ಕೊಡವ ಜನರಲ್ಲಿ ನಾನು ಮೊದಲ ಚಿತ್ರ ನಾಯಕಿ ಎಂದ ರಶ್ಮಿಕಾ : ಕೊಡಗಿನ ನಟಿಯರಿಂದ ತೀವ್ರ ‍ವಿರೋಧ

| N/A | Published : Jul 06 2025, 11:51 AM IST

Rashmika Mandanna
ಕೊಡವ ಜನರಲ್ಲಿ ನಾನು ಮೊದಲ ಚಿತ್ರ ನಾಯಕಿ ಎಂದ ರಶ್ಮಿಕಾ : ಕೊಡಗಿನ ನಟಿಯರಿಂದ ತೀವ್ರ ‍ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಿಗರ ಜೊತೆಗೆ ಸದಾ ಒಂದಿಲ್ಲೊಂದು ವಿವಾದ ಮಾಡಿಕೊಂಡೇ ಸುದ್ದಿಯಲ್ಲಿರುವ ರಶ್ಮಿಕಾ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

 ಬೆಂಗಳೂರು :  ಕನ್ನಡಿಗರ ಜೊತೆಗೆ ಸದಾ ಒಂದಿಲ್ಲೊಂದು ವಿವಾದ ಮಾಡಿಕೊಂಡೇ ಸುದ್ದಿಯಲ್ಲಿರುವ ರಶ್ಮಿಕಾ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ, ‘ನಮ್ಮ ಕೊಡವ ಸಮುದಾಯದಿಂದ ಈವರೆಗೆ ಚಿತ್ರರಂಗಕ್ಕೆ ನಾಯಕಿಯಾಗಿ ಯಾರೂ ಬಂದಿಲ್ಲ, ನಾನೇ ಮೊದಲು’ ಎಂದು ಹೇಳಿಕೆ ನೀಡಿದ್ದು, ಇದೀಗ ಭಾರೀ ಟೀಕೆಗೆ ಒಳಗಾಗಿದೆ.

ಕೊಡವ ಸಮುದಾಯದ ಅನೇಕರು ಚಿತ್ರರಂಗದಲ್ಲಿ ಈಗಾಗಲೇ ನಾಯಕಿಯರಾಗಿ ಮಿಂಚಿದ್ದು, ರಶ್ಮಿಕಾ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಪ್ರೇಮಾ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ ಮುಂತಾದವರು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹರ್ಷಿಕಾ ಪೂಣಚ್ಚ, ‘ರಶ್ಮಿಕಾ ಬಾಯ್ತಪ್ಪಿನಿಂದ ಈ ರೀತಿ ಮಾತನಾಡಿರಬಹುದು. ಬಹುಶಃ ತೆಲುಗು ಹಾಗೂ ಹಿಂದಿ ಇಂಡಸ್ಟ್ರಿಯಲ್ಲಿ ತಾನು ಹೆಸರು ಮಾಡಿದ್ದೇನೆ ಅನ್ನೋ ಅರ್ಥದಲ್ಲಿ ಹೀಗೆ ಹೇಳಿರಬಹುದು. ವಾಸ್ತವದಲ್ಲಿ ನಾವೆಲ್ಲ ಹುಟ್ಟುವ ಮೊದಲೇ ಡಾ.ರಾಜ್​ ಕುಮಾರ್​ ಅವರ ಜೊತೆಗೆ ಕೊಡಗಿನ ಶಶಿಕಲಾ ಎಂಬವರು ನಾಯಕಿಯಾಗಿ ನಟಿಸಿದ್ದರು. ಆಮೇಲೆ ನಾವೆಲ್ಲ ನಟಿ ಪ್ರೇಮಾ ಅವರ ಅದ್ಭುತ ನಟನೆ ನೋಡಿಕೊಂಡು ಬೆಳೆದಿದ್ದೇವೆ. ಇಂದು ಸಾಕಷ್ಟು ಕೊಡಗಿನ ನಟಿಯರು ಚಿತ್ರರಂಗದಲ್ಲಿದ್ದಾರೆ. ರಶ್ಮಿಕಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಮುದಾಯಕ್ಕೆ ಹೆಸರು ತಂದು ಕೊಟ್ಟಿದ್ದಾರೆ. ನಮಗೆ ರಶ್ಮಿಕಾ ಮೇಲೆ ಹೆಮ್ಮೆ ಇದೆ. ಆದರೆ ಆಕೆ ಚಿಕ್ಕ ಹುಡುಗಿ, ಗೊತ್ತಿಲ್ಲದೇ ತಪ್ಪು ಮಾಡಿರಬಹುದು’ ಎಂದಿದ್ದಾರೆ.

ಇನ್ನು ನಟಿ ಪ್ರೇಮಾ, ‘ಕೊಡವ ಸಮಾಜದಿಂದ ಯಾರೆಲ್ಲಾ ನಾಯಕಿಯರು ಬಂದಿದ್ದಾರೆ ಎಂದು ಜನರಿಗೆ ಗೊತ್ತಿದೆ. ಚಿತ್ರರಂಗಕ್ಕೆ ಬಂದಾಗಿನಿಂದ ನಾನು ಮಾತನಾಡಿದ್ದು ಕಡಿಮೆ, ಸುಮ್ಮನೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೆ. ಇಲ್ಲಿ ನಾನು ಒಬ್ಬಳು ಕೆಲಸಗಾರ್ತಿ. ಅವರ ಮಾತಿಗೆಲ್ಲ ಕಮೆಂಟ್‌ ಮಾಡುವಷ್ಟು ದೊಡ್ಡ ವ್ಯಕ್ತಿಯೇನಲ್ಲ’ ಎಂದಿದ್ದಾರೆ.

‘ಇಂಥದ್ದಕ್ಕೆಲ್ಲ ರಿಯಾಕ್ಟ್‌ ಮಾಡಬಾರದು. ರಾಹುಲ್‌ ಗಾಂಧಿ ಅವ್ರೂ ಏನೇನೋ ಹೇಳ್ತಾರೆ. ಅದಕ್ಕೆಲ್ಲ ಪ್ರತಿಕ್ರಿಯೆ ನೀಡಲಿಕ್ಕಾಗುತ್ತಾ, ಜಸ್ಟ್ ಜೋಕ್‌ ಅಂತ ಬಿಟ್ಟು ಬಿಡಬೇಕಷ್ಟೇ’ ಎಂದು ನಿಧಿ ಸುಬ್ಬಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ತನಿಶಾ ಕುಪ್ಪಂಡ ಅವರು, ‘ಕೆಲವೊಬ್ಬರಿಗೆ ಕೆಲವೊಮ್ಮೆ ಕನ್ನಡದ ಬಗ್ಗೆ ಮಾತನಾಡಬೇಕು ಅಂತನಿಸುತ್ತದೆ. ಇನ್ನೊಮ್ಮೆ ಊರಿನ ಬಗ್ಗೆ ಮಾತನಾಡಬೇಕು ಅನಿಸುತ್ತದೆ. ತಾನು ಪರ್ಫೆಕ್ಟ್‌ ಅನ್ನೋದನ್ನು ತೋರಿಸಿಕೊಳ್ಳುವ ಭರದಲ್ಲಿ ತಮ್ಮನ್ನು ತಾವೇ ಬೀಳಿಸಿಕೊಳ್ಳುತ್ತಿದ್ದಾರೆ ಅಂತನಿಸುತ್ತದೆ’ ಎಂದಿದ್ದಾರೆ.

Read more Articles on