ಮಾಧ್ಯಮ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಜನಪ್ರಿಯ ನಿರೂಪಕ ಹಾಗೂ ಜನಪರ ಪತ್ರಕರ್ತರೆನಿಸಿಕೊಂಡಿರುವ ಜಯಪ್ರಕಾಶ್‌ ಶೆಟ್ಟಿ ಅವರು ಮೊದಲ ಬಾರಿಗೆ ತುಳು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ತಮ್ಮ ಪಾತ್ರದ ಶೂಟಿಂಗ್‌ ಮುಗಿಸಿಕೊಂಡು ಬಂದಿದ್ದಾರೆ

ಮಾಧ್ಯಮ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಜನಪ್ರಿಯ ನಿರೂಪಕ ಹಾಗೂ ಜನಪರ ಪತ್ರಕರ್ತರೆನಿಸಿಕೊಂಡಿರುವ ಜಯಪ್ರಕಾಶ್‌ ಶೆಟ್ಟಿ ಅವರು ಮೊದಲ ಬಾರಿಗೆ ತುಳು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ತಮ್ಮ ಪಾತ್ರದ ಶೂಟಿಂಗ್‌ ಮುಗಿಸಿಕೊಂಡು ಬಂದಿದ್ದಾರೆ. ಅಂದಹಾಗೆ ಚಿತ್ರದ ಹೆಸರು ‘ಬನ’ ಎಂಬುದು. ‘ಧರ್ಮ ದೈವ’ ಹಾಗೂ ‘ಚಾವಡಿ’ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿರುವ ನಿತಿನ್‌ ರೈ ಕುಕ್ಕುವಳ್ಳಿ ಅವರ ಮೂರನೇ ನಿರ್ದೇಶನದ ಚಿತ್ರವೇ ಈ ‘ಬನ’.

ನಾಗದೇವರ ವಾಸ ಸ್ಥಾನಕ್ಕೆ ‘ಬನ’ ಎಂದು ಕರೆಯುತ್ತಾರೆ

ನಾಗದೇವರ ವಾಸ ಸ್ಥಾನಕ್ಕೆ ‘ಬನ’ ಎಂದು ಕರೆಯುತ್ತಾರೆ. ನಾಗಸ್ಥಾನದ ಹೆಸರಿನ ಈ ಚಿತ್ರದಲ್ಲಿ ಅತ್ಯಂತ ಕುತೂಹಲ ಮೂಡಿಸುವ ಕತೆ ಇದೆ. ಇಂಥ ಕತೆಯಲ್ಲಿ ಜಯಪ್ರಕಾಶ್‌ ಶೆಟ್ಟಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕತೆಗೆ ತಿರುವು ಕೊಡುವಂತಹ ಪಾತ್ರ ಅವರದ್ದು ಎಂಬುದು ವಿಶೇಷ. ಹಾಗೆ ನೋಡಿದರೆ ಜಯಪ್ರಕಾಶ್‌ ಶೆಟ್ಟಿ ಅವರು ಈ ಹಿಂದೆ ಜಗ್ಗೇಶ್‌ ಅವರ ಜೊತೆಗೆ ‘ಸಾಫ್ಟ್‌ವೇರ್‌ ಗಂಡ’ ಚಿತ್ರ, ‘ನಿರ್ಭಯ’ ಹೆಸರಿನ ಧಾರಾವಾಹಿಯಲ್ಲೂ ನಟಿಸಿದ್ದರು.

ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಜಯಪ್ರಕಾಶ್ ಶೆಟ್ಟಿ

ಮಾಧ್ಯಮ ಕ್ಷೇತ್ರಕ್ಕೆ ಬರುವ ಮುನ್ನವೇ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಜಯಪ್ರಕಾಶ್ ಶೆಟ್ಟಿ ನಾಟಕ, ನಟನೆ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದವರು. ಜನಪರ ಕಾಳಜಿಯೊಂದಿಗೆ ಮಾಧ್ಯಮ ಕ್ಷೇತ್ರಕ್ಕೆ ಬಂದ ಜಯಪ್ರಕಾಶ್‌ ಶೆಟ್ಟಿ ‘ಬಿಗ್‌ 3’, ‘ಕಟ್ಟೆಚ್ಚರ’, ‘ಬ್ರೆಕ್‌ ಫಾಸ್ಟ್‌ ನ್ಯೂಸ್‌’, ‘ಸಾಲ ಮನ್ನಾ ಆನ್‌ ಸ್ಪಾಟ್‌’, ‘ದೊಡ್ಡವರ ಅಖಾಡ’, ‘ಸೂಪರ್‌ 3’ ಮುಂತಾದ ಕಾರ್ಯಕ್ರಮಗಳ ಮೂಲಕ ಹತ್ತಾರು ಜನರಿಗೆ ನೆರವಾಗುವ ಜೊತೆಗೆ ಹಲವು ಜನಪರ ಕೆಲಸಗಳ ಜಾರಿಗೆ ಕಾರಣರಾದವರು.

ಅಭಿನಯದ ಕ್ಷೇತ್ರದಿಂದ ಮಾಧ್ಯಮಕ್ಕೆ ಬಂದಿದ್ದರಿಂದ ತಮ್ಮ ವಿಭಿನ್ನವಾದ ನಟನೆ, ಸುದ್ದಿ ಹೇಳುವ ಶೈಲಿಯಿಂದ ಮನೆ ಮಾತಾಗಿದ್ದವರು ಜಯಪ್ರಕಾಶ್‌ ಶೆಟ್ಟಿ, ‘ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ನನಗೆ ಮೊದಲಿನಿಂದಲೂ ಇದ್ದ ತುಡಿತ. ಈಗ ‘ಬನ’ ಚಿತ್ರದ ಮೂಲಕ ದೊಡ್ಡದಾಗಿ ಆರಂಭ ಸಿಕ್ಕಿದೆ. ಮಹತ್ವದ ಪಾತ್ರಗಳಲ್ಲಿ ನಟಿಸುವ ಆಸೆ ಮತ್ತಷ್ಟು ಬಲವಾಗಿದೆ’ ಎನ್ನುತ್ತಾರೆ.