ಸುಮಾರು ₹6.5 ಕೋಟಿ ಮೌಲ್ಯದ ಅತ್ಯಾಧುನಿಕ ಐಷಾರಾಮಿ ಕ್ಯಾರವಾನ್‌ ಖರೀದಿಸುವ ಮೂಲಕ ದುಬಾರಿ ಕ್ಯಾರವಾನ್‌ ಹೊಂದಿರುವ ದಕ್ಷಿಣ ಭಾರತೀಯ ಚಿತ್ರರಂಗದ ನಾಲ್ಕನೇ ನಟ ಎನ್ನುವ ಹೆಗ್ಗಳಿಕೆಗೆ ಕನ್ನಡದ ಕಿಚ್ಚ ಸುದೀಪ್‌ ಪಾತ್ರ

ಬೆಂಗಳೂರು : ಸುಮಾರು ₹6.5 ಕೋಟಿ ಮೌಲ್ಯದ ಅತ್ಯಾಧುನಿಕ ಐಷಾರಾಮಿ ಕ್ಯಾರವಾನ್‌ ಖರೀದಿಸುವ ಮೂಲಕ ದುಬಾರಿ ಕ್ಯಾರವಾನ್‌ ಹೊಂದಿರುವ ದಕ್ಷಿಣ ಭಾರತೀಯ ಚಿತ್ರರಂಗದ ನಾಲ್ಕನೇ ನಟ ಎನ್ನುವ ಹೆಗ್ಗಳಿಕೆಗೆ ಕನ್ನಡದ ಕಿಚ್ಚ ಸುದೀಪ್‌ ಪಾತ್ರರಾಗಿದ್ದಾರೆ.

ಸುದೀಪ್‌ ಅವರು ವೈಯಕ್ತಿಕವಾಗಿ ಖರೀದಿ ಮಾಡಿರುವ ಈ ಲಕ್ಷುರಿ ಕ್ಯಾರವಾನ್‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಕಿಚ್ಚ ಸುದೀಪ್‌ ಅವರು ತಮಗಾಗಿಯೇ ಪ್ರತ್ಯೇಕವಾಗಿ ಈ ಐಷಾರಾಮಿ ಕ್ಯಾರವಾನ್‌ ಸಿದ್ಧಪಡಿಸಿದ್ದು, ಖ್ಯಾತ ಡಿಸೈನರ್‌ ದಿಲೀಪ್‌ ಛಾಬ್ರಿಯಾ ಅವರು ಕ್ರಿಯೇಟ್‌ ಮಾಡಿರುವ ‘ಡಿಸಿ2’ ಸಂಸ್ಥೆಯ ಜಿಮ್ ಮಾಡ್ಯುಲರ್ ಕ್ಯಾರವಾನ್ ಇದಾಗಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ಈ ಕ್ಯಾರವಾನ್‌ ಸಿದ್ಧ

ಮಹಾರಾಷ್ಟ್ರದ ಪುಣೆಯಲ್ಲಿ ಈ ಕ್ಯಾರವಾನ್‌ ಸಿದ್ಧ ಆಗಿದ್ದು, ಸುದೀಪ್‌ ಅವರ ಇಷ್ಟಕ್ಕೆ ತಕ್ಕಂತೆ ಇದನ್ನು ಕಸ್ಟಮೈಸ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಟ ಸುದೀಪ್ ಅವರ ಹೆಸರನ್ನು ಸೂಚಿಸುವ ‘K’ (ಕಿಚ್ಚ) ಎಂಬ ಸಿಂಬಲ್ ಅನ್ನು ಕ್ಯಾರವಾನ್‌ ಮೇಲೆ ವಿನ್ಯಾಸ ಮಾಡಲಾಗಿದೆ. ಇದೇ ರೀತಿಯ ಸಿಂಬಲ್‌ ಅನ್ನು ತಮ್ಮ ಕಾರಿನ ಮೇಲೂ ಸುದೀಪ್‌ ಅವರು ವಿನ್ಯಾಸ ಮಾಡಿಸಿಕೊಂಡಿದ್ದಾರೆ.

ವೋಲ್ವೋ ಕ್ಯಾರವಾನ್‌ ಎಂದು ಕರೆಯಲ್ಪಡುವ ಈ ವಿಶೇಷ ಕ್ಯಾರವಾನ್‌, ವೋಲ್ವೋ ಬಸ್ಸಿನಲ್ಲಿರುವ ಎಲ್ಲಾ ಲಕ್ಸುರಿ ಸೌಲಭ್ಯಗಳ‍ನ್ನೂ ಒಳಗೊಂಡಿದೆ. ಕಿಚನ್‌, ಲಿವಿಂಗ್‌ ರೂಮು, ಪ್ರತ್ಯೇಕ ಕೋಣೆ ಸೇರಿ ಸಾಕಷ್ಟು ಸೌಲಭ್ಯಗಳನ್ನು ಈ ಕ್ಯಾರವಾನ್‌ ಒಳಗೊಂಡಿದ್ದು, ವಿನ್ಯಾಸದ ಅಂತಿಮ ಕೆಲಸಗಳು ನಡೆಯುತ್ತಿವೆ. ಹೀಗಾಗಿ ವಿನ್ಯಾಸದ ಕೆಲಸಗಳು ಪೂರ್ಣಗೊಂಡ ಮೇಲೆ ಕ್ಯಾರವಾನ್‌ ಒಳಗೊಂಡಿರುವ ಸೌಲಭ್ಯಗಳು ತಿಳಿದು ಬರಲಿದೆ.

ವೈರಲ್‌ ಆದ ಲಕ್ಷುರಿ ಕ್ಯಾರವಾನ್‌:

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುವ ಈ ಲಕ್ಷುರಿ ಕ್ಯಾರವಾನ್‌ ಸುದೀಪ್‌ ಅವರ ಕೈ ಸೇರುವುದು ಒಂದು ವಾರದ ನಂತರ ಎನ್ನಲಾಗುತ್ತಿದೆ. ವರ್ಷದ ಹಿಂದೆಯೇ ತಮಗೊಂದು ಲಕ್ಷುರಿ ಕ್ಯಾರವಾನ್‌ ಬೇಕೆಂದು ಸುದೀಪ್‌ ಅವರು ಯೋಚಿಸಿದ್ದರು. ಕಿಚ್ಚನ ಯೋಚನೆಗೆ ತಕ್ಕಂತೆ ಈಗ ಮಹಾರಾಷ್ಟ್ರದ ಮೂಲಸದ ಸಂಸ್ಥೆ ಕಸ್ಟಮೈಸ್‌ ಮಾಡಿಕೊಡುತ್ತಿದೆ.

ಇನ್ನು ಈ ರೀತಿಯ ದುಬಾರಿ ಕ್ಯಾರವಾನ್‌ ಅನ್ನು ನಟರಾದ ಪ್ರಭಾಸ್‌, ಅಲ್ಲು ಅರ್ಜುನ್‌, ರಾಮ್‌ ಚರಣ್‌ ತೇಜಾ ಈಗಾಗಲೇ ಹೊಂದಿದ್ದಾರೆ. ಇಂಥ ದುಬಾರಿ ಕ್ಯಾರವಾನ್‌ ಹೊಂದಿರುವ ದಕ್ಷಿಣ ಭಾರತ ಪ್ಯಾನ್‌ ಇಂಡಿಯಾ ನಟರ ಸಾಲಿಗೆ ಈಗ ಸ್ಯಾಂಡಲ್‌ವುಡ್‌ನ ಸುದೀಪ್‌ ಕೂಡ ಸೇರಿಕೊಳ್ಳುತ್ತಿದ್ದಾರೆ.