಲಿ ನಿಜವೆಷ್ಟು, ಸುಳ್ಳೆಷ್ಟು?

ಆರ್‌. ಕೇಶವಮೂರ್ತಿ

ಕನ್ನಡ ಚಿತ್ರರಂಗ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಓಟಿಟಿ ಕೂಡ ಒಂದು. ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ನಂತಹ ಓಟಿಟಿಗಳು ಕನ್ನಡ ಚಿತ್ರಗಳನ್ನು ನಿರ್ಲಕ್ಷಿಸುತ್ತಿವೆ ಎಂಬುದು ಸ್ಯಾಂಡಲ್‌ವುಡ್‌ನಲ್ಲಿ ಕೇಳಿ ಬರುವ ರಾಷ್ಟ್ರೀಯ ಸಮಸ್ಯೆ. ಅದು ನಿಜವೇ? ಅಮೆಜಾನ್‌ ಪ್ರೈಮ್‌, ಬುಕ್‌ಮೈಶೋನಂತಹ ಪ್ರತಿಷ್ಠಿತ ಸಂಸ್ಥೆಗಳ ಜತೆಗೆ ಕೆಲಸ ಮಾಡುತ್ತಿರುವ ಮತ್ತು ಕನ್ನಡ ಚಿತ್ರಗಳನ್ನು ಅಮೆಜಾನ್‌ ಪ್ರೈಮ್‌ಗೆ ವ್ಯಾಪಾರ ಮಾಡಿಸುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಶಚಿನಾ ಹೆಗ್ಗಾರ್ ಹೇಳುವುದೇ ಬೇರೆ.. ಓಟಿಟಿ ಮತ್ತು ಚಿತ್ರರಂಗದ ಮಧ್ಯೆ ಆಗುತ್ತಿರುವ ತಿಕ್ಕಾಟಕ್ಕೆ ಅವರ ಈ ಮಾತುಗಳಿಂದ ಸ್ಪಷ್ಟತೆ ಸಿಗಬಹುದಾಗಿದೆ..

1. ಓಟಿಟಿಗಳು ಕನ್ನಡ ಚಿತ್ರಗಳನ್ನು ನಿರ್ಲಕ್ಷಿಸುತ್ತಿದೆ, ಕನ್ನಡ ಸಬ್‌ಸ್ಕ್ರೈಬರ್‌ಗಳು ಬೇಕು, ಕನ್ನಡ ಚಿತ್ರಗಳು ಬೇಡವೇ ಎನ್ನುವ ಪ್ರಶ್ನೆಯಲ್ಲಿ ವಾಸ್ತವಾಂಶ ಇಲ್ಲ. ಅಮೆಜಾನ್‌ ಪ್ರೈಮ್‌ನಲ್ಲಿ ನಾಲ್ಕು ವಿಭಾಗಗಳಲ್ಲಿ ಕನ್ನಡ ಸಿನಿಮಾಗಳ ಮಾರಾಟ, ಪ್ರದರ್ಶನಕ್ಕೆ ಈಗಲೂ ಅವಕಾಶ ಇದೆ.

2. ಈಗ ಇರುವ ಪ್ರತಿಷ್ಠಿತ ಓಟಿಟಿಗಳನ್ನು ತೆಗೆದು ನೋಡಿದರೆ ಬೇರೆ ಓಟಿಟಿಗಳಿಗಿಂತ ಅಮೆಜಾನ್‌ ಪ್ರೈಮ್‌ನಲ್ಲೇ ಹೆಚ್ಚು ಕನ್ನಡ ಸಿನಿಮಾಗಳು ಇವೆ. ಇತ್ತೀಚಿನ ವರ್ಷಗಳ ಲೆಕ್ಕ ಕೊಡುವುದಾದರೆ 2022ರಲ್ಲಿ 18, 2023ರಲ್ಲಿ 20 ರಿಂದ 25 ಹಾಗೂ ಈ ವರ್ಷ 2024ರಲ್ಲಿ ಈಗಾಗಲೇ 10 ಸಿನಿಮಾಗಳನ್ನು ಕೊಳ್ಳಲಾಗಿದೆ.3. ಎರಡ್ಮೂರು ವರ್ಷಗಳಿಂದ ಅಮೆಜಾನ್‌ ಪ್ರೈಮ್‌ಗೆ ನಷ್ಟ ಆಗುತ್ತಿದೆ. ಇತ್ತೀಚೆಗೆ ಕೇವಲ 5 ಚಿತ್ರಗಳ ಮೇಲೆ 60 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ. ಕಳೆದ ಎರಡ್ಮೂರು ವರ್ಷಗಳಿಂದ ಅಮೆಜಾನ್‌ ಪ್ರೈಮ್‌ ಸಂಸ್ಥೆ ಒಂದೇ ಕನ್ನಡ ಚಿತ್ರರಂಗದಲ್ಲಿ ಹೂಡಿಕೆ ಮಾಡಿರುವುದು.

4. ಮೊದಲಿನಂತೆ ಈಗ ಒಂದೇ ಸಲ ಮುಂಗಡ ಹಣ ಕೊಟ್ಟ ಪೂರ್ಣಪ್ರಮಾಣದಲ್ಲಿ ಚಿತ್ರಗಳನ್ನು ಕೊಳ್ಳುತ್ತಿಲ್ಲ. ಯಾಕೆಂದರೆ ಈಗಾಗಲೇ ಕೋಟಿ ಕೋಟಿ ಸುರಿದು ಕೊಂಡುಕೊಂಡ ಚಿತ್ರಗಳಿಂದ ಅಮೆಜಾನ್‌ ಪ್ರೈಮ್‌ಗೆ ಯಾವುದೇ ಲಾಭ ಆಗಿಲ್ಲ. ಲಾಭ ಇಲ್ಲದೆ ಯಾರು ಯಾವ ಬಿಸಿನೆಸ್‌ ಮಾಡಲ್ಲ. ಹೀಗಾಗಿ ವ್ಯಾಪಾರದ ದಾರಿಗಳನ್ನು ಬದಲಾಯಿಸಿಕೊಂಡಿದ್ದಾರೆ ಅಷ್ಟೇ.

5. ಚಿತ್ರದ ಮೇಲೆ ಅಷ್ಟು ನಂಬಿಕೆ ಇದ್ದರೆ ಬಾಡಿಗೆ, ಪೇ ಪರ್‌ ವ್ಯೂ ಆಧಾರದ ಮೇಲೆ ಚಿತ್ರಗಳನ್ನು ಹಾಕಬಹುದು. ದೂರಿದರೆ ಪ್ರಯೋಜನವಿಲ್ಲ. ಓಟಿಟಿಗಳತ್ತ ಬೆರಳು ಮಾಡುವುದನ್ನು ನಿಲ್ಲಿಸಿ, ಯಾವ ರೀತಿಯ ಸಿನಿಮಾಗಳನ್ನು ಮಾಡಬೇಕು ಎಂದು ಯೋಚಿಸಿ. ಇವತ್ತು ಡಿಜಿಟಲ್‌ ಕ್ರಾಂತಿ ನಿರೀಕ್ಷೆಗೂ ಮೀರಿ ಆಗುತ್ತಿದೆ. ಯೂಟ್ಯೂಬ್‌, ರೀಲ್ಸ್‌ ಮುಂತಾದ ಕಡೆ ಬರುತ್ತಿರುವ ಮನರಂಜನೆಗೂ ಮೀರಿದ ಕತೆಗಳನ್ನು ಹೇಳಿ ಪ್ರೇಕ್ಷಕರನ್ನು ತಲುಪುವ ಸವಾಲು ಇದೆ. ಈ ಬಗ್ಗೆ ಯೋಚಿಸಬೇಕಿದೆ.

6. ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 2’ ಚಿತ್ರದ ಶೂಟಿಂಗ್‌ಗೂ ಮೊದಲೇ ಅಮೆಜಾನ್‌ ಪ್ರೈಮ್‌ ಬುಕ್‌ ಮಾಡಿಕೊಂಡಿದೆ. ಇದೇ ನಂಬಿಕೆ ಮತ್ತು ಕ್ವಾಲಿಟಿ ಕತೆ, ಚಿತ್ರಗಳನ್ನು ಬೇರೆಯವರು ಕೊಟ್ಟರೂ ಅಮೆಜಾನ್‌ ಪ್ರೈಮ್‌ ತೆಗೆದುಕೊಳ್ಳುತ್ತದೆ. ‘ಕಾಂತಾರ 2’ ಚಿತ್ರಕ್ಕೆ ಕೊಟ್ಟ ಗೌರವವನ್ನು ಬೇರೆ ಚಿತ್ರಗಳಿಗೂ ಕೊಡುತ್ತಾರೆ.

7. ಓಟಿಟಿ ಸಮಸ್ಯೆ ಕನ್ನಡಕ್ಕೆ ಮಾತ್ರವಲ್ಲ ಹಿಂದಿ, ಮಲಯಾಳಂ, ತೆಲುಗು, ತಮಿಳಿಗೂ ಇದೆ. ಕನ್ನಡ ಸಿನಿಮಾಗಳಿಗೆ ಬೇಗ ಬಂದಿದೆ ಅಷ್ಟೆ. ಇತ್ತೀಚೆಗೆ ಒಂದು ದೊಡ್ಡ ಓಟಿಟಿ ಕನ್ನಡ ಮತ್ತು ಮಲಯಾಳಂ ಚಿತ್ರಗಳನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದೆ.

8. ಸಿನಿಮಾಗಳಿಗೆ ಬರುವ ಹೊಗಳಿಕೆ ಮಾತುಗಳಿಂದ ನಾವೇ ಅದ್ಭುತ ಸಿನಿಮಾ ಮಾಡಿದ್ದೇವೆ, ನೀವು ತೆಗೆದುಕೊಳ್ಳುತ್ತಿಲ್ಲ ಎಂದು ಓಟಿಟಿ ವಿರುದ್ಧ ಸಿಟ್ಟು ಮಾಡಿಕೊಂಡರೆ ಪ್ರಯೋಜನ ಇಲ್ಲ. ಹೊಗಳಿಕೆ ಮಾತುಗಳನ್ನು ಸೆಲೆಬ್ರೇಟ್‌ ಮಾಡುವುದನ್ನು ನಿಲ್ಲಿಸುವ ಅಗತ್ಯ ಇದೆ.

9. ಪೇ ಪರ್‌ ವ್ಯೂ ಆಧಾರದ ಮೇಲೆ ಒಂದು ಸಿನಿಮಾ ಮೂರು- ನಾಲ್ಕು ತಿಂಗಳಲ್ಲಿ 25 ರಿಂದ 50 ಲಕ್ಷ ಗಳಿಕೆ ಮಾಡುತ್ತದೆ. ಕಳೆದ ವರ್ಷ ಪಿವಿಡಿ ಆಧಾರದ ಮೇಲೆ ಹಾಕಿದ್ದ 2 ಸಿನಿಮಾ 1 ಕೋಟಿ ಗಳಿಸಿದೆ. ಇಷ್ಟೂ ಹಣ ನಿರ್ಮಾಪಕನಿಗೇ ಸೇರುತ್ತದೆ.

10. ಪ್ರೇಕ್ಷಕರು ಬುದ್ಧಿವಂತರಾಗಿದ್ದಾರೆ. ಅವರಿಗೆ ಒಳ್ಳೆಯ ಕತೆ ಬೇಕಿದೆ. ಕತೆ ಹುಡುಕಿ, ಕ್ವಾಲಿಟಿ ಸಿನಿಮಾ ಮಾಡಿದರೆ, ಅಮೆಜಾನ್‌ ಪ್ರೈಮ್‌ನಂತಹ ಓಟಿಟಿಗಳು ಅಂಥ ಸಿನಿಮಾಗಳನ್ನು ಹುಡುಕಿಕೊಂಡು ಬರುತ್ತವೆ.