ತಾಜಾ ತಾಜಾ ಪ್ರೇಮಕಥೆ

| Published : Feb 10 2024, 01:46 AM IST

ಸಾರಾಂಶ

ಪೃಥ್ವಿ ಅಂಬರ್ ನಟನೆಯ ಜೂನಿ ಸಿನಿಮಾದ ವಿಮರ್ಶೆ

ಚಿತ್ರ: ಜೂನಿತಾರಾಗಣ: ಪೃಥ್ವಿ ಅಂಬರ್‌, ರಿಷಿಕಾ ನಾಯ್ಕ್‌, ಧನುಷ್ ರವೀಂದ್ರ, ಅವಿನಾಶ್‌, ವಿನಯಾ ಪ್ರಕಾಶ್‌

ನಿರ್ದೇಶನ: ವೈಭವ್‌ ಮಹಾದೇವ್‌

ರೇಟಿಂಗ್‌: 3.5

- ಪ್ರಿಯಾ ಕೆರ್ವಾಶೆಅವಳು ‘ಐ ಲವ್‌ ಯೂ’ ಅಂತಾಳೆ. ಅವನು ‘ಥ್ಯಾಂಕ್ಯೂ’ ಅಂತಾನೆ. ಅಲ್ಲಿಗೆ ಹತ್ತಿರಾದ ಜೋಡಿ ಸದ್ದಿಲ್ಲದೆ ದೂರ ಸರಿಯುತ್ತಾರೆ.

ಹೊಸ ವಿನ್ಯಾಸದ ಫ್ಲೋರಲ್‌ ಶರ್ಟ್‌ ಅವನಿಗೆ ಅಂಥಾ ಇಷ್ಟವಾದಂತಿಲ್ಲ. ಆದರೂ ಧರಿಸುತ್ತಾನೆ. ಅದನ್ನು ವಿನ್ಯಾಸ ಮಾಡಿದ ಹುಡುಗಿಗೆ ಷರ್ಟಿನ ಜೊತೆಗೆ ಅವನೂ ಚಂದ ಕಾಣುತ್ತಾನೆ.

ಕರ್ರನೆ ಟಾರು ರಸ್ತೆಯನ್ನೇ ಹೂ ಹಾದಿಯಾಗಿಸುವ ಟುಬೀಬಿಯಾದಂತೆ ಆವರಿಸುವ ಸಿನಿಮಾ ಜೂನಿ. ಇದೊಂದು ಸೈಕಲಾಜಿಕಲ್‌ ರೊಮ್ಯಾಂಟಿಕ್‌ ಕಾಮಿಡಿ. ಮಲ್ಟಿಪಲ್‌ ಪರ್ಸನಾಲಿಟಿ ಡಿಸಾರ್ಡರ್‌ ಸಮಸ್ಯೆಯನ್ನು ಪ್ರೇಮ, ಅಡುಗೆಯ ಹಿನ್ನೆಲೆಯಲ್ಲಿ ರಿಯಲಿಸ್ಟಿಕ್‌ ಮಾರ್ಗದಲ್ಲಿ ತೋರಿಸುವ ಪ್ರಯತ್ನ.

ಸಾಂಘ್ರಿ ಯಾ ಕೆಫೆಯ ಓನರ್‌ ಹಾಗೂ ಶೆಫ್‌ ಪಾರ್ಥ. ಪಿಎಸ್‌ಸಿ ಅಂದರೆ ಪಾರ್ಥ ಸ್ಪೆಷಲ್‌ ಕೇಕ್‌ ಮಾಡಬೇಕು ಎಂಬುದು ಅವನ ಕನಸು. ಹತ್ತಾರು ಸಲ ಕೇಕ್‌ ಮಾಡಿದರೂ ಅದರಲ್ಲಿ ಏನೋ ಮಿಸ್ಸಿಂಗ್‌. ಇನ್ನೊಂದು ಕಡೆ ಆತನ ಕೆಫೆಗೆ ಬಂದು ಹೊಟ್ಟೆಯೊಳಗೆ ಚಿಟ್ಟೆ ರೆಕ್ಕೆ ಬಡಿದಂತೆ ಫೀಲ್‌ ಕೊಡುವ ಹುಡುಗಿ ಜೂನಿ. ಇವರಿಬ್ಬರ ಪ್ರೇಮ ಕಹಾನಿಯಲ್ಲಿ ಎದುರಾಗುವ ಮಾನ್ಸಿ ಮತ್ತು ಚಕ್ಕಿ. ಅವರಿಬ್ಬರೂ ಯಾರು? ಅಡುಗೆಯಲ್ಲಿ ಮಿಸ್ಸಾಗಿದ್ದ ಇನ್‌ಗ್ರೀಡಿಯಂಟ್‌ ಪಾರ್ಥನಿಗೆ ಸಿಕ್ಕುತ್ತಾ? ಅನ್ನೋ ಅಂಶದ ಸುತ್ತ ಸಿನಿಮಾವಿದೆ.

ಮೊದಲ ಭಾಗದಲ್ಲಿ ಹೊಸತನ, ಹಗುರ, ಲವಲವಿಕೆ ಇದೆ. ಎರಡನೇ ಭಾಗದಲ್ಲಿ ಜನಪ್ರಿಯ ಚೌಕಟ್ಟಿನೊಳಗೆ ಕಥೆ ಕೊಂಡೊಯ್ಯುವ ಪ್ರಯತ್ನ ಕಾಣುತ್ತದೆ. ಇಂಟೆನ್ಸ್‌, ರೋಚಕ ಸನ್ನಿವೇಶಗಳು ಇಲ್ಲಿಲ್ಲ. ಗೆಳೆಯನೊಬ್ಬ ಹೆಗಲಿಗೆ ಕೈ ಹಾಕಿ ಕಥೆ ಹೇಳುವಷ್ಟೇ ಕ್ಯಾಶ್ಯುವಲ್ಲಾದ ನಿರೂಪಣೆ ಇದೆ. ಪಾರ್ಥನಾಗಿ ಪೃಥ್ವಿ ಅವರ ನಗು, ಪ್ರೀತಿ, ವಿಷಾದ, ಪೆಚ್ಚುತನ ಆಕರ್ಷಕ. ನಾಯಕಿ ರಿಷಿಕಾ ಸವಾಲೆನಿಸುವ ಪಾತ್ರ ನಿರ್ವಹಿಸಲು ಶ್ರಮ ಹಾಕಿದ್ದಾರೆ. ಪಾರ್ಥನ ಸ್ನೇಹಿತ ಮುರಾದ್‌ ಪಾತ್ರವನ್ನು ಧನುಷ್ ರವೀಂದ್ರ ಸೊಗಸಾಗಿ ನಿರ್ವಹಿಸಿದ್ದಾರೆ. ನಕುಲ್‌ ಅಭ್ಯಂಕರ್‌ ರಾಗ ಸಂಯೋಜನೆಯ ‘ಮರುಳಾದೆ .. ಪದಗಳೇ ಇರದ ಹೊಸತು ಕವಿತೆಯಾದೆ’ ಹಾಡು ಹಿತವೆನಿಸುತ್ತದೆ.

ಒಟ್ಟಾರೆ ಹೊಸತನದ ಘಮದಲ್ಲಿ ಮೂಡಿಬಂದಿರುವ ನವಿರಾದ ಪ್ರೇಮಕಥೆ ಜೂನಿ.