ಲೈನ್‌ಮ್ಯಾನ್‌ ಚಿತ್ರಕ್ಕೆ ಇಡೀ ಊರಿನ ಲೈಟ್‌ ಆಫ್‌ ಮಾಡಿಸಿದ್ವಿ: ನಿರ್ದೇಶಕ ರಘು ಶಾಸ್ತ್ರಿ

| Published : Mar 22 2024, 01:04 AM IST

ಲೈನ್‌ಮ್ಯಾನ್‌ ಚಿತ್ರಕ್ಕೆ ಇಡೀ ಊರಿನ ಲೈಟ್‌ ಆಫ್‌ ಮಾಡಿಸಿದ್ವಿ: ನಿರ್ದೇಶಕ ರಘು ಶಾಸ್ತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಊರಿಗೆಲ್ಲ ಕರೆಂಟ್ ಕೊಡುವ ಲೈನ್‌ಮ್ಯಾನ್‌ಗೆ ಕರೆಂಟ್‌ ತೆಗೆಯಲೇ ಬೇಕಾದ ಸನ್ನಿವೇಶವೊಂದು ಬರುತ್ತದೆ. ಇಂಥಾ ಮಾನವೀಯ ಕಥಾಹಂದರದ ಲೈನ್‌ಮ್ಯಾನ್‌ ಸಿನಿಮಾ ಇಂದು ತೆರೆಗೆ ಬರುತ್ತಿದೆ.

ಪ್ರಿಯಾ ಕೆರ್ವಾಶೆ

- ವಿಭಿನ್ನ ಚಿಂತನೆಯ ಈ ಸಿನಿಮಾಗೆ ಏನು ಸ್ಫೂರ್ತಿ?

ನಾನು ಭ್ರಮೆಗಳಲ್ಲಿ ಬದುಕುತ್ತಿದ್ದೇವೆ ಅನ್ನುವ ವಿಚಾರ ನನ್ನನ್ನು ಆಗಾಗ ಕಾಡುತ್ತಿರುತ್ತದೆ. ಪುನೀತ್‌ ರಾಜ್‌ಕುಮಾರ್‌ ಇದನ್ನೇ ಹೇಳುತ್ತಿದ್ದರು. ‘ಈ ಜನ, ಫೋಟೋ ಎಲ್ಲಾ ಭ್ರಮೆ. ವಾಸ್ತವದಲ್ಲಿ ಪ್ರಜ್ಞಾಪೂರ್ವಕವಾಗಿದ್ದಷ್ಟು ನಾವು ಚೆನ್ನಾಗಿ ಕೆಲಸ ಮಾಡಬಹುದು’ ಎನ್ನುತ್ತಿದ್ದರು. ಈ ಕಥೆ ಬಂದಾಗಲೂ ಅದೇ ನನ್ನನ್ನು ಅಲ್ಲಾಡಿಸುತ್ತಿದ್ದದ್ದು. ಈಗ ಅಭಿವೃದ್ಧಿ ಎಲ್ಲಾ ಇದೆ, ಆದರೆ ಬದುಕಿಗೆ ಬೇಕಾದ ಸಾವಧಾನ ಇಲ್ಲ. ಲೈಫ್‌ನ ಸ್ಪೀಡಿಗೆ ಸ್ಪೀಡ್‌ ಬ್ರೇಕರ್‌ಗಳಿಲ್ಲ. ಇದರ ಜೊತೆಗೆ ನಾವು ಮನುಷ್ಯರು ಯಾಕೆ ಇಷ್ಟೊಂದು ಸುಪೀರಿಯರ್‌ ಭಾವ ಹೊಂದಿದ್ದೇವೆ ಎನ್ನುವ ಯೋಚನೆಯೂ ಇತ್ತು. ಇವೆಲ್ಲ ಚಿಂತನೆಗಳು ಈ ಸಿನಿಮಾ ರೂಪಿಸಿವೆ. - ನಿಮ್ಮದು ಆಶಯಕ್ಕಾಗಿ ಸಿನಿಮಾವಾ, ಸಿನಿಮಾಕ್ಕಾಗಿ ಆಶಯವಾ?ಆಶಯಕ್ಕಿಂತಲೂ ಕಥೆ ಹೇಳಬೇಕು ಎಂಬ ಹಂಬಲ. ಸಿನಿಮಾದ ಮೂಲಕ ಕಥೆ ಹೇಳಿದರೆ ಅದು ಹೆಚ್ಚು ಜನರಿಗೆ ತಲುಪುತ್ತದೆ. ನಾನು ಈ ಹಿಂದೆ ಅನುರಾಗ್‌ ಕಶ್ಯಪ್‌ ಅವರ ಜೊತೆಗೆ ಅಸಿಸ್ಟೆಂಟ್‌ ಡೈರೆಕ್ಟರ್ ಆಗಿ ಕೆಲಸಕ್ಕೆ ಸೇರಿಕೊಳ್ಳುವಾಗಲೂ ಅವರು ಕೇಳಿದ ಪ್ರಶ್ನೆಗೆ ನಾನು ಹೀಗೆಯೇ ಉತ್ತರಿಸಿದ್ದೆ. ನನಗೆ ಸಿನಿಮಾ ಅಂದರೆ ನನ್ನೊಳಗಿನ ಕಥೆಯನ್ನು ಜನರಿಗೆ ದಾಟಿಸುವ ಮಾಧ್ಯಮ. ಆಶಯ ಮೊದಲು ಮನಸ್ಸಿಗೆ ಬಂದು ಆಮೇಲೆ ಕಥೆ ಹೆಣೆಯುತ್ತೇನೆ. ಆದರೆ ಸಿನಿಮಾದಲ್ಲಿ ಸಂದೇಶ ನೀಡುವುದು ಅನ್ನೋದರ ಬಗ್ಗೆ ಎಲ್ಲ ನನಗೆ ಒಲವಿಲ್ಲ. ಕೆಲವೊಂದು ಸೂಕ್ಷ್ಮಗಳನ್ನು ದಾಟಿಸುವ ಕೆಲಸವನ್ನಂತೂ ಸಿನಿಮಾ ಮಾಡಬೇಕು ಎಂಬುದು ನನ್ನ ನಂಬಿಕೆ. - ಯಾವ ಊರಲ್ಲಿ ಶೂಟಿಂಗ್‌ ಮಾಡಿದ್ರಿ? ಹೇಗಿತ್ತು ಆ ಅನುಭವ?ಶೂಟಿಂಗ್‌ ನಡೆದದ್ದು ನನ್ನೂರು ಚಾಮರಾಜನಗರದ ಸಮೀಪ. ಅದು ನನ್ನ ಊರಾದ ಕಾರಣ ಸ್ವಾತಂತ್ರ್ಯ ಹೆಚ್ಚಿತ್ತು. ರಾತ್ರಿ ಹೊತ್ತು ಲೈಟ್‌ ಆಫ್‌ ಮಾಡಿ ಅಂದರೆ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ಬರುವ ಅರಳಿಕಟ್ಟೆ ನಮ್ಮ ಸಿನಿಮಾಕ್ಕಾಗಿಯೇ ಕಟ್ಟಿಸಿದ್ದು. ಈ ಸಿನಿಮಾವನ್ನು ಆ ಅರಳಿಕಟ್ಟೆಯಲ್ಲೇ ನಮ್ಮ ಊರವರಿಗೆಲ್ಲ ತೋರಿಸಬೇಕು ಎಂಬ ಇಂಗಿತವೂ ಇದೆ. ಮಂಡ್ಯ ಭಾಷೆಯನ್ನೇ ಸಿನಿಮಾಕ್ಕೆ ಬಳಸಿದ್ದೇವೆ. - ಇಡೀ ಊರಿಗೇ ಲೈಟ್‌ ಆಫ್‌ ಮಾಡಿಸಿದ್ರಾ?

ಹೌದು. ದೂರದಲ್ಲಿ ಒಂದು ಲೈಟ್‌ ಹಾಕಿದ್ರೂ ಫ್ರೇಮ್‌ನಲ್ಲಿ ಬರುತ್ತಿತ್ತು. ಊರಿನವರಿಗೆ ಗೊಂದಲ. ಎಲ್ಲರೂ ಲೈಟ್‌ ಹಾಕಿ ಶೂಟ್‌ ಮಾಡಿದರೆ ಇವರು ಲೈಫ್‌ ಆಫ್‌ ಮಾಡಿಸಿ ಚಿತ್ರೀಕರಿಸುತ್ತಿದ್ದಾರಲ್ಲಾ ಅಂತ.

- ಬಿ ಜಯಶ್ರೀ ಅವರು ಮಾಡಿದ ಸೂಲಗಿತ್ತಿ ಶಾರದಮ್ಮ ಪಾತ್ರದ ಹಿನ್ನೆಲೆ?ಈ ಪಾತ್ರಕ್ಕೆ ಹದಿನೈದು ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಸೂಲಗಿತ್ತಿ ಪದ್ಮಶ್ರೀ ನರಸಮ್ಮ ಅವರೇ ಸ್ಫೂರ್ತಿ. ಅಕ್ಕರೆ ಚಿಮ್ಮುವಂಥಾ ಅವರ ಫೋಟೋ ನೋಡುತ್ತಿದ್ದಾಗ ಈ ಪಾತ್ರ ಹೊಳೆಯಿತು. - ತ್ರಿಗುಣ್‌ ಇನ್‌ವಾಲ್ವ್‌ಮೆಂಟ್‌ ಹೇಗಿತ್ತು?ಅವರ ಮುಂದೆ ಮೂರು ಕಥೆ ಇಟ್ಟಿದೆ. ಅವರೇ ಆರಿಸಿದ ಕಥೆ ಇದು. ಯಾವ ಹೀರೋಯಿಸಂ ಇಲ್ಲದ ನಾರ್ಮಲ್‌ ಹುಡುಗನ ಪಾತ್ರವನ್ನು ಅವರು ಲೀಲಾಜಾಲವಾಗಿ ನಿಭಾಯಿಸಿದ ರೀತಿ ನಮಗೇ ಅಚ್ಚರಿ ತರಿಸಿತ್ತು. ಇಡೀ ಸ್ಕ್ರಿಪ್ಟ್‌ ಅನ್ನು ಇಂಗ್ಲಿಷ್‌ನಲ್ಲಿ ಬರೆಸಿ ತಮ್ಮದಲ್ಲದ ಭಾಷೆಯ ಅಷ್ಟೂ ಡೈಲಾಗ್‌ಗಳನ್ನೂ ಸಲೀಸಾಗಿ ಹೇಳುತ್ತಿದ್ದರು. ಇದೀಗ ಅವರು ಕನ್ನಡ ಕಲಿಯುತ್ತಿದ್ದಾರೆ.