ರಾಜಮೌಳಿ, ಮಹೇಶ್‌ ಬಾಬು ಸಿನಿಮಾ ಶೀರ್ಷಿಕೆ ವಾರಣಾಸಿ

| N/A | Published : Nov 17 2025, 01:14 PM IST

Mahesh babu

ಸಾರಾಂಶ

ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ಹಲವು ದೇಶಗಳಿಂದ ಬಂದ ಪತ್ರಕರ್ತರ ಉಪಸ್ಥಿತಿಯಲ್ಲಿ, 130 ಅಡಿ ಎತ್ತರದ, 130 ಅಡಿ ಅಗಲದ ಬೃಹತ್ತಾದ ಎಲ್‌ಇಡಿ ಸ್ಕ್ರೀನ್‌ನಲ್ಲಿ ಎಸ್‌.ಎಸ್‌.ರಾಜಮೌಳಿ ತನ್ನ ಹೊಸ ಸಿನಿಮಾದ ಶೀರ್ಷಿಕೆ ಮತ್ತು ನಾಯಕ ನಟ ಮಹೇಶ್ ಬಾಬು ಅ‍ವರ ಫಸ್ಟ್‌ ಲುಕ್‌ ಟೀಸರನ್ನು ಬಿಡುಗಡೆ

 ಸಿನಿವಾರ್ತೆ

ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಸಿದ್ಧಗೊಳಿಸಿದ ಅದ್ದೂರಿ ವೇದಿಕೆಯಲ್ಲಿ, ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ, ಜಪಾನ್‌, ಯುಕೆ ಸೇರಿದಂತೆ ಹಲವು ದೇಶಗಳಿಂದ ಬಂದ ಪತ್ರಕರ್ತರ ಉಪಸ್ಥಿತಿಯಲ್ಲಿ, 130 ಅಡಿ ಎತ್ತರದ, 130 ಅಡಿ ಅಗಲದ ಬೃಹತ್ತಾದ ಎಲ್‌ಇಡಿ ಸ್ಕ್ರೀನ್‌ನಲ್ಲಿ ಎಸ್‌.ಎಸ್‌.ರಾಜಮೌಳಿ ತನ್ನ ಹೊಸ ಸಿನಿಮಾದ ಶೀರ್ಷಿಕೆ ಮತ್ತು ನಾಯಕ ನಟ ಮಹೇಶ್ ಬಾಬು ಅ‍ವರ ಫಸ್ಟ್‌ ಲುಕ್‌ ಟೀಸರನ್ನು ಬಿಡುಗಡೆ ಮಾಡಿದರು.

ಸಿನಿಮಾ ಹೆಸರು ‘ವಾರಣಾಸಿ

ರಾಜಮೌಳಿ ಮಾಡುತ್ತಿರುವ ಈ ವರ್ಲ್ಡ್‌ ಸಿನಿಮಾ ಹೆಸರು ‘ವಾರಣಾಸಿ’. ಮಹೇಶ್ ಬಾಬು ಪಾತ್ರದ ಹೆಸರು ‘ರುದ್ರ’.

ರಾಜಮೌಳಿ ಈ ಬಾರಿ ಶೀರ್ಷಿಕೆ ಮತ್ತು ಹೀರೋ ಫರ್ಸ್ಟ್‌ ಲುಕ್‌ ಟೀಸರನ್ನೇ ಜಗತ್ತು ತಿರುಗಿ ನೋಡುವಂತೆ ಬಿಡುಗಡೆ ಮಾಡಿ ಹೊಸ ದಾರಿಯನ್ನು ಹಾಕಿಕೊಟ್ಟಿದ್ದಾರೆ. ಅದರಲ್ಲೂ ತೆಲುಗು ಮಂದಿಯ ಸಿನಿಮಾ ಪ್ರೀತಿ ದೊಡ್ಡದು. ನಗರಕ್ಕಿಂತ 30-40 ಕಿಮೀ ದೂರ ಇರುವ ಸ್ಥಳಕ್ಕೆ ಲಕ್ಷಾಂತರ ಮಂದಿ ಬಂದಿದ್ದರು. ಅದಕ್ಕೆ ತಕ್ಕಂತೆ ಕಾಶಿಯ ಹಿನ್ನೆಯ ವೇದಿಕೆಯಲ್ಲಿ ರಾಜಮೌಳಿ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ನಾಯಕಿ ಪ್ರಿಯಾಂಕ ಚೋಪ್ರಾ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಸಂತೋಷ ತಂದಿದೆ ಎಂದರು. ಕತೆಗಾರ ವಿಜಯೇಂದ್ರ ಪ್ರಸಾದ್ ಈ ಸಿನಿಮಾ ಒಂದು ಆ್ಯಕ್ಷನ್‌ ಸೀಕ್ವೆನ್ಸ್‌ನಲ್ಲಿ ಮಹೇಶ್‌ ಬಾಬು ವಿಶ್ವರೂಪ ತೋರಿಸಿದ್ದಾರೆ ಎಂದರು. ಚಿತ್ರದ ಖಳನಟ ಪೃಥ್ವಿರಾಜ್‌, ಈ ಸಿನಿಮಾದ ನಿರೂಪಣೆ ಕೇಳಿಯೇ ನಾನು ಕಳೆದುಹೋಗಿದ್ದೆ, ಈ ಸಿನಿಮಾ ರಿಲೀಸ್ ಆಗುವ ದಿನ ನೀವೂ ಕಳೆದುಹೋಗುತ್ತೀರಿ ಎಂದರು. ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಪೋಕಿರಿ ಸಿನಿಮಾ ನೆನಪಿಸಿಕೊಂಡು ಡೈಲಾಗ್ ಹೊಡೆದು ಮಹೇಶ್‌ ಬಾಬು ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿಕೊಂಡರು. ಈ ಸಿನಿಮಾ 2027ರಲ್ಲಿ ಬಿಡುಗಡೆಯಾಗುತ್ತದೆ ಎಂದರು.

ಅದೆಲ್ಲಕ್ಕೂ ಕಳಶಪ್ರಾಯವಾಗಿ ಮಹೇಶ್‌ ಬಾಬು ಪ್ರವೇಶವನ್ನೇ ಸಿನಿಮಾ ರೇಂಜಲ್ಲಿ ರೂಪಿಸಿದ್ದರು ರಾಜಮೌಳಿ. ಟೀಸರ್‌ನಲ್ಲಿ ಮಹೇಶ್‌ ಬಾಬು ಕಾಣಿಸುತ್ತಿದ್ದಂತೆ ವೇದಿಕೆಯ ಕೆಳಗಿಂದ ಆಶ್ಚರ್ಯಕರವಾಗಿ ಕೋಣದ ಮೇಲೇರಿ ಮಹೇಶ್‌ ಬಾಬು ಬರುವಾಗ ಇಡೀ ಸಭಾಂಗಣ ಬೊಬ್ಬಿಟ್ಟಿತು. ರಾಜಮೌಳಿ ಒಂದು ಮಾಯಕದ ಗಳಿಗೆಯನ್ನು ಅಲ್ಲಿ ಸೃಷ್ಟಿಸಿದ್ದರು.

ಅದಕ್ಕೂ ಮೊದಲು ಟೀಸರ್‌ ತಾಂತ್ರಿಕ ಕಾರಣದಿಂದ ಪ್ರಸಾರವಾಗದಿದ್ದಾಗ ರಾಜಮೌಳಿ ಕೊಂಚ ಭಾವುಕರಾಗಿದ್ದು ಕಂಡುಬಂತು. ಟೀಸರ್‌ ಪ್ರಸಾರವಾದ ಮೇಲಿನ ಅವರ ಮುಖದ ನಿರಾಳತೆಯೇ ಅವರು ಸಿನಿಮಾವನ್ನು ಎಷ್ಟು ಪ್ರೀತಿಸುತ್ತಾರೆ ಅನ್ನುವುದನ್ನು ಹೇಳುವಂತಿತ್ತು.

ಇದು ನನ್ನ ಡ್ರೀಮ್‌ ಪ್ರಾಜೆಕ್ಟ್‌. ಜೀವನದಲ್ಲಿ ಒಮ್ಮೆ ಮಾತ್ರ ಮಾಡಬಹುದಾದ ಸಿನಿಮಾ. ಎಷ್ಟು ಕಷ್ಟವಾದರೂ ಸರಿ ನಾನು ಈ ಸಿನಿಮಾ ಮೂಲಕ ಎಲ್ಲೂ ಹೆಮ್ಮೆ ಪಡುವಂತೆ ಮಾಡುತ್ತೇನೆ. ಈ ಸಿನಿಮಾ ಬಂದ ಮೇಲೆ ಇಡೀ ಭಾರತ ನಮ್ಮ ಬಗ್ಗೆ ಹೆಮ್ಮೆ ಪಡುತ್ತದೆ.

- ಮಹೇಶ್‌ ಬಾಬು

ರಾಜಮೌಳಿ ಮಾತುಗಳು

- ನನ್ನ ಸಿನಿಮಾದ ಕತೆಯನ್ನು, ಇದರ ವಿಸ್ತಾರವನ್ನು ಮಾತಿನಲ್ಲಿ ಹೇಳುವುದು ಕಷ್ಟ. ಅದಕ್ಕಾಗಿ ಈ ಟೀಸರ್‌ ಸಿದ್ಧಗೊಳಿಸಿದ್ದೇವೆ. ಈ ಟೀಸರ್‌ ಎಲ್ಲವನ್ನೂ ಹೇಳುತ್ತದೆ.

- ಮಹೇಶ್‌ ಬಾಬು ಕೃಷ್ಣನ ಪಾತ್ರಕ್ಕೆ ಸೂಕ್ತವಾಗುತ್ತಾರೆ, ಶಾಂತರೂಪಿ ರಾಮನ ಪಾತ್ರಕ್ಕೆ ಹೊಂದುವುದಿಲ್ಲವೇನೋ ಎಂಬ ಅನುಮಾನವಿತ್ತು. ರಾಮನ ದಿರಿಸು ಧರಿಸಿದ ಅವರನ್ನು ನೋಡಿದಾಗ ನನಗೇ ರೋಮಾಂಚನವಾಯಿತು.

- ಇದು ನನ್ನ ಮತ್ತು ಮಹೇಶ್‌ ಬಾಬು ವೃತ್ತಿಜೀವನದ ಅತಿದೊಡ್ಡ ಸಿನಿಮಾ ಆಗಲಿದೆ. ನನಗೆ ರಾಮಾಯಣ, ಮಹಾಭಾರತ ಇಷ್ಟ. ಇದರಲ್ಲಿ ರಾಮಾಯಣ ಅಂಶ ನಾನು ನಿರೀಕ್ಷಿಸದೇ ಬಂದಿದ್ದು ನನಗೇ ಖುಷಿ ಕೊಟ್ಟಿದೆ.- ಮಹೇಶ್‌ ತಂದೆ ಕೃಷ್ಣಂರಾಜು ಚಿತ್ರರಂಗಕ್ಕೆ ಅನೇಕ ಹೊಸತುಗಳನ್ನು ಕೊಟ್ಟವರು. ಈ ಸಿನಿಮಾ ಮೂಲಕ ಪ್ರೀಮಿಯಂ ಲಾರ್ಜ್‌ ಸ್ಕೇಲ್‌ ಫಾರ್ಮ್ಯಾಟ್‌ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದೇವೆ.

Read more Articles on