ಸಾರಾಂಶ
ಸಿನಿವಾರ್ತೆ
ಎಂಡಿ ಶ್ರೀಧರ್ ನಿರ್ದೇಶಿಸಿರುವ, ಅಂಜಲಿ ಹಾಗೂ ಪ್ರವೀಣ್ ತೇಜ್ ಜೋಡಿಯಾಗಿ ನಟಿಸಿರುವ ‘ಜಂಬೂ ಸರ್ಕಸ್’ ಚಿತ್ರದ ಟೀಸರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಮಹತಿ ಕಂಬೈನ್ಸ್‌ನ ಹೆಚ್‌ಸಿ ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ನಿರ್ದೇಶ ಎಂಡಿ ಶ್ರೀಧರ್, ‘ನಿರ್ಮಾಪಕ ಸುರೇಶ್ ಒಮ್ಮೆ ಒಂದು ಕತೆ ಹೇಳಿ ಸಿನಿಮಾ ಮಾಡಲು ಕೇಳಿದರು. ಅವರ ಕೋರಿಕೆ ನೇರವೇರಿದೆ. ಇಬ್ಬರು ಸ್ನೇಹಿತರು ತಮ್ಮ ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ಮುಂದೆ ಈ ವೈರಿಗಳೇ ಪ್ರೇಮಿಗಳಾದಾಗ ಏನಾಗುತ್ತದೆ ಎಂಬುದು ಚಿತ್ರದ ಕತೆ’ ಎಂದರು.
ಪ್ರವೀಣ್ ತೇಜ್, ‘ಚಿತ್ರರಂಗಕ್ಕೆ ಬಂದು 15 ವರ್ಷಗಳಾಗುತ್ತಿವೆ. ಆದರೂ ಮೊದಲ ಚಿತ್ರದಂತೆ ಮಾಡಿದ್ದೇನೆ. ಎರಡು ಕುಟುಂಬಗಳ ಕತೆ ಈ ಚಿತ್ರದಲ್ಲಿದೆ’ ಎಂದರು. ಹೆಚ್ ಸಿ ಸುರೇಶ್, ‘30 ವರ್ಷಗಳಿಂದ ಚಿತ್ರಗಳಿದ್ದೇನೆ. ಕೌಟುಂಬಿಕ ಮನರಂಜನೆಯ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಜಂಬೂ ಸರ್ಕಸ್ ಮೂಲಕ ಆಸೆ ಈಡೇರುತ್ತಿದೆ’ ಎಂದರು.
ನಟಿ ಅಂಜಲಿ, ಛಾಯಾಗ್ರಾಹಕ ಕೃಷ್ಣ ಕುಮಾರ್, ಸಂಭಾಷಣೆಗಾರ ರಘು ನೀಡುವಳ್ಳಿ, ಸಂಕಲನಕಾರ ಜ್ಞಾನೇಶ್ ಹಾಜರಿದ್ದರು. ಸ್ವಾತಿ, ಲಕ್ಷ್ಮೀ ಸಿದ್ದಯ್ಯ, ಅಚ್ಚುತ್ ಕುಮಾರ್, ರವಿಶಂಕರ್ ಗೌಡ, ಅವಿನಾಶ್ ನಟಿಸಿದ್ದಾರೆ.