ಮಟನ್‌ ಬಿರಿಯಾನಿ ಬೇಕೆಂದಾಗ ಮೊಸರನ್ನ ಅಂಗಡಿ ತೆಗೆಯಬಾರದು: ನಟ ರಾಜ್‌ ಬಿ ಶೆಟ್ಟಿ ಮಾತು

| Published : Jul 19 2024, 12:48 AM IST / Updated: Jul 19 2024, 05:53 AM IST

ಸಾರಾಂಶ

ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ಅವರ ಸಂದರ್ಶನದ ಮಾತುಗಳು ಇಲ್ಲಿವೆ.

- ಆರ್‌ ಕೇಶವಮೂರ್ತಿ

ಕನ್ನಡಕ್ಕೇ ನೀವು ಅಪರೂಪ ಅನಿಸಿದ್ದೀರಲ್ಲ? 

ಜು. 26ಕ್ಕೆ ನನ್ನ ನಟನೆಯ ‘ರೂಪಾಂತರ’ ತೆರೆಗೆ ಬರುತ್ತಿದೆ. ‘45’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಜಡೇಶ್ ನಿರ್ದೇಶನ, ದುನಿಯಾ ವಿಜಯ್ ನಟನೆಯ ಚಿತ್ರದಲ್ಲಿದ್ದೇನೆ. ಇವುಗಳ ಜತೆಗೆ ಈಗ ಹೆಚ್ಚು ವಿವರಣೆ ಕೊಡಲಿಕ್ಕೆ ಆಗದ ಮತ್ತೆರಡು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. 

ವೆಬ್ ಸರಣಿ ಮಾಡುತ್ತಿದ್ದೀರಿ ಅಂತ ಕೇಳಿ ಬಂತಲ್ಲ?

ಹೌದು ಮಾಡುತ್ತಿದ್ದೇನೆ. ಸೋನಿ ಲೈವ್‌ಗೆ ಮಾಡುತ್ತಿರುವ ವೆಬ್ ಸರಣಿ ಅದು. ಯಾವಾಗ ಸ್ಟ್ರೀಮಿಂಗ್ ಆಗುತ್ತದೋ ಗೊತ್ತಿಲ್ಲ. 

ಈಗ ಶುರುವಾಗಿರುವ ‘ಕಾಂತಾರ 1’ನಲ್ಲಿ ನಿಮ್ಮ ಪಾತ್ರ ಏನು?

  ಏನೂ ಇಲ್ಲ. ‘ಕಾಂತಾರ 2’ ಬಂದಾಗ ದೈವವನ್ನು ಸರಿಯಾಗಿ ತೋರಿಸಿಲ್ಲ ಅನ್ನೋ ರೀತಿ ಅಲ್ಲಿನ ಜನ ಬೇಸರ ವ್ಯಕ್ತಪಡಿಸಿದ್ದರು. ಸ್ಥಳೀಯರ ಸೆಂಟಿಮೆಂಟ್ ಹಾಗೂ ನಂಬಿಕೆಗಳಿಗೆ ಘಾಸಿ ಮಾಡಬಾರದು ಎನ್ನುವ ಕಾರಣಕ್ಕೆ ನಾನು ‘ಕಾಂತಾರ 1’ ಜತೆಯಾಗಿಲ್ಲ. ಬಹುಶಃ ರಿಷಬ್ ಶೆಟ್ಟಿ ಬೇರೆ ರೀತಿ ತೋರಿಸಬಹುದು. ನನಗೆ ಗೊತ್ತಿಲ್ಲ. 

‘ಟೋಬಿ’ ಸಿನಿಮಾ ನಿಮ್ಮನ್ನು ಹಿಂದಕ್ಕೆ ಎಳೆಯಿತೇ? 

ಹಿಂದಕ್ಕೆ ಎಳೆಯಿತು ಎನ್ನುವುದಕ್ಕಿಂತ ಈ ಸಿನಿಮಾ ನನಗೆ ತುಂಬಾ ಕಲಿಸಿಕೊಟ್ಟಿದೆ. ನಟನಾಗಿ ದೊಡ್ಡ ಹೆಸರು ಕೊಟ್ಟಿದೆ. ನಾನೊಬ್ಬ ನಟ ಅಂತ ನನಗೆ ಅರ್ಥ ಮಾಡಿಸಿದೆ. ಮಲಯಾಳಂ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಕೂಡ ಟೋಬಿ ಯಿಂದಲೇ. 

ಟೋಬಿ ನಿಮ್ಮನ್ನು ಸೋಲಿಸಿತು ಅನ್ನುವವರಿಗೆ ಏನು ಹೇಳ್ತಿರಿ?

ಸೋಲು ಕೂಡ ತುಂಬಾ ಸುಂದರವಾಗಿರುತ್ತದೆ. ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದರೆ, ಸೋಲು ಹಲವು ಪ್ರಶ್ನೆಗಳನ್ನು ನಮ್ಮ ಮುಂದಿಟ್ಟು ಅವುಗಳಿಗೆ ಉತ್ತರ ಕಂಡುಕೊಳ್ಳುವ ಜವಾಬ್ದಾರಿ ಹೊರಿಸುತ್ತದೆ. ಉತ್ತರ ಕಂಡುಕೊಂಡರೆ ಮುಂದಿನ ಪಯಣ ಸೂಪರ್ ಆಗಿರುತ್ತದೆ. ಈ ನಿಟ್ಟಿನಲ್ಲಿ ನಾನು ಸೋತಿದ್ದಕ್ಕೆ ನಾನು ಬಹಳ ಅದೃಷ್ಟವಂತ. 

ಒಂದು ವೇಳೆ ನಿರೀಕ್ಷೆಯಂತೆ ಟೋಬಿ ಗೆದ್ದಿದ್ದರೆ?

ನಾನೂ ಕೂಡ ಎರಡು ವರ್ಷಕ್ಕೊಂದು ಚಿತ್ರ ಮಾಡುತ್ತಿದ್ದೆನೇನೋ? ಆದರೆ, ಅಷ್ಟರಲ್ಲಿ ‘ಟೋಬಿ’ ನನ್ನ ಹಿಡಿದು ನಿಲ್ಲಿಸಿತು. ನನ್ನ ಪ್ರಕಾರ ಸೋಲು ತುಂಬಾ ಸ್ವಾತಂತ್ರ್ಯ ಕೊಡುತ್ತೆ. 

ವರ್ಷಕ್ಕೊಂದು ಸಿನಿಮಾ ಮಾಡೋದು ತಪ್ಪು ಅಂತೀರಾ?

ಸರಿ, ತಪ್ಪು ಅನ್ನೋದಕ್ಕಿಂತ ಅದರಿಂದ ಆಗುವ ಸಮಸ್ಯೆಗಳ ಬಗ್ಗೆ ಯೋಚನೆ ಮಾಡಬೇಕಲ್ಲ. ಈ ಚಿತ್ರಗಳು ವರ್ಷಕ್ಕೆ ಎಷ್ಟು ಬರುತ್ತಿವೆ, ಹಾಗಾದರೆ ವರ್ಷ ಪೂರ್ತಿ ಚಿತ್ರಮಂದಿರಗಳನ್ನು ಸಾಕುತ್ತಿರುವ ಚಿತ್ರಗಳು ಯಾವುವು? ವರ್ಷಕ್ಕೊಂದು ಸಿನಿಮಾ ಮಾಡಿದರೆ ಮಾತ್ರ ಥಿಯೇಟರ್‌ಗಳಿಗೆ ಜನ ಬರೋದು ಎನ್ನುವ ವಾತಾವರಣ ನಿರ್ಮಾಣ ಆಗಿರೋದರಿಂದ ಪ್ರೇಕ್ಷಕ ಮತ್ತು ಚಿತ್ರಮಂದಿರದ ನಡುವಿನ ಸಂಬಂಧ ದೂರ ಆಗುತ್ತಿದೆ. 

ಈಗ ನೀವು ಹೋಗಿ ಬಂದಿರುವ ಮಲಯಾಳಂ ಚಿತ್ರರಂಗ ಹೇಗಿದೆ? 

ಮಲಯಾಳಂ ಚಿತ್ರರಂಗ ಕೆಲವೇ ಚಿತ್ರಗಳಿಂದ 1000 ಕೋಟಿ ಗಳಿಕೆ ಮಾಡಿದೆ. ಅಲ್ಲಿ ಗೆದ್ದ ಚಿತ್ರಗಳ ಕೊಲಾಬ್ರೇಶನ್‌ ನೋಡಿ, ‘ಆವೇಶಂ’ ಚಿತ್ರಕ್ಕೆ ದುಡಿದ ತಂತ್ರಜ್ಞರೆಲ್ಲಾ ಹೆಸರು ಮಾಡಿದವರು. ಅವರ ಜತೆಗೆ ಫಹಾದ್‍ ಫಾಸಿಲ್‍ ಸಹ ಇದ್ದರು. ‘ಪ್ರೇಮಲು’ ಚಿತ್ರದ ತೆರೆ ಮೇಲೆ ಹೊಸಬರು, ತೆರೆ ಹಿಂದೆ ನುರಿತ ತಂಡ ಇತ್ತು. 

ಅಂದರೆ ಗೆದ್ದವರೇ ಸೇರಿ ಸಿನಿಮಾ ಮಾಡಬೇಕಾ?

ಈಗ ಕನ್ನಡದಲ್ಲಿ ‘ಕಾಟೇರ’ ಆಯ್ತು ನೋಡಿ, ಆ ರೀತಿಯ ಕೊಲಾಬ್ರೇಷನ್ ಹೇಳುತ್ತಿದ್ದೇನೆ. ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ, ಕತೆಗಾರ, ಸಂಗೀತ ನಿರ್ದೇಶಕ ಇದ್ದಾಗ ಚಿತ್ರವನ್ನು ಜನಕ್ಕೆ ತಲುಪಿಸೋದು ಸುಲಭ, ಮಾರಾಟ ಮಾಡೋದು ಸುಲಭ. 

ಕನ್ನಡದಲ್ಲಿ ಇರೋ ಸಮಸ್ಯೆಗಳು ಮಲಯಾಳಂನಲ್ಲಿ ಇಲ್ಲವಲ್ಲ?

ಅಲ್ಲಿ ಚಿತ್ರೀಕರಣ ಮುಗಿದ ಮೂರು ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆ. ಬೆಳಗ್ಗೆ ಸಿನಿಮಾ ಬಿಡುಗಡೆ ಆದರೆ ಮಧ್ಯಾಹ್ನ ಜನಕ್ಕೆ ಆ ಸಿನಿಮಾ ಬಗ್ಗೆ ಗೊತ್ತಿರುತ್ತದೆ. ನಟಿಸಿದವರನ್ನು ಗುರುತಿಸಿ ಮಾತನಾಡುತ್ತಾರೆ. ಎಂದೋ ಮಲಯಾಳಂನಲ್ಲಿ ನಟಿಸಿದ್ದ ಡಾ ವಿಷ್ಣುವರ್ಧನ್ ಅವರನ್ನು ನೆನಪಿಟ್ಟುಕೊಂಡು ನನ್ನ ಜತೆಗೆ ಮಾತನಾಡುತ್ತಾರೆ. ವಿಷ್ಣು ಅವರು ಮತ್ತೆ ನಮ್ಮ ಚಿತ್ರಗಳಲ್ಲಿ ನಟಿಸಿಲ್ಲ ಅಂತಾರೆ. ಅಲ್ಲಿ ಸಿನಿಮಾ ಸಂಸ್ಕೃತಿ ಗಾಢವಾಗಿದೆ. 

ಇಲ್ಲಿ ನಾವು ಏನು ಮಾಡಬಹುದು?

ಪ್ರಿ ಪ್ರೊಡಕ್ಷನ್, ಪ್ರೊಡಕ್ಷನ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಈ ಮೂರು ಹಂತದಲ್ಲಿ ನಮಗೆ ಸ್ಪಷ್ಟವಾದ ಪ್ಲಾನ್ ಇರಬೇಕು. ಗುಣಮಟ್ಟ ಎಷ್ಟು ಮುಖ್ಯವೋ, ಅದನ್ನು ಎಷ್ಟು ಬೇಗ ಮಾಡುತ್ತೇವೆ ಎಂಬುದು ಕೂಡ ಮುಖ್ಯ. 

ಆದರೆ, ಚಿತ್ರಗಳ ಸೋಲಿಗೆ ಚಿತ್ರರಂಗದ ಕೆಲವರು ಪ್ರೇಕ್ಷಕರನ್ನು ದೂರುತ್ತಿದ್ದಾರಲ್ಲ? 

ಪ್ರೇಕ್ಷಕರು ‘ಕಲ್ಕಿ’ ನೋಡುತ್ತಾರೆ. ‘ಕಾಂತಾರ’ ನೋಡುತ್ತಾರೆ. ‘ಕೆಜಿಎಫ್’ ಚಿತ್ರವನ್ನು ಗೆಲ್ಲಿಸುತ್ತಾರೆ, ‘ಕಾಟೇರ’ನನ್ನೂ ಇಷ್ಟಪಡುತ್ತಾರೆ. ಹೀಗಾಗಿ ಪ್ರೇಕ್ಷಕರನ್ನು ದೂರೋದು ಬೇಡ. ಅವರಿಗೆ ಮಟನ್‌ ಬಿರಿಯಾನಿ ಬೇಕಾ, ಮೊಸರನ್ನ ಬೇಕಾ ಅಂತ ಮೊದಲು ತಿಳಿದುಕೊಳ್ಳೋಣ.

ಚಿತ್ರರಂಗದಲ್ಲಿ ನಿಮ್ಮ ಮತ್ತು ಸಿನಿಮಾಗಳ ಬಗ್ಗೆ ಇರೋ ಮಾತು ಮಂಗಳೂರು, ಶೆಟ್ಟಿ ಸಿಂಡಿಕೇಟ್ ಅಂತ?

ರೂಪಾಂತರ’, ‘ಟೋಬಿ’, ‘ಸ್ವಾತಿಮುತ್ತಿನ ಮಳೆ ಹನಿಯೇ’ ಚಿತ್ರಗಳ ತಾರಾಗಣ ನೋಡಿದರೆ ಸಿಂಡಿಕೇಟ್ ಅನಿಸುತ್ತದೆಯೇ? ಇಲ್ಲಿ ಮಂಗಳೂರು, ಶೆಟ್ಟಿ ಗ್ಯಾಂಗು ಅಂತೇನು ಇಲ್ಲ.