ವಿಜಯ್‌ ರಾಘವೇಂದ್ರ ನಟನೆ ವಿಜೃಂಭಣೆ

| N/A | Published : Aug 30 2025, 01:54 PM IST

Vijay Raghavendra

ಸಾರಾಂಶ

ಒಮ್ಮೆಯೂ ನಗದ, ಯಾರಿಗೂ ಅಂಜದ, ಒಬ್ಬರಿಗೂ ಕರುಣೆ ತೋರದ, ಆಗದವರು ಯಾರೇ ಆದರೂ ಸದೆಬಡಿಯುವ, ಹಸಿ ಮಾಂಸವನ್ನು ಭಕ್ಷಿಸುವ, ಕಣ್ಣಲ್ಲೇ ರಕ್ತ ಹೀರುವ, ಘನಗಂಭೀರ ಪಾತ್ರವನ್ನು ವಿಜಯ ರಾಘವೇಂದ್ರ ಅವರು ನಿಭಾಯಿಸಿರುವ ರೀತಿಯೇ ಈ ಸಿನಿಮಾದ ಆಧಾರ

ರಿಪ್ಪನ್ ಸ್ವಾಮಿ

ನಿರ್ದೇಶನ: ಕಿಶೋರ್ ಮೂಡುಬಿದಿರೆ

ತಾರಾಗಣ: ವಿಜಯ ರಾಘವೇಂದ್ರ, ಅಶ್ವಿನಿ ಚಂದ್ರಶೇಖರ್‌, ಪ್ರಕಾಶ್‌ ತುಮಿನಾಡು, ವಜ್ರಧೀರ್ ಜೈನ್

ರೇಟಿಂಗ್: 3

ರಾಜೇಶ್ ಶೆಟ್ಟಿ

ಒಮ್ಮೆಯೂ ನಗದ, ಯಾರಿಗೂ ಅಂಜದ, ಒಬ್ಬರಿಗೂ ಕರುಣೆ ತೋರದ, ಆಗದವರು ಯಾರೇ ಆದರೂ ಸದೆಬಡಿಯುವ, ಹಸಿ ಮಾಂಸವನ್ನು ಭಕ್ಷಿಸುವ, ಕಣ್ಣಲ್ಲೇ ರಕ್ತ ಹೀರುವ, ಘನಗಂಭೀರ ಪಾತ್ರವನ್ನು ವಿಜಯ ರಾಘವೇಂದ್ರ ಅವರು ನಿಭಾಯಿಸಿರುವ ರೀತಿಯೇ ಈ ಸಿನಿಮಾದ ಆಧಾರ. ಈ ಸಿನಿಮಾದಲ್ಲಿ ವಿಜಯ್‌ ರಾಘವೇಂದ್ರ ನಟಿಸಿದ್ದಾರೆ ಅನ್ನುವುದಕ್ಕಿಂತ ವಿಜೃಂಭಿಸಿದ್ದಾರೆ. ಅಲ್ಲದೇ ಇಂಥದ್ದೊಂದು ಪಾತ್ರದಲ್ಲಿ ನಟಿಸುವ ಧೈರ್ಯ ತೋರಿರುವುದಕ್ಕೆ ಅವರು ನಿಜಕ್ಕೂ ಅಭಿನಂದನಾರ್ಹರು.

ಸಿನಿಮಾ ನಾಯಕ ಎಂದರೆ ಒಳ್ಳೆಯವನೇ ಆಗಿರಬೇಕು ಎಂಬ ಸಿದ್ಧಸೂತ್ರವನ್ನು ಈ ಸಿನಿಮಾ ಒಡೆದು ಹಾಕಿದೆ. ಇಲ್ಲಿ ಒಳ್ಳೆಯದು, ಕೆಟ್ಟದ್ದು ಅನ್ನುವುದು ಪರಿಸ್ಥಿತಿಗೆ ಬಿಟ್ಟಿದ್ದು. ಅವರವರಿಗೆ ಎದುರಾಗುವ ಪರಿಸ್ಥಿತಿಗೆ ತಕ್ಕಂತೆ ಇಲ್ಲಿ ಒಳ್ಳೆಯತನ, ಕೆಟ್ಟತನ ಪ್ರಕಟವಾಗುತ್ತಾ ಹೋಗುತ್ತದೆ. ಅಷ್ಟರ ಮಟ್ಟಿಗೆ ಇದೊಂದು ಬರಹಗಾರನ ಸಿನಿಮಾ.

ಹಸಿರು ತುಂಬಿರುವ ದಟ್ಟ ಕಾಡಿನಂಥಾ ಊರಿನಲ್ಲಿ ನಡೆಯುವ ಕತೆ ಇದು. ಒಂದು ಸಾವಿನಿಂದ ಕತೆ ಆರಂಭವಾಗುತ್ತದೆ. ಆ ಸಾವು ಏಕಾಯಿತು, ಹೇಗಾಯಿತು ಎಂಬುದನ್ನು ಬಿಡಿಸುತ್ತಾ ಕತೆ ಸಾಗುತ್ತದೆ. ಅಲ್ಲಿಂದ ಮುಂದೆ ಮನುಷ್ಯನ ಸಣ್ಣತನಗಳ ಪರಿಚಯ, ಬಾಲ್ಯದ ಗಾಯ, ದ್ರೋಹದ ಕ್ರೌರ್ಯ ಒಂದೊಂದಾಗಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಒಂದೊಂದೇ ತಿರುವುಗಳನ್ನಿಟ್ಟಿರುವ ನಿರ್ದೇಶಕರು ಅಂತಿಮವಾಗಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆದು ಕೊನೆಯ ದಾಳ ಉರುಳಿಸುತ್ತಾರೆ

ಸಿನಿಮಾ ವಿಭಿನ್ನವಾಗಿ ಮೂಡಿಬಂದಿದೆ. ಆದರೆ ಪಾತ್ರಗಳ ಆಳವನ್ನು, ಘಟನೆಗಳ ತೀವ್ರತೆಯನ್ನು ಕಟ್ಟಿಕೊಡುವಲ್ಲಿ ಗಾಢತೆ ಪ್ರಾಪ್ತವಾಗಿಲ್ಲ. ಮೇಲು ಮೇಲಕ್ಕೆ ಕತೆ ನಡೆಯುತ್ತಿರುವಂತೆ ಭಾಸವಾಗುತ್ತದೆ. ಅದರ ಹೊರತಾಗಿ ಇದೊಂದು ವಿಶಿಷ್ಟ ಮಾದರಿಯ, ವಿಭಿನ್ನ ದಾರಿಯ ಸಿನಿಮಾ. ಅದಕ್ಕಾಗಿ ತಂಡಕ್ಕೆ ಮೆಚ್ಚುಗೆ.

Read more Articles on