ಸಾರಾಂಶ
ನಟ ಪ್ರಕಾಶ್ ರೈ ಅವರ ನಿರ್ದಿಗಂತ ರಂಗಶಾಲೆಗೆ ಒಂದು ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಏನೆಲ್ಲ ನಡೆಯಿತು ಎಂಬುದು ಇಲ್ಲಿದೆ.
ಕನ್ನಡಪ್ರಭ ಸಿನಿವಾರ್ತೆ
ರಂಗಭೂಮಿಯ ಚುಟುವಟಿಕೆಗಳಿಗಾಗಿಯೇ ಮೀಸಲಾಗಿರುವ ಬಹುಭಾಷಾ ನಟ, ನಿರ್ದೇಶಕ, ನಿರ್ಮಾಪಕ ಪ್ರಕಾಶ್ ರೈ ಸಾರಥ್ಯದ ‘ನಿರ್ದಿಗಂತ’ಗೆ ಒಂದು ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ರಂಗಾಸಕ್ತರು, ವಿದ್ಯಾರ್ಥಿಗಳು, ಸಿನಿಮಾ ಕಲಾವಿದರು, ಆತ್ಮೀಯರನ್ನು ನಿರ್ದಿಗಂತಕ್ಕೆ ಆಹ್ವಾನಿಸಿ ವಾರ್ಷಿಕೋತ್ಸವ ಆಚರಿಸಿದ್ದಾರೆ ಪ್ರಕಾಶ್ ರೈ.ಪ್ರಕಾಶ್ ರೈ, ‘ಹಣ ತೆಗೆದುಕೊಂಡು ನಟನಾ ತರಬೇತಿ ಕೊಡುವ ಶಾಲೆ ಇದಲ್ಲ. ರಂಗಾಸ್ತಕರಿಗೆ ಕಾವುಗೂಡು. ಪ್ರತಿಭಾವಂತ ರಂಗ ಕಲಾವಿದರು ನಾಟಕ, ಕತೆ, ನಟನೆ ಜತೆಗೆ ವಿಸ್ತರಿಸಿಕೊಳ್ಳುವ ಹಾರಲು ಬೇಕಾದ ರೆಕ್ಕೆ ಕೊಟ್ಟು ಶಕ್ತಿ ತುಂಬುವ ಜಾಗ. ಒಂದು ವರ್ಷದಲ್ಲಿ 9 ನಾಟಕಗಳನ್ನು ಪ್ರಯೋಗ ಮಾಡಿದ್ದೇವೆ. ಹಲವು ಪ್ರತಿಭೆಗಳು ಇಲ್ಲಿ ದಾರಿ ಕಂಡುಕೊಂಡಿದ್ದಾರೆ. ನನ್ನ ಮೂಲ ಕೂಡ ರಂಗಭೂಮಿಯೇ. ಹೀಗಾಗಿ ರಂಗ ಕಲೆಗೆ ಏನಾದರೂ ಕೊಡಬೇಕು ಎನ್ನುವ ಆಲೋಚನೆಯಲ್ಲಿ ನನ್ನ ಸ್ವಂತ ಹಣದಲ್ಲಿ ಕೊಂಡ ಜಾಗದಲ್ಲಿ ನಿರ್ದಿಗಂತವನ್ನು ಆರಂಭಿಸಿದೆ. ಪ್ರಸ್ತುತ ಸಾಂಸ್ಕೃತಿಕ ಜಗತ್ತಿನಲ್ಲಿ ಸೃಜನಾತ್ಮಕವಾಗಿ ತೊಡಗಿಕೊಳ್ಳಬೇಕೆಂಬ ಯೋಚನೆಯಲ್ಲಿ ನಿರ್ದಿಗಂತ ಹುಟ್ಟಿಕೊಂಡಿದೆ. ರಂಗ ಚಟುವಟಿಕೆಗಳ ಜತೆಗೆ ಸಾಹಿತ್ಯ, ಚಿತ್ರಕಲೆ, ನೃತ್ಯ, ಶಿಲ್ಪ ಮೊದಲಾದ ಲಲಿತ ಕಲೆಗಳನ್ನೂ ಒಳಗೊಂಡ ಜಾಗವಿದು. ಕುವೆಂಪು ಕಾವ್ಯದ ಸಾಲುಗಳಲ್ಲಿ ರೂಪಕವಾಗಿ ಬರುವ ‘ನಿರ್ದಿಗಂತ’ ಪದವೇ ಈ ಜಾಗದ ಹೆಸರು’ ಎಂದರು.
ಶ್ರೀರಂಗಪಟ್ಟಣದ ಬಳಿಯ ಶೆಟ್ಟಿಹಳ್ಳಿಯ ಐದು ಎಕರೆ ಜಾಗದಲ್ಲಿ ಹುಟ್ಟಿಕೊಂಡಿರುವ ಈ ನಿರ್ದಿಗಂತ ಸಂಸ್ಥೆಯನ್ನು ರೂಪಿಸಲು ರಂಗ ನಿರ್ದೇಶಕ ಶ್ರೀಪಾದ್ ಭಟ್, ಶಾಲೋಮ್ ಸನ್ನುತ, ಮುನ್ನ ಮೈಸೂರು, ಸುಶ್ಮಿತಾ ಚೈತನ್ಯ, ಅನುಷ್ ಶೆಟ್ಟಿ, ಕೃಪಾಕರ ಸೇನಾನಿ ಮುಂತಾದವರು ಜತೆಗೆ ನಿಂತಿದ್ದಾರೆ. ಕಾರ್ಯಕ್ರಮದಲ್ಲಿ ಡಾ ವಿಜಯಮ್ಮ, ಕೆ ವೈ ನಾರಾಯಣಸ್ವಾಮಿ ನಿರ್ದಿಗಂತ ಸಂಸ್ಥೆಯ ಒಂದು ವರ್ಷದ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.