ಸಾರಾಂಶ
ಹಲಗಲಿ ಜನಪದ ಸಾಹಿತ್ಯ ಕಾರ್ಯಕ್ರಮ । ಬ್ರಿಟಿಷರ ನಿದ್ದೆ ಕೆಡಿಸಿದ ವೀರ ಕನ್ನಡಿಗರು
ಕನ್ನಡಪ್ರಭ ವಾರ್ತೆ ಬೇಲೂರುಬ್ರಿಟಿಷರು ಜಾರಿಗೆ ತಂದಿದ್ದ ನಿಶಸ್ತ್ರೀಕರಣ ಕಾನೂನಿನ ವಿರುದ್ಧ ಸೆಡ್ಡು ಹೊಡೆದ ಕನ್ನಡ ನೆಲೆದ ಹಲಗಲಿ ಬೇಡರ ಹೋರಾಟ ಇಂದಿಗೂ ಮಾದರಿಯಾಗಿದೆ ಎಂದು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ವೈ.ಡಿ.ಲೋಕೇಶ್ ಹೇಳಿದರು.
ಪಟ್ಟಣದ ಪೂರ್ಣಪ್ರಜ್ಞ ವಿದ್ಯಾ ಕೇಂದ್ರದ ಸಭಾಂಗಣದಲ್ಲಿ ತಾಲೂಕು ಜಾನಪದ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಹಲಗಲಿ ಜನಪದ ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಿಪಾಯಿ ದಂಗೆ ಇತಿಹಾಸ ಪುಟಗಳಲ್ಲಿ ದಾಖಲಾಗಿರುವ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿದ್ದ ವೇಳೆಗೆ ಇಂದಿನ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು ಬ್ರಿಟಿಷರ ನಿದ್ದೆಗೆಡಿಸಿದ ವೀರ ಕನ್ನಡಿಗರು ಇವರು. ಇಂತಹ ಅಪರೂಪದ ಮಾಹನ್ ವ್ಯಕ್ತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ತಾಲೂಕು ಜಾನಪದ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ತಾಲೂಕು ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಸಿ.ಸಿದ್ದೇಗೌಡ ಮಾತನಾಡಿ, ‘ನಮ್ಮ ಪೂರ್ವಜರಿಗೆ ಬದುಕಿನ ಬಗ್ಗೆ ಆಸಕ್ತಿ ಇರುವಂತೆ ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿ ಇತ್ತು. ದುಃಖ ಸುಖಗಳಲ್ಲೂ ತಟಸ್ಥ ಭಾವ ಇರಬೇಕು. ಬರುವ ಕಷ್ಟಗಳಿಗೆ ಎದುರಿಸುವ ಧೈರ್ಯವಿರಬೇಕು. ಬಾಳು ಗಂಭೀರವಾಗಿ ಕಂಡರೂ ಸರ್ವಕಾಲಕ್ಕೂ ಖುಷಿಯಿಂದ ಜೀವಿಸಬೇಕು ಎಂಬ ಅನೇಕ ಉದಾತ್ತ ವಿಚಾರಗಳು ನಮ್ಮ ಜಾನಪದ ಕಲೆಯಲ್ಲಿವೆ. ಗಾದೆಗಳು, ಒಗಟುಗಳು, ಸೋಬಾನ ಪದಗಳು ಇದಕ್ಕೆ ಸಾಕ್ಷಿಯಾಗಿವೆ, ಅಮೂಲ್ಯ ಸಾಹಿತ್ಯವನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಳಿಸುವ ಮಹತ್ವಪೂರ್ಣ ಕೆಲಸ ತಾಲೂಕು ಜಾನಪದ ಪರಿಷತ್ತು ನಡೆಸುತ್ತಿದೆ’ ಎಂದು ತಿಳಿಸಿದರು.
ಪೂರ್ಣಪ್ರಜ್ಞ ವಿದ್ಯಾ ಕೇಂದ್ರದ ಪ್ರಾಂಶುಪಾಲ ಎನ್.ಪ್ರಶಾಂತ್ ಕುಮಾರ್ ಮಾತನಾಡಿ, ಪೂರ್ಣಪ್ರಜ್ಞ ವಿದ್ಯಾ ಕೇಂದ್ರ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅದ್ವಿತೀಯವಾಗಿ ವಿದ್ಯಾರ್ಥಿಗಳಿಗೆ ಪೂರಕ ಶಿಕ್ಷಣ ನೀಡುತ್ತಿದೆ. ಅಂತಯೇ ಎಲ್ಲಾ ಸಾಹಿತ್ಯದ ಅಡಿಪಾಯವಾದ ಜಾನಪದ ಸಾಹಿತ್ಯವನ್ನು ತಿಳಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕವನಾಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಹಾಸನ ಸರ್ಕಾರಿ ಗೃಹ ವಿಜ್ಞಾನ ಕಾಲೇಜು ನಿವೃತ್ತ ಇತಿಹಾಸ ಪ್ರಾಧ್ಯಾಪಕಿ ಡಾ.ವಿದ್ಯಾ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಸಾಹಿತಿ ಇಂದಿರಮ್ಮ, ನಿವೃತ್ತ ಪ್ರಾಂಶುಪಾಲ ಎನ್.ಪುಟ್ಟರಾಜು, ಸಾಹಿತಿ ಸೋಂಪುರ ಪ್ರಕಾಶ್, ಪ್ರಾಂಶುಪಾಲರಾದ ಸುನೀತಾ ಕುಮಾರ್, ಉಪನ್ಯಾಸಕ ಧನಂಜಯ, ಶೇಷಪ್ಪ ಸೇರಿದಂತೆ ಇತರರು ಇದ್ದರು.
ಜನಪದ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳುಜನಪದ ಸಾಹಿತ್ಯದಲ್ಲಿ ಮಾನವೀಯ ಮೌಲ್ಯ ಅಡಗಿವೆ. ಜನಪದ ಸತ್ಯ ಸಂಗತಿಗಳನ್ನೇ ಒಳಗೊಂಡಿದ್ದು, ಅಲ್ಲಿ ಕಾಲ್ಪನಿಕತೆಗೆ ಅವಕಾಶವಿಲ್ಲ. ಹಾಗಾಗಿ ಈ ಸಾಹಿತ್ಯ ಅಷ್ಟೊಂದು ವಿಶೇಷತೆ ಪಡೆದುಕೊಂಡಿದೆ. ಮನಸ್ಸಿನ ಭಾವನೆಗಳನ್ನು ಹೊರಹಾಕಲು, ದೇಶಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಜನಪದವೇ ಸೂಕ್ತವಾಗಿದೆ. ಅನುಭವ ಸಾಹಿತ್ಯದಿಂದ ಕೂಡಿದ ಕಾರಣದಿಂದ ವಿದ್ಯಾರ್ಥಿಗಳು ವಚನ ಸಾಹಿತ್ಯದ ಬಗ್ಗೆ ವಿಶೇಷ ಗಮನ ನೀಡಬೇಕು ಎಂದು ಪತ್ರಕರ್ತ ಹಾಗೂ ಬೇಲೂರು ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಹೇಳಿದರು.