ಸಾರಾಂಶ
ಹೇಮಂತ ರಾವ್ ತನ್ನ ತಾಯಿಯ ಹೆಸರಿನಲ್ಲಿ ದಾಕ್ಷಾಯಿಣಿ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ.
ನಿರ್ದೇಶಕ ಹೇಮಂತ್ ರಾವ್ ‘ದಾಕ್ಷಾಯಿಣಿ ಟಾಕೀಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಅಧಿಕೃತವಾಗಿ ಲಾಂಚ್ ಮಾಡಿದ್ದಾರೆ. ಕ್ಯಾನ್ಸರ್ ಜೊತೆ ಹೋರಾಡಿ ಕಳೆದ ವರ್ಷ ಅಗಲಿದ ತನ್ನ ತಾಯಿಯ ಹೆಸರಿನಲ್ಲಿ ಈ ಹೊಸ ಸಂಸ್ಥೆ ಆರಂಭಿಸಿದ್ದಾರೆ. ಈ ವೇಳೆ ತನ್ನ ತಾಯಿಯ ಬಗ್ಗೆ ಭಾವನಾತ್ಮಕ ನೋಟ್ ಅನ್ನು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಚಿಕ್ಕವನಿದ್ದಾಗ ಸಿಕ್ಕಾಪಟ್ಟೆ ಚೂಟಿಯಾಗಿದ್ದೆ. ಬೇಸಿಗೆ ರಜೆಯ ವೇಳೆ ನನ್ನ ಎನರ್ಜಿಯನ್ನು ಸರಿಯಾದ ರೀತಿ ದುಡಿಸಿಕೊಳ್ಳುವುದೇ ಅಮ್ಮನಿಗೆ ಚಾಲೆಂಜಿಂಗ್ ಆಗಿತ್ತು. ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ಆಕೆ ನನ್ನನ್ನು ಸ್ಥಳೀಯ ಲೈಬ್ರೆರಿಗೆ ಕರೆದೊಯ್ದು, ಅಲ್ಲಿನ ಮೆಂಬರ್‌ಶಿಪ್ ಕೊಡಿಸಿದರು. ಈ ಮೂಲಕ ಅರಿವಿದ್ದೋ ಇಲ್ಲದೆಯೋ ನನ್ನ ಬದುಕಿಗೆ ಹಾದಿ ತೋರಿದರು. ಅಂದು ತೆರೆದುಕೊಂಡ ಕಥೆಗಳ ಜಗತ್ತು ಇಂದು ನನ್ನ ವೃತ್ತಿಯಾಗಿದೆ.ಕಳೆದ ವರ್ಷ ಫೆಬ್ರವರಿ 14ಕ್ಕೆ ಅಮ್ಮನನ್ನು ಕಳೆದುಕೊಂಡೆ. ಕ್ಯಾನ್ಸರ್ ಜೊತೆ ಮಾತ್ರ ಅಲ್ಲ, ಬದುಕಿನ ಪ್ರತೀ ಹಂತದಲ್ಲೂ ಎದುರಾದ ಸಂಘರ್ಷಗಳ ಜೊತೆಗೆ ಹೋರಾಡಿದರು. ಈ ಹೋರಾಟದ ಕಿಚ್ಚನ್ನು ಆಕೆಯ ಭೌತಿಕ ಅನುಪಸ್ಥಿತಿಯ ನಡುವೆಯೂ ಮುಂದಕ್ಕೆ ಕೊಂಡೊಯ್ಯಬೇಕು ಎಂಬ ಹಂಬಲ ನನ್ನದು.
ಒಳ್ಳೆಯ ಕೆಲಸದ ಮೂಲಕ ಯಾರನ್ನಾದರೂ ಸದಾ ಜೀವಂತವಾಗಿಟ್ಟುಕೊಳ್ಳಬಹುದು ಎಂಬ ಮಾತಿನಲ್ಲಿ ನನಗೆ ನಂಬಿಕೆ ಇದೆ. ಆ ನಂಬಿಕೆಯಲ್ಲೇ ‘ದಾಕ್ಷಾಯಿಣಿ ಟಾಕೀಸ್’ ಆರಂಭಿಸುತ್ತಿದ್ದೇನೆ. ‘ಅಜ್ಞಾತವಾಸಿ’ ಸಿನಿಮಾವನ್ನು ಈ ಸಂಸ್ಥೆಯ ಮೂಲಕ ಹೊರ ತರುತ್ತಿದ್ದೇನೆ. ಮುಂದಿನ ವಾರ ಸಿನಿಮಾ ದಿನಾಂಕ ಘೋಷಿಸುತ್ತೇವೆ.ಆಕೆಗೆ ಎಂದೂ ಇದನ್ನ ಹೇಳಿರಲಿಲ್ಲ, ಆದರೂ.. ಲೈಬ್ರೆರಿ ಸದಸ್ಯತ್ವಕ್ಕೆ ಥ್ಯಾಂಕ್ಯೂ ಸುಂದರೀ.
ಇದು ಹೊಸ ಆರಂಭ, ಕಥೆಗಳ ಶಕ್ತಿ ಸಂಚಲನ’ ಎಂದು ಹೇಮಂತ್ ರಾವ್ ಬರೆದುಕೊಂಡಿದ್ದಾರೆ.