ಸಾರಾಂಶ
ಸಿನಿವಾರ್ತೆ
ಡಾಲಿ ಧನಂಜಯ ನಾಯಕನಾಗಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಹಲಗಲಿ’ಯ ಮೊದಲ ನೋಟ ಇಂದು (ಗುರುವಾರ) ಸಂಜೆ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಮೊಟ್ಟ ಮೊದಲ ಬಾರಿಗೆ ಡಾಲಿ ಧನಂಜಯ ಐತಿಹಾಸಿಕ ವೀರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲಗಲಿ ದಂಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಬೇಡರ ನಾಯಕನಾಗಿ ಡಾಲಿ ನಟಿಸಿದ್ದಾರೆ.
ಸುಕೇಶ್ ನಾಯಕ್ ನಿರ್ದೇಶನದ ಈ ಚಿತ್ರವನ್ನು ಕಲ್ಯಾಣ್ ಚಕ್ರವರ್ತಿ ಡಿ ಅವರು 80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇದು ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರುತ್ತಿದೆ. ಗ್ಲಿಂಪ್ಸ್ ಬಿಡುಗಡೆಗೂ ಮುನ್ನವೇ ಚಿತ್ರತಂಡ ‘ಕನ್ನಡಪ್ರಭ’ ಜೊತೆಗೆ ಕುತೂಹಲ ಮೂಡಿಸುವ ಫೋಟೋ ಹಂಚಿಕೊಂಡಿದೆ.
1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹತ್ತಿದಾಗ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು, ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರನ್ನು ಸಿಂಹಸ್ವಪ್ನವಾಗಿ ಕಾಡಿದ್ದರು. ಈ ವೀರರ ಚರಿತ್ರಿಕ ಕಥನವನ್ನು ದಾಖಲಿಸುವ ನಿಟ್ಟಿನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.