ರಾಜಧಾನಿಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿ ನಗರದ ಹಲವೆಡೆ ಮರಗಳು ಉರುಳಿಬಿದ್ದು ವಾಹನಗಳು ಜಖಂಗೊಂಡಿವೆ. ಸಂಪಂಗಿರಾಮನಗರದ ಲಾಲ್‌ಬಾಗ್ ಮುಖ್ಯರಸ್ತೆಯಲ್ಲಿ ಮರಗಳು ಉರುಳಿಬಿದ್ದು ರಸ್ತೆ ಸಂಚಾರ ಬಂದ್ ಆಗಿತ್ತು.

ಬೆಂಗಳೂರು : ರಾಜಧಾನಿಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿ ನಗರದ ಹಲವೆಡೆ ಮರಗಳು ಉರುಳಿಬಿದ್ದು ವಾಹನಗಳು ಜಖಂಗೊಂಡಿವೆ. ಸಂಪಂಗಿರಾಮನಗರದ ಲಾಲ್‌ಬಾಗ್ ಮುಖ್ಯರಸ್ತೆಯಲ್ಲಿ ಮರಗಳು ಉರುಳಿಬಿದ್ದು ರಸ್ತೆ ಸಂಚಾರ ಬಂದ್ ಆಗಿತ್ತು. ಸುಧಾಮನಗರದ ಸರ್ಕಾರಿ ಕಾಲೇಜು ಸಮೀಪ ಹಾಗೂ ರಾಜರಾಜೇಶ್ವರಿನಗರದಲ್ಲಿ 2 ಕಡೆ ಮರಗಳು ಉರುಳಿಬಿದ್ದು ರಸ್ತೆ ಬಂದ್ ಆಗಿತ್ತು. ಜಿಬಿಎ ಅರಣ್ಯ ವಿಭಾಗದ ಸಿಬ್ಬಂದಿ ಮರ ತೆರವುಗೊಳಿಸಲು ಕ್ರಮ ಕೈಗೊಂಡಿದ್ದರೂ ಮಳೆ ಸತತವಾಗಿ ಸುರಿಯುತ್ತಿದ್ದರಿಂದ ತೆರವು ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು.

ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ

ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ನಂತರ 11.30ರಲ್ಲಿ ಆರಂಭವಾದ ತುಂತುರು ಮಳೆ ನಂತರ ರಭಸವಾಗಿ ಆರಂಭವಾಗಿ ಸುಮಾರು 1 ಗಂಟೆ ಸುರಿಯಿತು. ನಗರದ ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರ, ಚಿಕ್ಕಪೇಟೆ, ಮಾರುಕಟ್ಟೆ, ಬಸವನಗುಡಿ, ಜಯನಗರ, ಜೆ.ಪಿ.ನಗರ ಸುತ್ತ ಮುತ್ತ ರಭಸದ ಮಳೆಯಾಯಿತು. ಇಂದಿರಾನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಆರ್.ಟಿ.ನಗರ, ಯಲಹಂಕ, ಕೆ.ಆರ್.ಪುರ,ರಾಮಮೂರ್ತಿನಗರಗಳಲ್ಲಿ ಸಹ ಮಳೆಯಾಗಿದೆ. ರಜೆ ದಿನ ಕಳೆಯಲು ವಿವಿಧೆಡೆಯಿಂದ ಬಂದಿದ್ದ ಜನರು ಕಿರಿಕಿರಿಗೊಂಡರು. ಬೈಕ್‌ ಸವಾರರು ಮಳೆಯಲ್ಲಿಯೇ ತೊಯ್ದು ಪರದಾಡಿದರು.

ನಗರದ ಕೆ.ಆರ್.ಸರ್ಕಲ್, ಶೇಷಾದ್ರಿಪುರ, ಕಂಟೋನ್ಮೆಂಟ್, ಮೆಜೆಸ್ಟಿಕ್ ಪ್ರದೇಶದ ಅಂಡರ್ ಪಾಸ್‌ಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯಲ್ಲಿ ಹರಿಯಿತು. ವಿಧಾನ ಸೌಧ ರಸ್ತೆ, ಶೇಷಾದ್ರಿ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಧನ್ವಂತರಿ ರಸ್ತೆ. ಶ್ರೀರಾಂಪುರ ಹಾಗೂ ಸುತ್ತಮುತ್ತ ಕಾಮಗಾರಿ ನಡೆಯುತ್ತಿದ್ದು ರಸ್ತೆ ಗುಂಡಿಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿತ್ತು.

ಸಂಜೆ 4ರ ವೇಳೆಗೆ ಮತ್ತೆ ಆರಂಭವಾದ ಮಳೆ ಸತತ 2 ತಾಸು ಮಳೆ ಸುರಿಯಿತು. ಮೇಲ್ಸೇತುವೆಗಳಲ್ಲಿಯೂ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿತ್ತು. ಸಂಜೆ 6ರ ನಂತರ ಮಳೆ ಬಿಡುವು ನೀಡಿದ್ದರೂ ಇಡೀ ದಿನ ಜನರು ಕಿರಿಕಿರಿ ಅನುಭವಿಸಿದರು.

ಇಂದು ನಾಳೆ ಮಳೆ ಸಾಧ್ಯತೆ

ಸೋಮವಾರ ಹಾಗೂ ಮಂಗಳವಾರವೂ ನಗರದಲ್ಲಿ ಸಾಧಾರಣದಿಂದ ಹಗುರ ಮಳೆಯಾಗುವ ಸಾಧ್ಯತೆ ಇದೆ. ಭಾನುವಾರ ಸಂಜೆವರೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 14.8 ಮಿ. ಮೀ ಮಳೆಯಾಗಿದೆ. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 0.8 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.