ಮನರಂಜನೆ ಮೂಲಕ ಎಚ್ಚರಿಸುವ ಸಿನಿಮಾ ಕಬಂಧದಲ್ಲಿ ಹೀರೋ ಶ್ರಮಜೀವಿ ಪ್ರಸಾದ್‌ ವಸಿಷ್ಠ.

| Published : Jul 19 2024, 12:51 AM IST / Updated: Jul 19 2024, 05:46 AM IST

ಸಾರಾಂಶ

ಕಿಶೋರ್, ಅವಿನಾಶ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ಕಬಂಧ ಸಿನಿಮಾ ಮೂಲಕ ಪ್ರಸಾದ್ ವಸಿಷ್ಠ ನಾಯನಾಗಿ ಹೊರಹೊಮ್ಮುತ್ತಿದ್ದಾರೆ.

ಪ್ರತಿಯೊಬ್ಬ ನಟನಿಗೂ ತಾನು ಒಂದು ವಿಶಿಷ್ಟ ಕಥೆಯ ಭಾಗವಾಗಬೇಕು ಎಂಬ ಹಂಬಲ ಇರುತ್ತದೆ. ಆ ಮೂಲಕ ಗೆಲುವು ಪಡೆಯಬೇಕು ಎಂಬ ಆಸೆ ಇರುತ್ತದೆ. ಕೆಲವರಿಗೆ ಆ ಅದೃಷ್ಟ ತನ್ನಿಂತಾನೇ ಸಿಕ್ಕರೆ. ಹಲವರು ಅದಕ್ಕಾಗಿ ಹತ್ತಾರು ವರ್ಷ ಶ್ರಮಿಸುತ್ತಾರೆ. ಬೇರೆ ಬೇರೆ ಕಥೆಯ ಭಾಗವಾಗಿ ಕೊನೆಗೆ ತಮಗೆ ಬೇಕಾದ ಕಥೆಯ ಭಾಗವಾಗುತ್ತಾರೆ. ಅಂಥಾ ಒಬ್ಬ ಶ್ರಮಜೀವಿ ಪ್ರಸಾದ್‌ ವಸಿಷ್ಠ.

ತುಮಕೂರು ಮೂಲದ ಪ್ರಸಾದ್ ಅನೇಕ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಪಾತ್ರ ಪೋಷಣೆಯಿಂದ ಹೆಸರಾಗಿದ್ದಾರೆ. ಪಾತ್ರಕ್ಕಾಗಿ ನಡೆಸುವ ತಯಾರಿಯಿಂದಲೇ ಅನೇಕ ತಂಡಗಳ ಮನಗೆದ್ದಿದ್ದಾರೆ.

ಅಂಥಾ ಸಿನಿಮಾ ವ್ಯಾಮೋಹಿ ಇದೀಗ ವಿಭಿನ್ನ ಕಥೆಯ ‘ಕಂಬಂಧ’ ಸಿನಿಮಾ ಮೂಲಕ ನಾಯಕರಾಗಿದ್ದಾರೆ.

ಸಿನಿಮಾ ಕುರಿತು ಅಪಾರ ನಂಬಿಕೆ ಇಟ್ಟುಕೊಂಡಿರುವ ಪ್ರಸಾದ್ ವಸಿಷ್ಠ, ‘ಗುಣಮಟ್ಟದ ಸಿನಿಮಾ ಕೊಡಬೇಕು, ವಿಶಿಷ್ಟ ಕಥೆ ಕೊಡಬೇಕು ಎಂಬ ಉದ್ದೇಶದಿಂದ ಮಾಡಿರುವ ಸಿನಿಮಾ ಇದು. ಮನರಂಜನಾತ್ಮಕವಾಗಿಯೇ ಕತೆ ಹೇಳಿ ಕಡೆಗೊಂದು ಸಂದೇಶ ನೀಡುವುದು ನಮ್ಮ ಸಿನಿಮಾದ ವಿಶಿಷ್ಟತೆ. ನಾವು ಮುಂದಿನ ಪೀಳಿಗಿಗೆ ಅನ್ಯಾಯ ಮಾಡಿದ್ದೇವೆ. ಅದೇನು ಅನ್ನುವುದನ್ನು ನಮ್ಮ ಸಿನಿಮಾದ ಕತೆಯ ಹೈಲೈಟ್’ ಎನ್ನುತ್ತಾರೆ ಪ್ರಸಾದ್‌.

ಅ‍ರು ತಮ್ಮದೇ ಒಂದು ತಂಡ ಕಟ್ಟಿಕೊಂಡು ರೂಪಿಸಿರುವ ಸಿನಿಮಾ ಇದು. ಬಹುತೇಕ ಚಿತ್ರೀಕರಣ ತುಮಕೂರಿನ ದೇವರಾಯನ ದುರ್ಗ ಸಮೀಪ ಮಾಡಿದ್ದಾರೆ.‘ಸೈಕಾಲಜಿಕಲ್ ಥ್ರಿಲ್ಲರ್ ಅಥವಾ ಹಾರರ್‌ ಶೈಲಿಯ ಕತೆ ಇದು. ಒಂದು ರಾತ್ರಿ, ಒಂದು ಹಗಲಿನ ಕತೆ. ಕುತೂಹಲಕರವಾಗಿ ಕತೆ ಸಾಗುತ್ತದೆ. ವಿಷ್ಣುಪ್ರಸಾದ್‌ ತುಂಬಾ ಚೆನ್ನಾಗಿ ಕ್ಯಾಮೆರಾ ಮೂಲಕ ದೃಶ್ಯಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅವಿನಾಶ್‌ ಸರ್‌, ಕಿಶೋರ್‌ ಸರ್‌, ಯೋಗರಾಜ್ ಭಟ್ಟರು ಕತೆಯನ್ನು ಮೆಚ್ಚಿಕೊಂಡು ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಹೊಸ ಹೊಳಹು ಕೊಡಬೇಕು ಎನ್ನುವುದು ನಮ್ಮ ಆಸೆ. ಅದಕ್ಕೆ ತಕ್ಕಂತೆ ನಿರ್ದೇಶಕ ಸತ್ಯನಾಥ್ ಕಥೆ ಹೆಣೆದಿದ್ದಾರೆ. ಚಿತ್ರಮಂದಿರದಲ್ಲಿ ನಮ್ಮ ಸಿನಿಮಾ ನೋಡುವವರಿಗೆ ಸಿನಿಮ್ಯಾಟಿಕ್ ಅನುಭವ ಸಿಗುತ್ತದೆ ಮತ್ತು ಒಂದೊಳ್ಳೆ ಸಿನಿಮಾ ನೋಡಿದ ನೆಮ್ಮದಿ ಸಿಗುತ್ತದೆ. ಅದಂತೂ ನಿಶ್ಚಿತ’ ಎನ್ನುತ್ತಾರೆ ಪ್ರಸಾದ್ ವಸಿಷ್ಠ.

ಪ್ರಸಾದ್ ಮತ್ತು ತಂಡಕ್ಕೆ ಸಿನಿಮಾ ಮೇಲೆ ಅಪಾರ ನಂಬಿಕೆ ಇದೆ. ಜೊತೆಗೆ ಹೆಚ್ಚು ಜನಕ್ಕೆ ಸಿನಿಮಾ ತಲುಪಿಸಬೇಕು ಎಂಬ ಆಸೆಯೂ ಇದೆ. ಅದಕ್ಕೆ ಪೂರಕವಾಗಿ ದುಡಿಯುತ್ತಿದ್ದಾರೆ. ಜನಕ್ಕೆ ತಲುಪಿಸಬೇಕು ಮತ್ತು ಈ ಸಿನಿಮಾ ಗೆಲ್ಲಿಸಬೇಕು ಎಬ ತುಡಿತ ಅವರ ನಡವಳಿಕೆಯಲ್ಲಿ ಕಾಣಿಸುತ್ತಿದೆ. ಅಂಥಾ ತುಡಿತ ಮತ್ತ ಶ್ರಮ ಎಷ್ಟೋ ಸಿನಿಮಾಗಳನ್ನು ಗೆಲ್ಲಿಸಿದೆ. ಆ ಮ್ಯಾಜಿಕ್ ಇಲ್ಲೂ ನಡೆಯುತ್ತದೆಯೇ ಎಂಬುದನ್ನು ಕಾಲವೇ ಹೇಳಬೇಕಿದೆ. ಅಂದಹಾಗೆ ಕಬಂಧ ಸಿನಿಮಾವನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ಉದ್ದೇಶ ಚಿತ್ರತಂಡಕ್ಕಿದೆ.