ಸಾರಾಂಶ
ಕನ್ನಡಪ್ರಭ ಸಿನಿವಾರ್ತೆ
ಕನ್ನಡಕ್ಕೆ ಹೊಸ ಖಳನಾಯಕ ಸಿಕ್ಕಾದ್ದಾರೆ. ಕಟ್ಟುಮಸ್ತಾದ, ಆಳೆತ್ತರದ ಈ ಕಟೌಟ್ ಹೆಸರು ಬಚ್ಚನ್. ಕನ್ನಡದಿಂದ ಬಾಲಿವುಡ್‌ಗೆ ಹೋಗಿ, ಅಲ್ಲಿಂದ ಮತ್ತೆ ಕನ್ನಡಕ್ಕೇ ಬಂದಿರುವ ಬಚ್ಚನ್, ಬಹುಭಾಷೆಯ ಖಳನಾಯಕ. ಕನ್ನಡದಲ್ಲಿ ಸಿನಿಮಾ, ಧಾರಾವಾಹಿ, ಹಿಂದಿ ಹಾಗೂ ಮರಾಠಿ ಚಿತ್ರಗಳಲ್ಲಿ ನಟಿಸುತ್ತಿರುವ ಇವರಿಗೆ ಕಳೆದ ವಾರ ಬಿಡುಗಡೆ ಆದ ಯುವರಾಜ್‌ಕುಮಾರ್ ನಟನೆಯ ‘ಯುವ’ ಚಿತ್ರದಲ್ಲಿನ ಇವರ ಪಾತ್ರಕ್ಕೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ.‘ಯುವ ಚಿತ್ರದಲ್ಲಿ ನಾನು ಬುಕ್ಕಿ ಪಾತ್ರ ಮಾಡಿದ್ದೇನೆ. ನನ್ನಿಂದಲೇ ಚಿತ್ರದ ನಾಯಕ ಬಾಕ್ಸಿಂಗ್‌ನಿಂದ ದೂರ ಆಗುತ್ತಾರೆ. ಈ ಪಾತ್ರದಲ್ಲಿ ನನ್ನ ನೋಡಿ ತುಂಬಾ ಜನ ನಾನು ಉತ್ತರ ಭಾರತದವನು ಎಂದುಕೊಂಡಿದ್ದಾರೆ. ನಾನು ಪಕ್ಕಾ ಕನ್ನಡಿಗ. ಹಿಂದಿಗೆ ಹೋಗುವ ಮುನ್ನ ಕನ್ನಡದಲ್ಲಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. ಆ ಮೇಲೆ ಹಿರಿತೆರೆಗೂ ಬಂದೆ. ಈಗ ಯುವ ಚಿತ್ರದಲ್ಲಿ ನಾನು ಮಾಡಿರುವ ಬುಕ್ಕಿ ಪಾತ್ರ ನನ್ನ ವೃತ್ತಿ ಪಯಣಕ್ಕೊಂದು ಹೊಸ ತಿರುವು ಕೊಟ್ಟಿದೆ. ಯಾಕೆಂದರೆ ಈ ಸಿನಿಮಾ ನಂತರ ನನಗೆ ಎರಡ್ಮೂರು ಚಿತ್ರಗಳು ಸಿಕ್ಕಿವೆ’ ಎನ್ನುತ್ತಾರೆ ಬಚ್ಚನ್.
ಮೈಸೂರಿನ ಎಚ್ ಡಿ ಕೋಟೆ ಮೂಲದವರಾದ ಬಚ್ಚನ್, ಚಿತ್ರರಂಗಕ್ಕೆ ಬಂದಿದ್ದು ನಿರ್ಮಾಪಕರಾಗಲು. ಆದರೆ, ಇವರ ಎತ್ತರ ಮತ್ತು ಮ್ಯಾನರಿಸಂನಿಂದ ಮೊದಲು ಕಿರುತೆರೆಯಲ್ಲಿ ನಟಿಸುವ ಅಕಾಶಗಳು ಬಂದವು. ‘ಮುಕ್ತ ಮುಕ್ತ’, ‘ರಂಗೋಲಿ’, ‘ರಥಸಪ್ತಮಿ’, ‘ನಮ್ಮ ಲಚ್ಚಿ’, ‘ಜೋಗುಳ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಹುತೇಕ ಖಳನಾಯಕನಾಗಿಯೇ ಕಾಣಿಸಿಕೊಂಡ ಬಚ್ಚನ್, ‘ಜೋಗಯ್ಯ’ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡುವ ಮೂಲಕ ಹಿರಿತೆರೆಗೂ ಬಂದವರು. ಮುಂದೆ ‘ಬ್ರಹ್ಮ’, ‘ಪಾಪ್ ಕಾರ್ನ್ ಮಂಕಿ ಟೈಗರ್’, ‘ಕಾಟೇರ’, ‘ಒಂದು ಸರಳ ಪ್ರೇಮ ಕತೆ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಸದ್ಯಕ್ಕೆ ಈಗ ಹೊಸದಾಗಿ ರವಿಚಂದ್ರನ್ ಅವರ ಜತೆಗೆ ‘ಜಡ್ಜ್‌ಮೆಂಟ್’ ಚಿತ್ರಕ್ಕೆ ಮುಖ್ಯ ವಿಲನ್ ಆಗಿದ್ದಾರೆ. ಹಿಂದಿಯಲ್ಲಿ ವರುಣ್ ಧವನ್ ಜತೆಗೆ ‘ಭೇಡಿಯಾ 2’, ಮರಾಠಿಯಲ್ಲಿ ‘ಸುದಾಗಡ್ 07’ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ ಮೇಲೆ ಈಗಷ್ಟೆ ‘ಬಿಹು ಅಟ್ಯಾಕ್’ ಚಿತ್ರಕ್ಕೆ ವಿಲನ್ ಆಗಿದ್ದಾರೆ. ‘ನಾನು ಮಾತನಾಡುವ ಶೈಲಿ, ನನ್ನ ಬಾಡಿ ಲಾಗ್ವೇಜ್ ಹಾಗೂ ನನ್ನ ಔಟ್ ಲುಕ್ ಕಾರಣಕ್ಕೆ ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ನನಗೆ ಅವಕಾಶಗಳು ಬರುತ್ತಿವೆ. ನಾನು ತೆರೆ ಮೇಲೆ ಖಳನಾಯಕನಾಗಿಯೇ ಗುರಿತಿಸಿಕೊಳ್ಳಬೇಕು’ ಎನ್ನುತ್ತಾರೆ ಬಚ್ಚನ್.