ಸಾರಾಂಶ
ಜಬಲ್‌ಪುರ
ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿರುವ ಕೆಲವೊಂದು ಪ್ರಸಿದ್ಧ ಸ್ಮಾರಕಗಳು ತನಗೆ ಸೇರಿದವು ಎಂದು ರಾಜ್ಯದ ವಕ್ಫ್ ಮಂಡಳಿ 11 ವರ್ಷಗಳ ಹಿಂದೆ ಹೊರಡಿಸಿದ್ದ ಆದೇಶವನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದೆ. ಆ ಸ್ಥಳಗಳಿಂದ ಜಾಗ ಖಾಲಿ ಮಾಡುವಂತೆ ತಾಕೀತು ಮಾಡಿದೆ.
ಪ್ರಕರಣದ ವಿಚಾರಣೆ ವೇಳೆ ವಕ್ಫ್ ಮಂಡಳಿಯ ವಕೀಲರ ವಿರುದ್ಧ ಹರಿಹಾಯ್ದ ನ್ಯಾಯಪೀಠ, ‘ತಾಜ್ ಮಹಲ್, ಕೆಂಪುಕೋಟೆಯನ್ನೂ ವಕ್ಫ್ ಆಸ್ತಿ ಎಂದು ಘೋಷಿಸಬಿಡಿ. ನಿಮಗೆ ಮನಸ್ಸಿಗೆ ಬಂದಾಗ ಯಾವುದೇ ಆಸ್ತಿಯನ್ನು ನಮ್ಮದೆಂದು ಘೋಷಿಸಿ ಬಿಡುತ್ತೀರಿ. ನಾಳೆ ನೀವು ಇಡೀ ದೇಶ ವಕ್ಫ್ ಆಸ್ತಿ ಎನ್ನುತ್ತೀರಿ. ಆಗ ಏನು ಮಾಡುವುದು? ನೀವು ಘೋಷಣೆ ಮಾಡಿಬಿಡುತ್ತೀರಿ, ಅಷ್ಟಕ್ಕೆ ಆಸ್ತಿ ನಿಮ್ಮದು. ಹೀಗೆಲ್ಲಾ ಮಾಡಲು ಬಿಡಲಾಗದು’ ಎಂದು ಕಿಡಿಕಾರಿತು.
ಏನಿದು ಪ್ರಕರಣ?:
ಬುರ್ಹಾನ್‌ಪುರ ಕೋಟೆಯೊಳಗೆ ಇರುವ ಅರಮನೆ, ಶಾ ಶುಜಾ, ನಾಡಿರ್ ಶಾ ಅವರ ಗೋರಿ ಹಾಗೂ ಬೀಬಿ ಸಾಹೀಬ್ ಮಸೀದಿ ತನಗೆ ಸೇರಿದ್ದು ಎಂದು 2013ರ ಜುಲೈ 19ರಂದು ಮಧ್ಯಪ್ರದೇಶ ವಕ್ಫ್ ಮಂಡಳಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಈ ಸ್ಮಾರಕಗಳು ಕೇಂದ್ರ ಸರ್ಕಾರದ ಆಸ್ತಿಯಾಗಿವೆ. 1904ರ ಪುರಾತನ ಸ್ಮಾರಕ ಸಂರಕ್ಷಣಾ ಕಾಯ್ದೆಯಡಿ ಇವನ್ನು ತಾನು ಸಂರಕ್ಷಣೆ ಮಾಡುತ್ತಿರುವುದಾಗಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಾದಿಸಿತ್ತು. ಈ ವಾದಕ್ಕೆ ಮನ್ನಣೆ ನೀಡಿರುವ ಹೈಕೋರ್ಟ್‌ನ ನ್ಯಾ। ಜಿ.ಎಸ್. ಅಹ್ಲುವಾಲಿಯಾ ನೇತೃತ್ವದ ಏಕಸದಸ್ಯ ಪೀಠ, ವಕ್ಫ್ ಮಂಡಳಿ ಆದೇಶವನ್ನು ರದ್ದುಗೊಳಿಸಿದೆ.