ಸಾರಾಂಶ
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮಗಳು ವಿಸ್ಮಯ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ತುಡಕ್ಕಮ್’ ಅವರ ನಟನೆಯ ಮೊದಲ ಚಿತ್ರವಾಗಿದ್ದು, ಈ ಸಿನಿಮಾವನ್ನು ಘೋಷಣೆ ಮಾಡಿರುವ ಮೋಹನ್‌ಲಾಲ್ ಮಗಳ ಸಿನಿಮಾ ಬದುಕು ಚೆನ್ನಾಗಿರಲಿ ಅಂತ ಶುಭ ಹಾರೈಸಿದ್ದಾರೆ.
ಸಿನಿವಾರ್ತೆ
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮಗಳು ವಿಸ್ಮಯ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ತುಡಕ್ಕಮ್’ ಅವರ ನಟನೆಯ ಮೊದಲ ಚಿತ್ರವಾಗಿದ್ದು, ಈ ಸಿನಿಮಾವನ್ನು ಘೋಷಣೆ ಮಾಡಿರುವ ಮೋಹನ್‌ಲಾಲ್ ಮಗಳ ಸಿನಿಮಾ ಬದುಕು ಚೆನ್ನಾಗಿರಲಿ ಅಂತ ಶುಭ ಹಾರೈಸಿದ್ದಾರೆ.
‘ಪ್ರೀತಿಯ ಮಗಳೇ, ಜೀವನ ಪರ್ಯಂತ ಪ್ರೇಮದಲ್ಲಿ ಬೀಳಬೇಕಿರುವ ಸಿನಿಮಾ ಜಗತ್ತಿಗೆ ತುಡಕ್ಕಮ್ ಸಿನಿಮಾ ಮೊದಲ ಹೆಜ್ಜೆಯಾಗಲಿ’ ಎಂದು ಮೋಹನ್‌ಲಾಲ್ ಹೇಳಿದ್ದಾರೆ. ಜೇಡ್ ಆ್ಯಂಟನಿ ಜೋಸೆಫ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ವಿಸ್ಮಯ ಈ ಹಿಂದೆ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಮೋಹನ್‌ಲಾಲ್ ಪುತ್ರ ಪ್ರಣವ್ ಈಗಾಗಲೇ ಮಲಯಾಳಂನ ಪ್ರಮುಖ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ಕೋಮಲ್ ನಟನೆಯ ಹೊಸ ಚಿತ್ರ ಸಂಗೀತ ಬಾರ್ ಆಂಡ್ ರೆಸ್ಟೋರೆಂಟ್
ಕೋಮಲ್ ಹೊಸ ಚಿತ್ರ ಘೋಷಣೆಯಾಗಿದೆ. ಈ ಚಿತ್ರದ ಹೆಸರು ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’. ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಚಿತ್ರವಿದು. ವಿಕಾಸ್ ಎಸ್. ಶೆಟ್ಟಿ ನಿರ್ಮಾಪಕರು. ಅನುಷಾ ರೈ ನಾಯಕಿ. ನಟಿ ಮೇಘನಾ ರಾಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೋಮಲ್, ‘ಎರಡು ಕಾಲಘಟ್ಟದಲ್ಲಿ ಕತೆ ಸಾಗುತ್ತದೆ. ಎಂದಿನಂತೆ ನನ್ನ ಸಿಗ್ನೇಚರ್ ಕಾಮಿಡಿ ಇದ್ದೇ ಇರುತ್ತದೆ. ಇದರ ಜತೆಗೆ ಒಂದಿಷ್ಟು ಸೂಕ್ಷ್ಮ ವಿಚಾರಗಳನ್ನು ಚಿತ್ರದಲ್ಲಿ ಹೇಳಿದ್ದಾರೆ. ಬೇರೆ ಬೇರೆ ರೀತಿಯ ಗೆಟಪ್‌ಗಳಿವೆ’ ಎಂದರು. ಎಂ.ಕೆ.ಮಠ, ಪ್ರಕಾಶ್ ತುಮಿನಾಡು, ವರ್ಧನ್ ತೀರ್ಥಹಳ್ಳಿ, ಸಿರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು ಚಿತ್ರದ ಟ್ರೇಲರ್ ಬಿಡುಗಡೆ
‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಚಿತ್ರದ ಹಾಡು ಮತ್ತು ಟ್ರೇಲರ್ ಬಿಡುಗಡೆ ಆಗಿದೆ. ಬೆಳಗಾವಿ ಮೂಲದ ಉದ್ಯಮಿ ಗಿರೀಶ ಪ್ರಕಾಶ ಭಸ್ಮೇ ನಾಯಕನಾಗಿ ನಟಿಸುವ ಜತೆಗೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಕೆ ಮೋಹನ್ ಕುಮಾರ್ ನಿರ್ದೇಶಿಸಿದ್ದಾರೆ. ಪಾವನಿ ಚಿತ್ರದ ನಾಯಕಿ.
ಗಿರೀಶ್ ಪ್ರಕಾಶ ಭಸ್ಮೇ, ‘ನಾನು ಹೆಚ್2ಓ, ಶ್ರೀರಾಂಪುರ ಪೋಲೀಸ್ ಸ್ಟೇಷನ್ ಮುಂತಾದ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದೆ. ಈಗ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದೇನೆ’ ಎಂದರು.
ತಾಯವ್ವ ಚಿತ್ರಕ್ಕೆ 25 ದಿನಗಳ ಸಂಭ್ರಮ
ಸೂಲಗಿತ್ತಿಯ ಕತೆಯನ್ನು ಹೇಳುವ ‘ತಾಯವ್ವ’ ಚಿತ್ರದ 25 ದಿನಗಳ ಸಂಭ್ರಮಚರಣೆ ನಡೆದಿದೆ. ಗೀತಪ್ರಿಯ ನಿರ್ಮಿಸಿ, ನಟಿಸಿರುವ ಈ ಚಿತ್ರವನ್ನು ಸಾತ್ವಿಕ ಪವನ್ ಕುಮಾರ್ ನಿರ್ದೇಶಿಸಿದ್ದಾರೆ. ಸಂಭ್ರಮಾಚರಣೆಯಲ್ಲಿ ಸುರೇಶ್ ಹೆಬ್ಳೀಕರ್, ಲಹರಿ ವೇಲು, ಯೋಗರಾಜ್ ಭಟ್, ಸಿಲ್ಕ್ ಮಂಜು, ಸಿಂಧೂ ಲೋಕನಾಥ್ ಭಾಗವಹಿಸಿದ್ದರು.
ಗೀತಪ್ರಿಯಾ, ‘ಸೂಲಗಿತ್ತಿಯೊಬ್ಬಳ ಬದುಕಿನ ಈ ಕತೆಗೆ ಮೆಚ್ಚುಗೆ ದೊರಕಿದ್ದು, ನನಗೆ ಸಾರ್ಥಕ ಭಾವ ಹುಟ್ಟಿಸಿದೆ. ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಬೆಳೆಸಿ ಎನ್ನುವ ಸಂದೇಶವೇ ಚಿತ್ರದ ಗಟ್ಟಿತನ’ ಎಂದರು.
ದೂರ ತೀರ ಯಾನ ಚಿತ್ರದ ಟ್ರೇಲರ್ ಬಿಡುಗಡೆ
ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಪ್ರಯಾಣದಲ್ಲಿ ಜೊತೆಯಾಗುವ ಪಾತ್ರಧಾರಿಗಳ ಮೂಲಕ ಆಪ್ತವಾದ ಕತೆ ಹೇಳಿರುವ ಚಿತ್ರ ಇದಾಗಿದ್ದು, ಎಂಆರ್‌ಟಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಟ್ರೇಲರ್ ನೋಡಬಹುದು. ವಿಜಯ್ ಕೃಷ್ಣ, ಪ್ರಿಯಾಂಕ ಕುಮಾರ್ ಜೋಡಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಶ್ರುತಿ ಹರಿಹರನ್ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್ ಆರ್ ನಿರ್ಮಿಸಿರುವ ಈ ಚಿತ್ರಕ್ಕೆ ಚೇತನಾ ತೀರ್ಥಹಳ್ಳಿ, ಕೃಷ್ಣ ಹೆಬ್ಬಾಳೆ ಸಹ ಬರಹಗಾರರಾಗಿ ಕೆಲಸ ಮಾಡಿದ್ದಾರೆ.