ನೂರರಲ್ಲಿ ಐದು ಸಿನಿಮಾ ಮಾತ್ರ ಸಕ್ಸೆಸ್ : ರವಿಚಂದ್ರನ್‌

| Published : Feb 26 2025, 01:05 AM IST

ಸಾರಾಂಶ

ರಿಲೀಸ್‌ ಆಗೋ ನೂರು ಸಿನಿಮಾದಲ್ಲಿ ಐದಷ್ಟೇ ಸಕ್ಸಸ್‌ ಆಗುತ್ತೆ, ಉಳಿದವೆಲ್ಲ ಸೋಲುತ್ತವೆ ಎಂದು ರವಿಚಂದ್ರನ್‌ ಹೇಳಿದ್ದಾರೆ.

- ವರ್ಷಕ್ಕೆ ನೂರು ಸಿನಿಮಾ ಬಂದರೆ ಐದಷ್ಟೇ ಸಕ್ಸಸ್‌ ಕಾಣೋದು. ಇನ್ನೊಂದು 5 ಸಿನಿಮಾ ಹಾಕಿದ ಬಂಡವಾಳ ವಾಪಾಸ್‌ ತರುತ್ತದೆ. ಉಳಿದ 90 ಸಿನಿಮಾಗಳಿಗೆ ಸೋಲು ಕಟ್ಟಿಟ್ಟ ಬುತ್ತಿ. ಇದು ಇವತ್ತಿನ ಕಥೆ ಅಲ್ಲ. ಸಿನಿಮಾ ಇತಿಹಾಸವೇ ಈ ರೀತಿ ಇದೆ.

- ಬೇರೆ ಭಾಷೆಯ ಸಿನಿಮಾಗಳೆಲ್ಲ ಸಕ್ಸಸ್‌ ಕಾಣುತ್ತವೆ ಅನ್ನೋದು ನಮ್ಮ ಭ್ರಮೆ ಅಷ್ಟೇ. ಬೇರೆ ಭಾಷೆಯಲ್ಲಿ ಚೆನ್ನಾಗಿರುವ ಸಿನಿಮಾಗಳಷ್ಟೇ ಇಲ್ಲಿಗೆ ಬರುತ್ತವೆ. ಅವನ್ನಷ್ಟೇ ನೋಡುವ ನಾವು ಬೇರೆ ಭಾಷೆಯ ಸಿನಿಮಾಗಳೆಲ್ಲ ಚೆನ್ನಾಗಿವೆ ಎಂಬ ತೀರ್ಮಾನಕ್ಕೆ ಬರುತ್ತೇವೆ. ಆದರೆ ವಾಸ್ತವದಲ್ಲಿ ಅಲ್ಲೂ ವರ್ಷಕ್ಕೆ 200 ಪ್ಲಸ್‌ ಸಿನಿಮಾಗಳು ಬಂದಿರುತ್ತವೆ. ಬೆರಳೆಣಿಕೆಯ ಸಿನಿಮಾಗಳಷ್ಟೇ ಯಶಸ್ವಿ ಆಗುತ್ತವೆ. ಆದರೂ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾ ಕೊನೆಯ ಸ್ಥಾನದಲ್ಲಿದೆ. ನಾವು ಹೋರಾಟ ಮಾಡಲೇ ಬೇಕಾದ ಅನಿವಾರ್ಯತೆ ಇದೆ.

- ನಾನು ಯಾವತ್ತೂ ಪ್ಯಾನ್‌ ಇಂಡಿಯಾ ಸಿನಿಮಾ ಮಾಡೋಕೆ ಹೋಗಲ್ಲ. ತಾಕತ್ತಿದ್ದರೆ ಇಂಡಿಯಾ ಲೆವೆಲ್‌ಗೆ ಸಿನಿಮಾನೇ ಹೋಗುತ್ತದೆ. ಹಾಗೆ ನೋಡಿದರೆ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ‘ಪ್ರೇಮಲೋಕ’. ಎಲ್ಲರೂ ಭಾವಿಸಿರುವಂತೆ ‘ಶಾಂತಿಕ್ರಾಂತಿ’ ಅಲ್ಲ. ‘ಪ್ರೇಮಲೋಕ’ ಸಿನಿಮಾ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಚಿತ್ರೀಕರಣಗೊಂಡಿತು. ನಂತರ ತೆಲುಗು ಭಾಷೆಗೂ ಡಬ್‌ ಆಗಿತ್ತು.

- ಪ್ರೇಮದ ವಿಚಾರಕ್ಕೆ ಬಂದರೆ ಪ್ರೇಮ ಅನ್ನೋದು ಎಂದೂ ಬದಲಾಗಲ್ಲ, ಪ್ರೀತಿಸುವ ಮೆಥಡ್‌ ಬದಲಾಗುತ್ತೆ ಅಷ್ಟೇ. ಪ್ಯಾರ್, ಮೊಹಬ್ಬತ್, ಇಷ್ಕ್‌ ಏನೇ ಹೆಸರಿಟ್ಟುಕೊಳ್ಳಿ. ಅದಕ್ಕಿರುವ ತಾಕತ್ತೇ ಬೇರೆ. ಅದಿಲ್ಲದೇ ಏನೂ ನಡೆಯಲ್ಲ. ಹಿಂದೆ ಕಣ್ಣಲ್ಲಿ ಕಣ್ಣಿಟ್ಟು ಪ್ರೇಮ ನಿವೇದನೆ ಮಾಡ್ತಿದ್ರು. ಈಗ ಮೆಸೇಜ್‌ ಮಾಡ್ತಾರೆ. ಇನ್ನು ಪ್ರೇಮದ ಹೆಸರಿನಲ್ಲಿ ನಡೆಯುವ ಅನಾಚಾರ ಮೊದಲೂ ಇತ್ತು. ಈಗ ಸೋಷಲ್‌ ಮೀಡಿಯಾಗಳ ಅಬ್ಬರದಿಂದ ಮುನ್ನೆಲೆಗೆ ಬರುತ್ತಿವೆ.

- ನಂಗೆ ಈ ಸಿನಿಮಾದಲ್ಲಿ ನಿರ್ದೇಶಕ ಸುಪ್ರೀತ್ ಮೊದಲ ಸಲ ಒಬ್ಬ ಹುಡುಗೀನ ಹೇಗೆ ತಬ್ಕೋಬೇಕು ಅಂತ ಹೇಳ್ಕೊಟ್ರು. ಲುಕ್‌ ಹೇಗಿರಬೇಕು ಅನ್ನೋದನ್ನೆಲ್ಲ ತಿಳಿಸಿದರು. ನನ್ನ 40 ವರ್ಷದ ಸರ್ವೀಸಲ್ಲಿ ಹುಡುಗೀನ ತಬ್ಕೊಳ್ಳೋದನ್ನು ಕಲಿಸಿದ ಡೈರೆಕ್ಟರ್ ಇವರೇ! ಇವತ್ತಿನ ಹುಡುಗರು ಪ್ರೀತಿ ಮಾಡೋ ಸ್ಟೈಲ್‌ ಬೇರೆ ಇರಬಹುದು. ನನಗೆ ಆ ಪ್ರೀತಿ ಗೊತ್ತಿಲ್ವಲ್ಲಾ.

- ಪ್ಯಾರ್‌ ಸಿನಿಮಾದಲ್ಲಿ ರವಿಚಂದ್ರನ್‌ ಅನ್ನು ಪ್ಯಾರ್ ಮಾಡೋರೆ ಇಲ್ಲ. ಇದರಲ್ಲಿ ನಂಗೆ ವಯಸ್ಸಿಗೆ ಬಂದಿರೋ ಮಗಳನ್ನ ಕೊಟ್ಟಿದ್ದಾರೆ. ಮಗಳ ಜೊತೆ ಪ್ಯಾರ್ ಇದೆ. ಬೇರೆ ಪ್ಯಾರನ್ನು ಮೊದಲೇ ಸಾಯಿಸಿಬಿಟ್ಟಿದ್ದಾರೆ. ನಿರ್ಮಾಪಕರು ಹಠ ಮಾಡಿ ಈ ಸಿನಿಮಾಕ್ಕೆ ನನ್ನನ್ನು ಕರೆದುಕೊಂಡು ಬಂದಿದ್ದಾರೆ. ಬಂದಮೇಲೆ ಈ ಚಿತ್ರತಂಡದ ಭಾಗವಾಗಿದ್ದೇನೆ. ನನ್ನಿಂದ ಕಥೆಗೆ ಬೇಕಾದ್ದನ್ನು ತೆಗೆಸೋದು ಅವರಿಗೆ ಬಿಟ್ಟಿದ್ದು. - ನನ್ನ ಹೊಸ ಸಿನಿಮಾದಲ್ಲಿ 22 ಹಾಡುಗಳಿವೆ. ‘ಪ್ರೇಮಲೋಕ’ ಎಂಬ ಟೈಟಲ್‌ ಇಲ್ಲದೇ ಇದ್ರೂ ಅದನ್ನು ಮೀರಿಸುವಂತೆ ಸಿನಿಮಾ ತೆಗೀತಿದ್ದೀನಿ. ಈಗಾಗಲೇ 150 ದಿನಗಳ ಶೂಟಿಂಗ್‌ ಆಗಿದೆ. ಇನ್ನೂ 50 ದಿನದ ಚಿತ್ರೀಕರಣ ಬಾಕಿ ಇದೆ. ಈ ಸಿನಿಮಾ ಕೆಲಸ 95 ಪರ್ಸೆಂಟ್‌ ಆದಮೇಲೆ ಆ ಬಗ್ಗೆ ಹೇಳ್ತೀನಿ. ನನ್ನ 40 ವರ್ಷದ ಸಿನಿಮಾ ಕೆರಿಯರ್‌ನಲ್ಲಿ ಯಾವತ್ತೂ ಸಿನಿಮಾ ರಿಲೀಸ್‌ ಮೊದಲೇ ಸಿನಿಮಾ ಆ ಥರ ಮಾಡಿದ್ದೀನಿ, ಈ ಥರ ಮಾಡಿದ್ದೀನಿ ಅಂತೆಲ್ಲ ಬಿಲ್ಡಪ್‌ ಕೊಟ್ಟಿಲ್ಲ. ನೇರ ಪರದೆಯಲ್ಲೇ ಜನರಿಗೆ ಮುಖಾಮುಖಿ ಆಗಿರೋದು. ಜನ ಪರದೆಯಲ್ಲಿ ನಮ್ಮ ಸಿನಿಮಾ ನೋಡಿಕೊಂಡು ಆ ಬಗ್ಗೆ ಮಾತನಾಡ್ತಿದ್ರು. ಆದರೆ ಈಗ ಇದೆಲ್ಲ ನಡೆಯಲ್ಲ. ಆದರೂ ಯಾವತ್ತಿಗೂ ಪರದೆ ಮೇಲೆ ಹೇಗೆ ಚಿತ್ರ ಪ್ರೆಸೆಂಟ್‌ ಮಾಡ್ತೀವಿ ಅನ್ನೋದೇ ಬಹುಮುಖ್ಯ.

ಬಾಕ್ಸ್‌

ತಂದೆಗಾಗಿ ಬದುಕು ಮುಡಿಪಾಗಿಡುವ ಮಗಳ ಕಥೆ : ಸುಪ್ರೀತ್‌

‘ತಂದೆಗಾಗಿ ತನ್ನ ಪ್ರೇಮವನ್ನು ಮುಡಿಪಾಗಿಡುವ ಮಗಳ ಕತೆಯನ್ನು ಈ ಸಿನಿಮಾದಲ್ಲಿ ಹೇಳಿದ್ದೀವಿ. ಶೇ.80ರಷ್ಟು ಶೂಟಿಂಗ್‌ ಮುಗಿದಿದೆ’ ಎಂದು ನಿರ್ದೇಶಕ ಸುಪ್ರೀತ್‌ ಹೇಳಿದ್ದಾರೆ.

ನಾಯಕ ಭರತ್‌ ಹೀರೋ ಆಗುವ ತನ್ನ ಬಹುದಿನದ ಕನಸು ಈಡೇರಿದ ಖುಷಿಯಲ್ಲಿದ್ದರು. ನಾಯಕಿ ರಾಶಿಕಾ, ‘ಈವೆಂಟ್‌ನಲ್ಲಿ ನನ್ನನ್ನು ನೋಡಿದ ನಿರ್ಮಾಪಕರು ಈ ಸಿನಿಮಾಕ್ಕೆ ಆಯ್ಕೆ ಮಾಡಿದರು’ ಎಂದರು.

ನಿರ್ಮಾಪಕಿ ನಾಗಶ್ರೀ ಕಾರ್ಯಕ್ರಮದಲ್ಲಿದ್ದರು.