ಚಿತ್ರದ ಪ್ರಚಾರದಲ್ಲಿ ಭಾಗವಹಿಸುವುದು ಬಹಳ ಮುಖ್ಯ- ಸಿನಿಮಾ ವ್ಯಾಮೋಹಿ ನಟಿಯರ ಮಾತು

| N/A | Published : Jun 20 2025, 10:51 AM IST

Sanya Iyer
ಚಿತ್ರದ ಪ್ರಚಾರದಲ್ಲಿ ಭಾಗವಹಿಸುವುದು ಬಹಳ ಮುಖ್ಯ- ಸಿನಿಮಾ ವ್ಯಾಮೋಹಿ ನಟಿಯರ ಮಾತು
Share this Article
  • FB
  • TW
  • Linkdin
  • Email

ಸಾರಾಂಶ

ಒಂದೆಡೆ ರಚಿತಾರಾಮ್‌ ಸಿನಿಮಾ ಪ್ರಮೋಶನ್‌ನಲ್ಲಿ ಭಾಗಿಯಾಗಿಲ್ಲ, ನಮ್ಮ ನಟಿಯರಿಗೆ ನಕರಾ ಜಾಸ್ತಿ ಎಂಬ ಬಗೆಯ ಮಾತುಗಳು ಕೇಳಿಬರುತ್ತಿರುವಾಗ ಸಿನಿಮಾ ಪ್ರಚಾರದಲ್ಲಿ ಭಾಗವಹಿಸುವುದು ಎಷ್ಟು ಮುಖ್ಯ ಎಂಬ ಕುರಿತು ಕೆಲವು ನಟಿಯರು ಹೇಳಿದ್ದಾರೆ.

ಒಂದೆಡೆ ರಚಿತಾರಾಮ್‌ ಸಿನಿಮಾ ಪ್ರಮೋಶನ್‌ನಲ್ಲಿ ಭಾಗಿಯಾಗಿಲ್ಲ, ನಮ್ಮ ನಟಿಯರಿಗೆ ನಕರಾ ಜಾಸ್ತಿ ಎಂಬ ಬಗೆಯ ಮಾತುಗಳು ಕೇಳಿಬರುತ್ತಿರುವಾಗ ಸಿನಿಮಾ ಪ್ರಚಾರದಲ್ಲಿ ಭಾಗವಹಿಸುವುದು ಎಷ್ಟು ಮುಖ್ಯ ಎಂಬ ಕುರಿತು ಕೆಲವು ನಟಿಯರು ಹೇಳಿದ್ದಾರೆ.

ಸಿನಿಮಾ ಪ್ರಚಾರ ತಂಡದ ಪ್ರತಿಯೊಬ್ಬರ ಕರ್ತವ್ಯ

- ಬೃಂದಾ ಆಚಾರ್ಯ

ನನ್ನ ನಟನೆಯ ‘ಎಕ್ಸ್‌ ಆ್ಯಂಡ್‌ ವೈ’ ಸಿನಿಮಾ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಕೇವಲ ಬೆಂಗಳೂರು ಮಾತ್ರವಲ್ಲ ಬೇರೆ ಬೇರೆ ಜಿಲ್ಲಾಕೇಂದ್ರಗಳಲ್ಲೂ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಈ ಸಿನಿಮಾ ಅಂತಲ್ಲ, ನಾನು ಈವರೆಗೆ ನಟಿಸಿದ ಎಲ್ಲಾ ಚಿತ್ರಗಳಲ್ಲೂ ನನ್ನ ಪಾತ್ರದ ಕಾಸ್ಟ್ಯೂಮ್‌ ಸೆಟ್ ಮಾಡೋದ್ರಿಂದ ಕೊನೆಯವರೆಗೂ ಪ್ರತಿಹಂತದಲ್ಲೂ ಜೊತೆಗಿರುತ್ತೇನೆ.

ನಿರ್ಮಾಪಕರ ಜೊತೆಗೆ ಚಿತ್ರತಂಡದ ಪ್ರತಿಯೊಬ್ಬರೂ ನಿಲ್ಲಬೇಕು. ಸಿನಿಮಾದ ಕೆಲಸಗಳಿಂದ ಹಿಡಿದು ಪ್ರಚಾರ ರಿಲೀಸ್‌ವರೆಗೆ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸಲು ತಮ್ಮ ಶೇ.100ರಷ್ಟು ಶ್ರಮ ಹಾಕಬೇಕು. ನಿರ್ಮಾಪಕ ಗೆದ್ದರೆ ಇನ್ನೊಂದು ಸಿನಿಮಾ ಮಾಡಿದರೆ ಆಗ ಆ ಜನರಿಗೂ ಉದ್ಯೋಗ ಸಿಗುತ್ತದೆ. ಕನ್ನಡ ಸಿನಿಮಾಗಳು ಗೆಲ್ಲಬೇಕು, ತಲೆ ಎತ್ತಿ ನಿಲ್ಲಬೇಕು. ಚಿತ್ರರಂಗದ ಭಾಗವಾಗಿರುವ ನಾವೆಲ್ಲರೂ ಇದಕ್ಕೆ ಶ್ರಮಿಸಬೇಕು.

ನಖರಾ ಮಾಡಲ್ಲ, ಅಹಂಕಾರ ತೋರಿಸಲ್ಲ

- ಸಾನ್ಯಾ ಅಯ್ಯರ್‌

ನನಗೆ ಸಿನಿಮಾ ಅನ್ನೋದು ಪ್ರೀತಿ. ಆರಂಭದ ಸ್ಕ್ರಿಪ್ಟ್‌ ಕೆಲಸದಿಂದ ಕೊನೆಯ ಹಂತದವರೆಗೂ ನಾನು ಭಾಗಿಯಾಗುತ್ತೇನೆ. ನಿರ್ದೇಶನ ನಾನಿಷ್ಟ ಪಡುವ ಕೆಲಸ. ಹೀಗಾಗಿ ನಟನೆ ಮಾಡುತ್ತಲೇ ನಿರ್ದೇಶಕರ ಜಾಣ್ಮೆ, ಸವಾಲುಗಳ ಬಗ್ಗೆ ಗಮನಿಸುತ್ತಾ ಇರುತ್ತೇನೆ. ಸೆಟ್‌ನಲ್ಲಿ ನಟ ನಟಿಯರಿಗಿಂತ ಸಾಮಾನ್ಯರ ಜೊತೆಗೆ ಬೆರೆಯುವುದೇ ಹೆಚ್ಚು. ಆ ವೇಳೆಗೆ ಬಹಳ ಸೂಕ್ಷ್ಮವಾಗಿ ಅವರ ಬದುಕಿನ ಕಥೆಗಳು ಅರ್ಥವಾಗುತ್ತ ಹೋಗುತ್ತವೆ.

ಕಲಾವಿದನಿಗೆ ಅವನ ಪ್ರತಿಭೆಯ ಅಭಿವ್ಯಕ್ತಿಗೆ ಅವಕಾಶ ಸಿಗುವುದೇ ಹೆಚ್ಚು. ಸಿಕ್ಕ ಅವಕಾಶಕ್ಕೆ ನನ್ನೆಲ್ಲ ಶ್ರಮ ಸುರಿದು ಅದಕ್ಕೆ ಜೀವ ತುಂಬುತ್ತೇನೆಯೇ ಹೊರತು ಡೇಟ್ಸ್‌ ಕೊಡದೆ ನಖರಾ ಮಾಡೋದು, ಸೆಟ್‌ನಲ್ಲಿ ಅಹಂಕಾರ ತೋರಿಸೋದು ಇಂಥವನ್ನೆಲ್ಲ ಮಾಡೋದಿಲ್ಲ

ಸಿನಿಮಾ ಪ್ರಚಾರ ನಮ್ಮ ಪ್ರೇಕ್ಷಕರನ್ನು ನೇರ ಮುಖಾಮುಖಿಯಾಗುವ ಅವಕಾಶ. ಅಂಥಾ ಅವಕಾಶವನ್ನು ಕಲಾವಿದರು ಮಿಸ್‌ ಮಾಡಿಕೊಳ್ಳಬಾರದು. ನಾನಂತೂ ಸಿನಿಮಾದ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ಜನರಿಗೆ ಸಾಧ್ಯವಾದಷ್ಟು ಕನೆಕ್ಟ್‌ ಆಗಲು ಪ್ರಯತ್ನಿಸುತ್ತೇನೆ.

ಸಿನಿಮಾವನ್ನು ಸಿನಿಮಾವಾಗಷ್ಟೇ ನೋಡೋದಿಲ್ಲ

- ಸಂಯುಕ್ತಾ ಹೊರನಾಡು

‘ಮ್ಯಾಕ್ಸ್‌’ ಸಿನಿಮಾ ಪ್ರಚಾರದಲ್ಲಿ ನಾನು ಬಹಳ ಖುಷಿಯಿಂದ ಭಾಗವಹಿಸಿದ್ದೆ. ಆಗ ಸುದೀಪ್‌ ಒಂದು ಮಾತು ಹೇಳಿದ್ದು ಸೋಷಲ್‌ ಮೀಡಿಯಾದಲ್ಲೆಲ್ಲ ಸುದ್ದಿಯಾಯಿತು. ಈ ಸಂಯುಕ್ತಾ ಎಷ್ಟೊಂದು ಪ್ರಶ್ನೆ ಕೇಳ್ತಾರೆ ಅಂತ. ಅವರ ಮಾತು ನೂರಕ್ಕೆ ನೂರು ನಿಜ. ನಾನು ಸಿನಿಮಾದ ಸೂಕ್ಷ್ಮಾತಿಸೂಕ್ಷ್ಮ ಪ್ರೊಸೆಸ್‌ಗಳನ್ನೂ ಗಮನಿಸುತ್ತ, ಅರ್ಥವಾಗದ್ದನ್ನು ಕೇಳಿ ತಿಳಿದುಕೊಳ್ಳುತ್ತ ಇರುತ್ತೇನೆ. ಅದು ನನ್ನ ಗುಣ. ನಿರ್ದೇಶಕರು ಸ್ವಲ್ಪ ಹೊತ್ತು ಸುಮ್ನೆ ಕೂತ್ಕೊಳಮ್ಮ ಅಂತ ಹೇಳೋವರೆಗೂ ನನ್ನ ಪ್ರಶ್ನಾವಳಿ ಇರುತ್ತದೆ. ಆದರೆ ಯಾರೊಬ್ಬ ನಿರ್ದೇಶಕರೂ ನನ್ನ ಈ ಆಸಕ್ತಿ ಕುಂದಿಸುವ ಹಾಗೆ ಮಾಡಿಲ್ಲ. ಸಿನಿಮಾ ಪ್ರೊಸೆಸ್‌ ಒಂದು ಮದುವೆ ಮನೆ ಥರ ಅನಿಸುತ್ತೆ. ಅಲ್ಲಿ ಸಡಗರ, ಖುಷಿ, ಕೆಲಸದ ಗಡಿಬಿಡಿ, ಸಣ್ಣಪುಟ್ಟ ಕೊಂಕು ತಗಾದೆ, ಇವೆಲ್ಲವನ್ನೂ ಮೀರಿದ ಸೆಲೆಬ್ರೇಶನ್‌ ಇರುತ್ತೆ. ಅದು ನನಗಿಷ್ಟ.

ಸಿನಿಮಾದಲ್ಲಿ ನನ್ನ ಪಾತ್ರ ಹೇಗೇ ಇರಲಿ. ನಾನು ಆ ಪಾತ್ರದ ಸಾಮಾನ್ಯ ಅಂಶಗಳನ್ನು ಗಮನಿಸುತ್ತೇನೆ. ಆ ಪಾತ್ರ ಹೇಗೆ ನಡೆಯುತ್ತೆ, ಹೇಗೆ ಊಟ ಮಾಡುತ್ತೆ, ಅದರ ಶೈಕ್ಷಣಿಕ ಹಿನ್ನೆಲೆ ಏನು, ಆಕೆ ಸಿಟ್ಟು ಬಂದಾಗ ಹೇಗೆ ರಿಯಾಕ್ಟ್‌ ಮಾಡುತ್ತಾಳೆ ಇತ್ಯಾದಿ. ಇಷ್ಟೆಲ್ಲ ಮಾಡಿದಾಗ ನಾನು ಟೋಬಿಯ ಸಾವಿತ್ರಿಯಾಗಿ ಕಾಣಿಸಿಕೊಂಡಾಗ ಆಕೆ ವೇಶ್ಯೆಯಾದರೂ ಜನ ಅವಳನ್ನು ಮನುಷ್ಯಳನ್ನಾಗಿ ಮಾಡುತ್ತದೆ.

ಸಿನಿಮಾ ನನಗಿಷ್ಟ. ಅಲ್ಲಿ ನನ್ನ ಸಂಪೂರ್ಣ ತಲ್ಲೀನತೆ ಇರುತ್ತದೆ. ಅಪ್ಪಿತಪ್ಪಿಯೂ ನಿರ್ದೇಶಕರಿಗೆ ತಂಡಕ್ಕೆ ನೋವುಂಟುಮಾಡುವಂತೆ ಅಥವಾ ತೊಂದರೆಯಾಗುವಂತೆ ನಡೆದುಕೊಂಡಿಲ್ಲ.

Read more Articles on